ಕರ್ನಾಟಕ

karnataka

3D Printed Post Office: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

By

Published : Aug 18, 2023, 4:15 PM IST

Updated : Aug 18, 2023, 11:00 PM IST

India's first 3d Printed Post Office: ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಮೂಲಕ ಇಂದು ಉದ್ಘಾಟಿಸಿದ್ದಾರೆ.

3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ
3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

ಬೆಂಗಳೂರು: 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿ ಇಂದು ಉಧ್ಘಾಟನೆ ಮಾಡಿದರು. ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಇದಾಗಿದ್ದು ನೂತನ ತಂತ್ರಜ್ಞಾನಕ್ಕೆ ನಾಂದಿಹಾಡಲಾಯಿತು. ಎಲ್&ಟಿ ಮೂಲಕ ಈ ಅಂಚೆ ಕಚೇರಿಯನ್ನು ನಿರ್ಮಾಣ ಮಾಡಲಾಗಿದ್ದು ಐಐಟಿ ಚೆನ್ನೈ ಪ್ರಸ್ತುತ ಯೋಜನೆಯಲ್ಲಿ ತಾಂತ್ರಿಕ ಮಾರ್ಗದರ್ಶನ ಒದಗಿಸಿದೆ. ಒಟ್ಟು 1021 ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ಈ ಕಟ್ಟವನ್ನು 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದ ಸಹಾಯದಿಂದ ನಿರ್ಮಾಣ ಮಾಡಿರುವುದು ವಿಶೇಷ.

ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು, ಇದರಲ್ಲಿ ರೊಬೊಟಿಕ್ ಪ್ರಿಂಟರ್ ಅನುಮೋದನೆ ನೀಡಿರುವ ವಿನ್ಯಾಸದ ಪ್ರಕಾರ ವಿಶೇಷ ದರ್ಜೆಯ ಕಾಂಕ್ರೀಟ್ ಅನ್ನು ಲೇಯರ್-ಬೈ-ಲೇಯರ್ ಜೋಡಿಸುತ್ತಾ ಹೋಗುತ್ತದೆ. ಪದರಗಳ ನಡುವಿನ ಬಂಧವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ ಗಟ್ಟಿಯಾಗುವ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿ 6ರಿಂದ 8 ತಿಂಗಳು ತೆಗೆದುಕೊಳ್ಳುವ ನಿರ್ಮಾಣ ಚಟುವಟಿಕೆಗಳನ್ನು ಈ ಮೂಲಕ ಕೇವಲ 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ವೆಚ್ಚ ಮತ್ತು ಸಮಯದ ಉಳಿತಾಯದಿಂದ ಈ 3ಡಿ-ಕಾಂಕ್ರೀಟ್ ಮುದ್ರಣ ತಂತ್ರಜ್ಞಾನವು ಸಾಂಪ್ರದಾಯಿಕ ಕಟ್ಟಡ ಪದ್ಧತಿಗಳಿಗೆ ಪರ್ಯಾಯವಾಗಿ ರೂಪುಗೊಂಡಿದೆ.

3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

ವರ್ಚುವಲ್ ಮೂಲಕ ಕಟ್ಟಡ ಉಧ್ಘಾಟನೆ ಮಾಡಿದ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಭಾರತ ದೇಶವು ಸ್ಥಳೀಯ ಸೊಗಡಿನೊಂದಿಗೆ ತಂತ್ರಜ್ಞಾನ ನಾವೀನ್ಯತೆಯಲ್ಲಿ ದಾಪುಗಾಲು ಹಾಕುತ್ತಿದೆ. ಅಗತ್ಯವಾದ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರವು, ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಹೊಸ ಆವಿಷ್ಕಾರಗಳಿಗೆ ಪ್ರೇರೇಪಿಸಲು ಬದ್ಧ ಎಂದು ನುಡಿದರು.

ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಲಿಕಾಂ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ದೇಶವು ದೇಶೀಯವಾಗಿ 4ಜಿ ಮತ್ತು 5ಜಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ವಂದೇ ಭಾರತ್ ಅಂತಹ ವಿಶ್ವದರ್ಜೆಯ ರೈಲುಗಳನ್ನು ವಿನ್ಯಾಸಗೊಳಿಸಬಹುದು ಮತ್ತು ತಯಾರಿಸಬಹುದು ಎಂದು ಭಾರತ ಸಾಬೀತುಪಡಿಸಿದೆ ಎಂದು ತಿಳಿಸಿದರು.

3ಡಿ ಮುದ್ರಣವು ಈಗ ನವೋದ್ಯಮಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಪ್ರಾತ್ಯಕ್ಷಿಕೆ ತಂತ್ರಜ್ಞಾನ. ಇದು ವೆಚ್ಚ ಉಳಿತಾಯದ, ಪರಿಸರಸ್ನೇಹಿ ಮತ್ತು ಆತ್ಮನಿರ್ಭರ ಭಾರತ್ ಪರಿಕಲ್ಪನೆಯನ್ನು ತಿಳಿಸುತ್ತದೆ ಎಂದು ವಿವರಿಸಿದರು.

3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ

ನಗರದ ಕೇಂಬ್ರಿಡ್ಜ್ ಲೇಔಟ್​ನಲ್ಲಿರುವ ಹೊಸ ಅಂಚೆ ಕಚೇರಿ ಕಟ್ಟಡವನ್ನು ಐಐಟಿ ಮದ್ರಾಸ್ ಮತ್ತು ʻಲಾರ್ಸನ್ ಮತ್ತು ಟುಟ್ರೋ ಲಿಮಿಟೆಡ್‌ನ (ಎಲ್&ಟಿ) ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಮಾದರಿ ಯೋಜನೆಯ ಕಿರು ವಿಡಿಯೊವನ್ನು ಸಹ ಪ್ರಸಾರ ಮಾಡಲಾಯಿತು. ಬಳಿಕ ಸಚಿವರು 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡದ ಮೇಲೆ ವಿಶೇಷ ಕವರ್ ಬಿಡುಗಡೆ ಮಾಡಿದರು. ಅದರ ಪ್ರತಿಕೃತಿ ಅನಾವರಣಗೊಳಿಸಿದರು.

ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ರಾಜೇಂದ್ರ ಕುಮಾರ್ ತಮ್ಮ ಪರಿಚಯಾತ್ಮಕ ಭಾಷಣದಲ್ಲಿ ತಂತ್ರಜ್ಞಾನ ಆಧಾರಿತ 3ಡಿ ಮುದ್ರಿತ ಅಂಚೆ ಕಚೇರಿಯ ಉದ್ದೇಶಗಳನ್ನು ವಿವರಿಸಿದರು. ಐಐಟಿ ಮದ್ರಾಸ್​ನ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ. ಮನು ಸಂತಾನಮ್ 3ಡಿ ಮುದ್ರಿತ ಅಂಚೆ ಕಚೇರಿ ನಿರ್ಮಾಣದ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು. ಸಂಸದರಾದ ಪಿ.ಸಿ.ಮೋಹನ್ ಮತ್ತು ಸದಾನಂದ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಮಾಧ್ಯಮ ಪ್ರತಿಕ್ರಿಯೆ: ಹೊರಗಡೆ ಸೇರಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಉಪ-ನಗರ ರೈಲು ಸೇವೆಯನ್ನು ಪ್ರಾರಂಭಿಸುವ ಕೇಂದ್ರ ಸರ್ಕಾರದ ಬದ್ಧತೆ ಹಾಗೆಯೇ ಉಳಿದಿದೆ. ಶರವೇಗದ ರೈಲುಗಳ ಓಡಾಟಕ್ಕಾಗಿ 4000 ಕಿ.ಮೀ ರೈಲ್ವೆ ಹಳಿಗಳನ್ನು ನವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡಲು ಹಳಿಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ-2023 ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಇದು ಸಮಾಜದ ಎಲ್ಲಾ ವಿಭಾಗಗಳನ್ನು ಒಳಗೊಂಡ ಸಮತಲ ಕಾಯ್ದೆಯಾಗಿದೆ. ತಜ್ಞರು ಸೇರಿದಂತೆ ಹಲವರ ಜೊತೆ ವ್ಯಾಪಕವಾದ ಸಮಾಲೋಚಯ ನಂತರ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

23 ಲಕ್ಷ ರೂ. ವೆಚ್ಚ: ಅಲ್ಪ ಅವಧಿಯಲ್ಲಿಯೇ ಕೇವಲ 23 ಲಕ್ಷ ರೂ.ಗಳಲ್ಲಿ ಈ 3ಡಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಗೊಂಡಿದೆ ಎಂದು ಭಾರತೀಯ ಅಂಚೆ ಇಲಾಖೆಯ ನಿರ್ದೇಶಕ ಪಿ.ಸಿ.ಮೋಹನ ರಾವ್ ಮಾಹಿತಿ ನೀಡಿದ್ದಾರೆ. ಇನ್ನು ಈ ಕಟ್ಟಡ ಉದ್ಘಾಟನೆಗಾಗಲಿ, ವೇಗದೂತ್‌ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕಾಗಲಿ ಸ್ಥಳೀಯ ಶಾಸಕ ಹ್ಯಾರೀಸ್‌ ಅವರನ್ನು ಕರೆಯದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಹ್ಯಾರೀಸ್‌ ಅಭಿಮಾನಿಗಳು ಪ್ರತಿಭಟನೆ ಕೂಡ ನಡೆಸಿದರು. ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿರುವವರನ್ನು ಕರೆಯದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರಧಾನಿ ಮೋದಿ ಮೆಚ್ಚುಗೆ:ಬೆಂಗಳೂರಿನ ಕೇಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣಗೊಂಡ ದೇಶದ ಪ್ರಥಮ 3ಡಿ ಪ್ರಿಂಟೆಡ್‌ ಪೋಸ್ಟ್‌ ಆಫೀಸ್ ದೇಶದ ಜನರಿಗೆ ಹೆಮ್ಮೆಯ ವಿಚಾರವಾಗಲಿದೆ. ದೇಶದ ಸೃಜನಶೀಲತೆ ಮತ್ತು ಅಭಿವೃದ್ಧಿಗೆ ಇದೊಂದು ಉದಾಹರಣೆ. ಅಷ್ಟೇ ಅಲ್ಲ, ಇದು ದೇಶ ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿರುವುದರ ಕುರುಹು. ಇಂಥ ಪೋಸ್ಟ್‌ ಆಫೀಸ್ ನಿರ್ಮಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಮೆಚ್ಚುಗೆ ತಿಳಿಸಿದ್ದಾರೆ.

ಇದನ್ನೂ ಓದಿ:Modi: ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಪ್ರತಿ ಗ್ರಾಮವನ್ನೂ ಅಭಿವೃದ್ಧಿಪಡಿಸಿ- ಪ್ರಧಾನಿ ಮೋದಿ ಕರೆ

Last Updated : Aug 18, 2023, 11:00 PM IST

ABOUT THE AUTHOR

...view details