ಬೆಂಗಳೂರು :ಕೋವಿಡ್ ಮೂರನೇ ಅಲೆ ಎದುರಿಸಲು ಯಾವೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿರುವ ಹೈಕೋರ್ಟ್, ಸೋಂಕು ತಡೆಯಲು ಈಗನಿಂದಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳುತಂತೆ ನಿರ್ದೇಶಿಸಿದೆ. ಕೋವಿಡ್ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಪೀಠ, ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳೇನು? ಆಮ್ಲಜನಕ(ಆಕ್ಸಿಜನ್) ದಾಸ್ತಾನು ಎಷ್ಟಿದೆ? ತುರ್ತು ಪರಿಸ್ಥಿತಿ ಎದುರಿಸಲು ಆಮ್ಲಜನಕ ದಾಸ್ತಾನು ಇದೆಯೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಕೋವಿಡ್ ಲಸಿಕೀಕರಣ ಚುರುಕಾಗಿ ನಡೆಯುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮೂರನೇ ಅಲೆ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಮ್ಲಜನಕ ಪೂರೈಕೆ ಹೆಚ್ಚಿಸಲು ರಾಜ್ಯದಲ್ಲಿ 245 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ 121 ಘಟಕಗಳು ಸ್ಥಾಪನೆಯಾಗಿದ್ದು, 96 ಘಟಕಗಳು ಉತ್ಪಾದನೆಯಲ್ಲಿ ತೊಡಗಿವೆ ಎಂದು ತಿಳಿಸಿದರು.