ಕರ್ನಾಟಕ

karnataka

ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!

By ETV Bharat Karnataka Team

Published : Oct 2, 2023, 2:10 PM IST

ನಾವು ಗಾಂಧಿ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ. ಅವಹೇಳನ ಮಾಡಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Gandhi Jayanti celebration  Gandhi Jayanti celebration in Bengaluru  CM Siddaramaiah in Bengaluru  ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ  ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಸದ್ಭಾವನಾ ಪಾದಯಾತ್ರೆ  ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆ  ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ  ಗಾಂಧಿ ಅವಹೇಳನಕ್ಕೆ ಅವಕಾಶ  ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ
ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು:ಯಾವುದೇ ಕಾರಣಕ್ಕೂ ಮಹಾತ್ಮ ಗಾಂಧೀಜಿಯವರ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಯಾರಾದರೂ ಅವಹೇಳನದಂತಹ ಪ್ರಯತ್ನಕ್ಕೆ ಮುಂದಾದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬಾಪೂಜಿಗೆ ಮತ್ತು ಶಾಸ್ತ್ರಿಗೆ ನಮಿಸುತ್ತಿರುವ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಜನ್ಮ ದಿನ ಆಚರಣೆ ನಮ್ಮೆಲ್ಲರಿಗೂ ಗೌರವದ ಸಂಗತಿ. ಗಾಂಧೀಜಿ ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸದಿದ್ದರೆ ನಾವು ಗುಲಾಮಗಿರಿಯಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತಿತ್ತು. ಗಾಂಧಿ ವಕೀಲರಾಗಿ ದಕ್ಷಿಣ ಆಫ್ರಿಕಾಗೆ ಹೋದವರು. ಅಲ್ಲಿಯೂ ಕೂಡ ಹೋರಾಟ ಮಾಡಲು ಆರಂಭಿಸಿ ಜೈಲುವಾಸ ಅನುಭವಿಸಿದರು. ನಂತರ ಭಾರತಕ್ಕೆ ಗೋಪಾಲಕೃಷ್ಣ ಗೋಖಲೆ ಆಹ್ವಾನದ ಮೇರೆಗೆ ಭಾರತಕ್ಕೆ ಬಂದರು.

ಗೋಖಲೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಬ್ರಿಟೀಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡುಗಡೆ ಮಾಡಬೇಕಿದೆ. ನಾವು ಹೋರಾಟ ಆರಂಭಿಸಿದ್ದೇವೆ. ಬಂದು ನೇತೃತ್ವ ವಹಿಸಿ ಎಂದು ಮನವಿ ಮಾಡಿದ್ದರು. ಅದನ್ನು ಒಪ್ಪಿ ಗಾಂಧಿ ಬಂದರು. ಸಮಾಜದ ಎಲ್ಲ ವರ್ಗದ ಜನರನ್ನು ಭೇಟಿ ಮಾಡಿದರು. ಸಮಾಜ, ಜನ ಗೊತ್ತಿರಬೇಕು, ಜನರ ಬದುಕು ಗೊತ್ತಿರಬೇಕು ಎಂದು ದೇಶ ಪ್ರವಾಸ ಮಾಡಿದರು ಎಂದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಮಾತುಕತೆ

ಸರಳ ಜೀವನದ ಪ್ರತೀಕ: ಅವರು ಸರಳ ಜೀವನ ಅಳವಡಿಸಿಕೊಂಡಿದ್ದರು. ಅವರಷ್ಟು ಸರಳ ಜೀವನ ಮಾಡಿದವರು ಬೇರೊಬ್ಬರಿಲ್ಲ. ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಉದಾಹರಿಸಿದರು.

ಗಾಂಧೀಜಿ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಬಸವಾದಿ ಶರಣರಂತೆ ನುಡಿದಂತೆ ನಡೆದರು. ಅವರು ಸ್ವಾತಂತ್ರ್ಯ ಪಡೆಯಲು ಬಳಸಿದ ಮಾರ್ಗ ಅಹಿಂಸಾ ಮಾರ್ಗವಾಗಿತ್ತು. ಅಹಿಂಸಾ ಮಾರ್ಗದ ಮೂಲಕ ದೇಶದಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದ್ದರು. ಪ್ರಚಾರದ ತಂತ್ರಜ್ಞಾನ ಇಲ್ಲದೇ ಇದ್ದರೂ ದೇಶದ ಮೂಲೆ ಮೂಲೆಗೆ ತಲುಪುವಷ್ಟ ಜನಪ್ರೀಯರಾಗಿದ್ದರು. ಗಾಂಧಿ ಭಾಷಣಕ್ಕೆ ಎಲ್ಲ ಕಡೆಯಿಂದ ಜನರು ಹರಿದುಬರುತ್ತಿದ್ದರು. ಗಾಂಧೀಜಿ ಎಲ್ಲಿ ಇರುತ್ತಾರೋ ಅದೇ ದೇವಾಲಯ. ಅವರು ಎಲ್ಲಿ ತಿರುಗಾಡುತ್ತಾರೋ ಅದೇ ಪುಣ್ಯಭೂಮಿ ಎಂದು ನೆಹರೂ ಹೇಳಿದ್ದರು ಎಂದು ಸಿಎಂ ಸ್ಮರಿಸಿದರು.

ಪಕ್ಷದೊಂದಿಗೆ ಸಿದ್ದರಾಮಯ್ಯ

ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಗಾಂಧಿ ಅದರ ಸಂಭ್ರಮ ಅನುಭವಿಸಲಿಲ್ಲ. ನಾವು ಸಂಭ್ರಮಿಸುತ್ತಿದ್ದಾಗ ಗಾಂಧಿ ಬಂಗಾಳದಲ್ಲಿ ಶಾಂತಿಗಾಗಿ ಸತ್ಯಾಗ್ರಹ ಮಾಡುತ್ತಿದ್ದರು. ಠಾಗೋರ್ ಅವರು ಗಾಂಧಿಗೆ ಮಹಾತ್ಮ ಎಂದು ಕರೆದರು. 1944 ರಲ್ಲಿ ಗಾಂಧಿಗೆ ಮಹಾತ್ಮ ಎಂಬ ಬಿರುದು ಬಂತು. ದೇಶಕ್ಕೆ ಇನ್ನೊಬ್ಬ ಮಹಾತ್ಮ ಇಲ್ಲ, ಗಾಂಧಿ ಒಬ್ಬರೇ ಈ ದೇಶದ ಪಿತಾಮಹಾ ಎಂದು ಸುಭಾಷ್ ಚಂದ್ರ ಬೋಸ್ ಗಾಂಧೀಜಿಯನ್ನು ಪಿತಾಮಹಾ ಎಂದು ಕರೆದಿದ್ದರು ಅಂತಾ ಹೇಳಿದರು.

ನಾವೆಲ್ಲಾ ಗಾಂಧಿ ನಡೆದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಗಾಂಧಿ ಕನಸು ಕಂಡ ದೇಶ ಇನ್ನೂ ನಿರ್ಮಾಣ ಆಗಿಲ್ಲ. ಸ್ವಾತಂತ್ರ್ಯ ಬಂದು 76 ವರ್ಷ ಆದರೂ ಗಾಂಧಿ ಕನಸಿನ ಭಾರತ ನೋಡಲು ಸಾಧ್ಯವಾಗಿಲ್ಲ. ಹಳ್ಳಿಗಳ ಉದ್ದಾರವಾಗದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದಿದ್ದರು. ಗಾಂಧಿ ನಡೆದ ದಾರಿಯಲ್ಲಿ ನಡೆದರೂ ಅದು ಪೂರ್ಣಗೊಂಡಿಲ್ಲ. ಹಾಗಾಗಿ ಗಾಂಧಿ ಕನಸಿನ ಭಾರತ ಇನ್ನೂ ಕಾಣಲು ಆಗಿಲ್ಲ ಎಂದು ವಿಷಾದಿಸಿದರು.

ನಮ್ಮ ಸರ್ಕಾರದ ಅನೇಕ ಕಾರ್ಯಕ್ರಮಗಳ ಹಿಂದೆ ಗಾಂಧೀಜಿ ಚಿಂತನೆ ಇದೆ. ನಮ್ಮ ಸರ್ಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿ. ಗಾಂಧಿಗೆ ಗೌರವ ಕೊಡುವ ರೀತಿ, ಗಾಂಧಿ ನಡೆದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ. ಅವರ ಚಿಂತನೆ ಅಳವಡಿಸಿಕೊಳ್ಳೋಣ ಎಂದು ಸಿಎಂ ಕರೆ ನೀಡಿದರು.

ಶಾಸ್ತ್ರಿ ಸ್ಮರಿಸಿದ ಸಿಎಂ:ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಅವರೂ ಸ್ವಾತಂತ್ರ್ಯ ಹೋರಾಟಗಾರರು. ಗಾಂಧಿ ಅನುಯಾಯಿ ಹಾಗೂ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಅವರು ಬಿಟ್ಟು ಹೋದ ಮೌಲ್ಯ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಿಎಂ ಕರೆ ನೀಡಿದರು.

ಇದೇ ವೇಳೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಮಹಾತ್ಮ ಗಾಂಧೀಜಿಯವರ ಅವಹೇಳನ ಮಾಡಲಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ರೀತಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದರು. ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೂ ಗಾಂಧಿ ಅವಹೇಳನಕ್ಕೆ ಬಿಡಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಸದ್ಭಾವನಾ ಪಾದಯಾತ್ರೆ: ಮಹಾತ್ಮಾ ಗಾಂಧೀಜಿ ಅವರ ಜನ್ಮದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ 9.30 ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್ .ಎಸ್. ಎಸ್ ನ ರಾಜ್ಯಾಧಿಕಾರಗಳಾದ ಪ್ರತಾಪ್ ಲಿಂಗಯ್ಯ ಅವರು ಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಜೊತೆಗೆ ಹಸಿರು ಬಾವುಟ ತೋರಿಸಿ ಸದ್ಭಾವನಾ ಪಾದಯಾತ್ರೆಗೆ ಚಾಲನೆ ನೀಡಿದರು.

ಓದಿ:ಗಾಂಧಿ ಜಯಂತಿ: ರಾಜ್​ಘಾಟ್​ನಲ್ಲಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ, ಖರ್ಗೆ

ABOUT THE AUTHOR

...view details