ನವದೆಹಲಿ: ಕಲ್ಲಿದ್ದಲು ಕಳ್ಳಸಾಗಣೆ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಟಿಎಂಸಿ ಸಂಸದ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ರುಜಿರಾ ಬ್ಯಾನರ್ಜಿಗೆ ಸೆಪ್ಟೆಂಬರ್ 1 ರಂದು, ಡೈಮಂಡ್ ಹರ್ಬರ್ ಕ್ಷೇತ್ರದ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸೆಪ್ಟೆಂಬರ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬ್ಯಾನರ್ಜಿ ಪರ ವಕೀಲ ಸಂಜಯ್ ಬಸುಗೆ ಸೆಪ್ಟೆಂಬರ್ 3 ರಂದು ಇಡಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳಿಗೂ ಸಮನ್ಸ್
ಪಶ್ಚಿಮ ಬಂಗಾಳದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ಯಾಮ್ ಸಿಂಗ್ಗೆ ಸೆಪ್ಟೆಂಬರ್ 8, ಜ್ಞಾನವಂತ ಸಿಂಗ್ಗೆ ಸೆಪ್ಟೆಂಬರ್ 9 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಗಮನಿಸಿದ ಇಡಿ, ಈ ಕ್ರಮ ಕೈಗೊಂಡಿದೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ತನಿಖೆ ನಡೆಸುತ್ತಿದೆ.
ಕೇಂದ್ರದ ವಿರುದ್ಧ ದೀದಿ ಕಿಡಿ
ಸೋದರಳಿಯನಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ನಮ್ಮನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗವೇ ಇಲ್ಲದ ಮೇಲೆ ಮೀಸಲಾತಿ ಯಾಕೆ? - ಕೇಂದ್ರಕ್ಕೆ ರಾಹುಲ್ ಪ್ರಶ್ನೆ