ಕರ್ನಾಟಕ

karnataka

ಕೆಲಸವಿಲ್ಲದಿದ್ದರೆ ಕೆಲಸ ಹುಡುಕಿ ಪತಿಯು ಪತ್ನಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್ ಆದೇಶ

By

Published : Feb 14, 2023, 6:59 AM IST

Updated : Feb 15, 2023, 7:49 PM IST

ಪತ್ನಿ ಹಾಗೂ ಮಗುವಿಗೆ ಜೀವನಾಂಶ ಕೊಡಲು ಕೆಲಸವಿಲ್ಲದಿದ್ದರು ಕೆಲಸ ಹುಡುಕಿ ನೀಡಬೇಕು- ಹೈಕೋರ್ಟ್​ ಆದೇಶ

High Court order
ಹೈಕೋರ್ಟ್ ಆದೇಶ

ಬೆಂಗಳೂರು :ಪತಿಯಾದವರು ಪತ್ನಿ ಮತ್ತು ಮಗುವಿಗೆ ಜೀವನಾಂಶ ನೀಡುವುದು ಕರ್ತವ್ಯವಾಗಿದೆ. ಹಾಗಾಗಿ ಪತಿಗೆ ಯಾವುದೇ ಕೆಲಸವಿಲ್ಲದಿದ್ದರೆ, ಕೆಲಸ ಹುಡುಕಿಕೊಂಡು ದುಡಿದು ಜೀವನಾಂಶ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತೊಯೊಬ್ಬರು ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಅರ್ಜಿ ವಜಾಗೊಳಿಸಿ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು ಹಲವು ಕಾಯಿಲೆಗಳಿಂದ ನರಳುತ್ತಿದ್ದಾರೆ. ಸರಿಯಾದ ಉದ್ಯೋಗವಿಲ್ಲ, ತಿಂಗಳಿಗೆ ಎಷ್ಟೇ ಕಷ್ಟಪಟ್ಟರೂ 15 ಸಾವಿರಕ್ಕಿಂತ ಹೆಚ್ಚು ದುಡಿಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೀವನಾಂಶ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು.

ಪತ್ನಿ ಮತ್ತು ಮಗುವಿಗೆ ಜೀವನಾಂಶ :ಈ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಪತಿಗೆ 10 ಸಾವಿರ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಲಾಗದು. ದುಡಿಯಲು ಸಮರ್ಥನಿರುವ ಪತಿಗೆ ಉದ್ಯೋಗವಿಲ್ಲದಿದ್ದರೆ ಬೇರೆ ಉದ್ಯೋಗವನ್ನು ಹುಡುಕಿಕೊಂಡು ದುಡಿದು ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡಲೇಬೇಕು ಎಂದು ಆದೇಶಿಸಿದೆ. ಅಲ್ಲದೆ, ಪತ್ನಿಗೆ 6000 ಮತ್ತು ಮಗುವಿಗೆ 4000 ಜೀವನಾಂಶ ನೀಡಲು ಪತಿಗೆ ಸೂಚನೆ ನೀಡಿದೆ.

ಪತಿ ಮತ್ತು ಮಗುವಿಗೆ 10 ಸಾವಿರ ರೂ. ಜೀವನಾಂಶ ನೀಡಬೇಕೆನ್ನುವುದು ದುಬಾರಿ ಏನಲ್ಲ, ಅಷ್ಟು ಹಣ ಹೊಂದಿಸಲಾಗದು ಎಂಬ ಪತಿಯ ವಾದ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದೇ ಆಗಿದೆ. ಅಲ್ಲದೆ, ಪತಿ ತಾನೂ ಯಕೃತ್ ಸಂಬಂಧಿ ರೋಗದಿಂದ ಬಳಲುತ್ತಿದ್ದೇನೆ ಎಂದು ಹೇಳುತ್ತಿರುವುದಕ್ಕೆ ಪುಷ್ಟಿ ನೀಡುವ ಯಾವುದೇ ದಾಖಲೆಯನ್ನು ಒದಗಿಸಿಲ್ಲ. ಹಾಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡಲೇಬೇಕು ಎಂದು ನ್ಯಾಯಪೀಠ ಆದೇಶ ಹೊರಡಿಸಿದೆ.

ಕಂದಾಯ ದಾಖಲೆಗಳು ಎಷ್ಟು ದಿನ ಸಂಗ್ರಹಿಸಿಡಬೇಕು ? ಸರ್ಕಾರವನ್ನು ಪ್ರಶ್ನಿಸಿದ ಹೈಕೋರ್ಟ್..ಮತ್ತೊಂದು ಪ್ರಕರಣದಲ್ಲಿಭೂಸ್ವಾಧೀನ ಪ್ರಕರಣಗಳ ಕಂದಾಯ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಥವಾ ರಾಜ್ಯ ಸರ್ಕಾರ ಎಷ್ಟು ದಿನಗಳವರೆಗೂ ಕಾಪಾಡಬೇಕು ಎಂಬುದಕ್ಕೆ ಇರುವ ನಿಯಮಾವಳಿಗಳೇನು ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಭೂಸ್ವಾಧೀನ ಪ್ರಕರಣದ ಪರಿಹಾರ ನೀಡಿಕೆಗೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಬೆಂಗಳೂರಿನ ಹೆಬ್ಬಾಳದ ಜನಾರ್ದನ ಎಂಬುವರು ಸೇರಿದಂತೆ ಒಟ್ಟು ಏಳು ಜನರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಸರ್ಕಾರವನ್ನು ಮಾಹಿತಿ ಕೇಳಿದೆ. ವಿಚಾರಣೆ ವೇಳೆ ಬಿಡಿಎ ಪರ ವಕೀಲರು, ಪ್ರಕರಣದಲ್ಲಿನ ಕೆಲವು ದಾಖಲೆಗಳು ಸಿಐಟಿಬಿ ಕಾಲದವು. ಈಗ ಅದು ಬಿಡಿಎ ಆಗಿದೆ. ಹೀಗಾಗಿ ಸುದೀರ್ಘ ಅವಧಿಯ ದಾಖಲೆಗಳು ಈಗ ಲಭ್ಯವಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಅನುಮೋದಿಸಿದ ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ನೀವು ಹೀಗೆಲ್ಲಾ, 1959 ರ ದಾಖಲೆ , ಜೌರಂಗಜೇಬನ ಕಾಲದ ದಾಖಲೆ ಎಂದು ಸಬೂಬು ಹೇಳಿಕೊಂಡು ಬಂದರೆ ಲಕ್ಷಾಂತರ ವ್ಯಾಜ್ಯಗಳಿಗೆ ಕೋರ್ಟಿನ ಹೆಬ್ಬಾಗಿಲು ತೆರೆದಂತೆ ಆಗುತ್ತದೆ. ಸರ್ಕಾರವಾಗಲಿ ಅಥವಾ ಯಾವುದೇ ಪ್ರಾಧಿಕಾರಗಳಾಗಲೀ ತುಂಬಾ ಹಳೆಯ ದಸ್ತಾವೇಜುಗಳನ್ನು ಕಾಪಾಡುವುದು ಸುಲಭದ ಮಾತಲ್ಲ ಎಂದು ತಿಳಿಸಿತು.

ಬಳಿಕ ವಿಚಾರಣೆ ಮುಂದುವರಿಸಿದ ಪೀಠ ಹಳೆಯ ದಾಖಲೆಗಳನ್ನು ಸರ್ಕಾರವಾಗಲಿ ಅಥವಾ ಪ್ರಾಧಿಕಾರಗಳಾಗಲಿ ಎಷ್ಟು ಅವಧಿಯವರೆಗೆ ಸಂಗ್ರಹಿಸಿ ಇಟ್ಟುಕೊಂಡಿರಬೇಕು. ಇದರ ಕಡ್ಡಾಯ ನಿಯಮಗಳು ಅಥವಾ ಕಾನೂನುಗಳೇನು ಎಂಬುದನ್ನು ತಿಳಿಸಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು.

ಇದನ್ನೂ ಓದಿ :ನಿವೃತ್ತ ಐಎಎಸ್ ಅಧಿಕಾರಿ ಮನೆಯಿಂದ ವಶಪಡಿಸಿಕೊಂಡಿದ್ದ ಹಣ ಹಿಂದಿರುಗಿಸಿ : ಹೈಕೋರ್ಟ್ ಆದೇಶ

Last Updated : Feb 15, 2023, 7:49 PM IST

ABOUT THE AUTHOR

...view details