ಕರ್ನಾಟಕ

karnataka

ಜ.31ಕ್ಕೆ ಗೋವಿಂದರಾಜ ನಗರದ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆ: ಯುಪಿ ಸಿಎಂ ಭಾಗಿ

By

Published : Jan 11, 2023, 7:29 PM IST

ಬೆಂಗಳೂರಿನ ಗೋವಿಂದರಾಜನಗರ ವಾರ್ಡ್ ಪ್ರದೇಶದಲ್ಲಿ 300 ಹಾಸಿಗೆಗಳ ಹೈಟೆಕ್ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. 300 ಹಾಸಿಗೆಗಳ ಈ ಆಸ್ಪತ್ರೆ ಜ.31 ರಂದು ಉದ್ಘಾಟನೆಯಾಗಲಿದೆ.

ಜ.31ಕ್ಕೆ ಗೋವಿಂದರಾಜನಗರದ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆ: ಯುಪಿ ಸಿಎಂ ಭಾಗಿ
inauguration-of-govindarajanagar-hi-tech-hospital-on-january-31-up-cm-participates

ಬೆಂಗಳೂರು: ಅಗ್ರಹಾರ ದಾಸರಹಳ್ಳಿ ವಾರ್ಡ್ ವ್ಯಾಪ್ತಿಯ ಎಂ.ಸಿ‌. ಬಡಾವಣೆಯಲ್ಲಿ ನಿರ್ಮಾಣವಾಗಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆಗೆ ಆಗಮಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಪ್ಪಿಕೊಂಡಿದ್ದು, ಜನವರಿ 31 ರಂದು ಯುಪಿ ಸಿಎಂ ಬೆಂಗಳೂರಿಗೆ ಆಗಮಿಸಿ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಸ್ವಾಮೀಜಿ, ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಪರಿವೀಕ್ಷಣೆ ನಡೆಸಿದರು. 4 ಅಂತಸ್ತಿನ ಕಟ್ಟಡವನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7 ಆಪರೇಷನ್ ಥಿಯೇಟರ್, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಕಿಶೋರ ಸ್ವಾಸ್ಥ್ಯ ಕೇಂದ್ರ, ಹೃದ್ರೋಗ ತಪಾಸಣೆ (ಕಾರ್ಡಿಯಾಲಜಿ), ಫಿಜಿಯೋಥೆರಪಿ, ದಂತ ಒಪಿಡಿ, ನೇತ್ರ, ಕಿವಿ, ಮೂಗು, ಗಂಟಲು ತಪಾಸಣೆ, ಮೂಳೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಟೆಲಿ ರೋಬೋಟ್ ಮತ್ತು ಟೆಲಿ ಮೆಡಿಸಿನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಡೀ ಆಸ್ಪತ್ರೆಯನ್ನು ಸಂಪೂರ್ಣವಾಗಿ ವೀಕ್ಷಿಸಿದ ನಿರ್ಮಲಾನಂದ ಶ್ರೀಗಳು ಜನಸಾಮಾನ್ಯರಿಗಾಗಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಗೋವಿಂದರಾಜನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ:ಈ ವೇಳೆ, ಮಾತನಾಡಿದ ಸಚಿವ ವಿ. ಸೋಮಣ್ಣ, ಬಡವರಿಗೆ, ಸಾಮಾನ್ಯ ವರ್ಗದ ಜನರಿಗೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. 1988 - 89ರ ಸುಮಾರಿನಲ್ಲಿ ಈ ಸ್ಥಳದಲ್ಲಿ ರೆಫರಲ್ ಆಸ್ಪತ್ರೆಯಿತ್ತು, ಆದಿಚುಂಚನಗಿರಿ ಪೀಠದ ಹಿಂದಿನ ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಭೇಟಿ ನೀಡಿದ್ದ ವೇಳೆ ಸಣ್ಣ ಆಸ್ಪತ್ರೆ ಬದಲು ಇಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಬಹುದಿತ್ತು ಎಂಬ ಮಾತನ್ನು ಹೇಳಿದ್ದರು.

ಅವರ ಅನೇಕ ಚಿಂತನೆ, ಅವರ ಆಶೀರ್ವಾದದಿಂದ ಈ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗಿದೆ. ಹೀಗಾಗಿ 300 ಹಾಸಿಗೆಗಳ ಆಸ್ಪತ್ರೆಯನ್ನು ಜನವರಿ 31 ರಂದು ಸಂಜೆ 5 ಗಂಟೆಗೆ ಲೋಕಾರ್ಪಣೆ ಮಾಡಲು ತೀರ್ಮಾನಿಸಿದ್ದೇವೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಆಸ್ಪತ್ರೆ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅಧಿಕಾರಿಗಳ ಸಭೆ:ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕುರಿತು ಸಚಿವ ವಿ. ಸೋಮಣ್ಣ ಪೂರ್ವಭಾವಿ ಸಭೆ ನಡೆಸಿದರು. ಮಾಗಡಿ ರಸ್ತೆ ಪೊಲೀಸ್ ಠಾಣೆಯ ನೂತನ ಕಟ್ಟಡ, ಮಾಗಡಿ ರಸ್ತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ, ಪಶ್ಚಿಮ ಕಾರ್ಡ್ ರಸ್ತೆಯ ಮೇಲ್ಸೇತುವೆ, ಡಾ ಬಿ.ಆರ್. ಅಂಬೇಡ್ಕರ್ ನವೀಕೃತ ಕ್ರೀಡಾಂಗಣ ಹಾಗೂ ಅಗ್ರಹಾರ ದಾಸರಹಳ್ಳಿ ವಾರ್ಡ್ ವ್ಯಾಪ್ತಿಯ ಎಂ.ಸಿ‌. ಬಡಾವಣೆಯಲ್ಲಿ ನಿರ್ಮಾಣವಾಗಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಿದ್ದೆವು. ಹೈಟೆಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜಾಗಿದ್ದು ಜನವರಿ 31 ರಂದು ಲೋಕಾರ್ಪಣೆಗೊಳ್ಳಲಿದ್ದು, ಜನಸೇವೆಗೆ ಸಮರ್ಪಣೆಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿ ವರ್ಗದವರೂ ಸಹ ಕಾರ್ಯಪ್ರವೃತ್ತರಾಗಿ ಶೀಘ್ರವೇ ತಮ್ಮತಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದರೆ, ಜನರಿಗೂ ಅನುಕೂಲವಾಗುತ್ತದೆ.

ಜನಪ್ರತಿನಿಧಿಗಳು ಕೈಗೊಂಡ ಕಾರ್ಯಗಳು ಸಾರ್ಥಕವೆನಿಸುತ್ತದೆ ಎಂದು ಸಲಹೆ ನೀಡಿದರು. ಇದೇ ವೇಳೆ, ಪಶ್ಚಿಮ ಕಾರ್ಡ್ ರಸ್ತೆಯ ಮೇಲ್ಸೇತುವೆ ವಿಚಾರ ಪ್ರಸ್ತಾಪಿಸಿದ ಸಚಿವರು ಸೇತುವೆ ಅಡಿಯಲ್ಲಿ ಸ್ವಚ್ಛತಾಕಾರ್ಯ ಕೈಗೊಂಡು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:'ಮೋದಿ ಅವರ ದಿಟ್ಟ ನಾಯಕತ್ವದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡುತ್ತಿದೆ'

ABOUT THE AUTHOR

...view details