ಕರ್ನಾಟಕ

karnataka

ಹಿಜಾಬ್​ ಕಡ್ಡಾಯವಲ್ಲ, ಎಸಿಬಿ -ಪಿಎಫ್ಐ ರದ್ದು.. 2022ರಲ್ಲಿ ಹೈಕೋರ್ಟ್​​ ನೀಡಿದ ಮಹತ್ವದ ತೀರ್ಪುಗಳು

By

Published : Dec 31, 2022, 8:43 AM IST

ತಂದೆಯ ಜಾತಿಯನ್ನು ಹೆಣ್ಣು ಮಕ್ಕಳು ಪಡೆಯುತ್ತಾರೆ, ದತ್ತು ಮಕ್ಕಳು ಅನುಕಂಪದ ಉದ್ಯೋಗಕ್ಕೆ ಅರ್ಹರು, ಹಿಜಾಬ್​ ಧರಿಸುವುದು ಕಡ್ಡಾಯವಲ್ಲ, ಎಸಿಬಿ ಮತ್ತು ಪಿಎಫ್​ಐ ರದ್ದು ಸೇರಿ 2022 ರಲ್ಲಿ ಹೈಕೋರ್ಟ್​​ನಿಂದ ಹೊರ ಬಿದ್ದ ಮಹತ್ವದ ಕೆಲ ಆದೇಶಗಳ ಮಾಹಿತಿ ಇಲ್ಲಿದೆ.

high court
ಹೈಕೋರ್ಟ್

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು, ಇಸ್ಲಾಂ ಧರ್ಮದಲ್ಲಿ ಹಿಜಾಬ್​ ಕಡ್ಡಾಯವಲ್ಲ, ಪ್ಯಾಪುಲರ್​ ಫ್ರಂಟ್​ ಆಫ್​ ಇಂಡಿಯಾ ರದ್ದು (ಪಿಎಫ್ಐ ) ಸೇರಿದಂತೆ ಕಳೆದ ಒಂದು ವರ್ಷದಲ್ಲಿ ಹಲವು ಮಹತ್ವದ ಆದೇಶಗಳನ್ನು ರಾಜ್ಯ ಹೈಕೋರ್ಟ್ ನೀಡಿದೆ. ಅವುಗಳಲ್ಲಿ ಪ್ರಮುಖ ಆದೇಶಗಳ ಮಾಹಿತಿ ಇಲ್ಲಿದೆ ನೋಡಿ.

ಎಸಿಬಿ ರಚನೆ ಆದೇಶ ರದ್ದುಪಡಿಸಿದ ಹೈಕೋರ್ಟ್:ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿ 2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಆ ಮೂಲಕ ಈ ಹಿಂದೆ ಇದ್ದ ಲೋಕಾಯುಕ್ತ ಸಂಸ್ಥೆಗೆ ಮತ್ತೆ ಅಧಿಕಾರ ಸಿಕ್ಕಂತಾಗಿದೆ. ಜತೆಗೆ, ಎಸಿಬಿ ಪೊಲೀಸರು ದಾಖಲಿಸಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತ ತನಿಗೆ ವಹಿಸಿ ಆದೇಶಿಸಿದೆ.

ಹಿಜಾಬ್​ ಅಗತ್ಯವಿಲ್ಲ: ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ. ಹೀಗಾಗಿ, ಹಿಜಾಬ್​ ಧರಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ನಿರ್ಬಂಧಿಸಿದ್ದ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ಜಾರಿ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರಿಂದಾಗಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್​ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ:ಹೈಕೋರ್ಟ್ ಆದೇಶದನ್ವಯ ಎಸಿಬಿ ರದ್ದು ಮಾಡಿ ಸರ್ಕಾರ ಅಧಿಕೃತ ಆದೇಶ

ಪಿಎಫ್​ಐ ರದ್ದು:ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದ್ದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ರದ್ದು ಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಜತೆಗೆ, ದೇಶದ್ರೋಹ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) 1967 ಅಡಿ ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ ಎಂದು ಹೈಕೋರ್ಟ್​ ಸೂಚನೆ ನೀಡಿದೆ.

ಸಿಡಿ ಪ್ರಕರಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದಾಖಲಿಸಿದ್ದ ಅತ್ಯಾಚಾರ ಆರೋಪ ದೂರಿನ ತನಿಖಾ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹೈಕೋರ್ಟ್ ಅನುಮತಿ ನೀಡಿತ್ತು.

ಇದನ್ನೂ ಓದಿ:ಸಿ.ಡಿ. ಕೇಸ್: ತನಿಖಾ ವರದಿಯನ್ನು ಎಸ್ಐಟಿ ಮುಖ್ಯಸ್ಥರಿಗೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಜಿ.ಪಂ, ತಾ.ಪಂ ಚುನಾವಣೆ ವಿಳಂಬ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ: ಜಿಲ್ಲಾ ಪಂಚಾಯತ್​ ಮತ್ತು ತಾಲೂಕು ಪಂಚಾಯತ್​ ಚುನಾವಣೆಗಳಿಗೆ ಕ್ಷೇತ್ರ ಪುನರ್​ ವಿಂಗಡಣೆ ಮತ್ತು ಮೀಸಲು ನಿಗದಿ ಪಡಿಸಲು ಸರ್ಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಿದರೂ ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತ ಪಡಿಸಿದ್ದ ಹೈಕೋರ್ಟ್, 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿತ್ತು.

ತಂದೆಯ ಜಾತಿಯನ್ನು ಹೆಣ್ಣು ಮಕ್ಕಳು ಪಡೆಯುತ್ತಾರೆ: ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯಲಿದ್ದು, ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಗ್ರಾಮ ಪಂಚಾಯತ್​ ಸದಸ್ಯ ಚುನಾವಣೆಯಲ್ಲಿ ಎಸ್‌ಟಿ ಮೀಸಲಾತಿಯಡಿ ಸ್ಪರ್ಧಿಸಿ ವ್ಯಕ್ತಿಯೊಬ್ಬರು ಜಯಗಳಿಸಿದ್ದನ್ನು ಹೈಕೋರ್ಟ್ ಅಂಸಿಧುಗೊಳಿಸಿ ಆದೇಶಿಸಿತ್ತು.

ದತ್ತು ಮಕ್ಕಳು ಅನುಕಂಪದ ಉದ್ಯೋಗಕ್ಕೆ ಅರ್ಹರು: ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಾಗ ಮೃತರ ಸ್ವಂತ ಮಕ್ಕಳು, ದತ್ತು ಮಕ್ಕಳು ಎಂಬ ತಾರತಮ್ಯ ಮಾಡುವಂತಿಲ್ಲ. ದತ್ತು ಮಕ್ಕಳು ಕೂಡ ಉದ್ಯೋಗ ಪಡೆಯಲು ಅರ್ಹ ಎಂದು ಹೈಕೋರ್ಟ್ ತಿಳಿಸಿದೆ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದು ಆದೇಶಿಸಿದಲ್ಲಿ ದತ್ತು ಸ್ವೀಕಾರದ ಮೂಲ ಉದ್ದೇಶವೇ ಈಡೇರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಶಾಲಾ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಸರ್ಕಾರಕ್ಕಿದೆ: ಸುಪ್ರೀಂಕೋರ್ಟ್​

ಗರ್ಭಾವಸ್ಥೆಯಲ್ಲಿದ್ದಾಗಲೇ ಮಗುವಿನ ದತ್ತು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತಿಲ್ಲ: ಮಗು ಜನ್ಮ ತಾಳುವ ಮುನ್ನವೇ ದತ್ತು ನೀಡುವಂತಿಲ್ಲ. ಗರ್ಭದಲ್ಲಿರುವ ಮಗುವಿಗೂ ಗೌರವಯುತ ಜೀವನ ನಡೆಸುವ ಹಕ್ಕಿದೆ. ಇಂತಹ ಒಪ್ಪಂದಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸುವ ಮೂಲಕ ತಿಳಿಸಿತ್ತು.

ABOUT THE AUTHOR

...view details