ಕರ್ನಾಟಕ

karnataka

ಎಸ್ಇಪಿ ಎಂದರೆ ಸೋನಿಯಾ ಎಜುಕೇಷನ್​ ಪಾಲಿಸಿ: ಮಾಜಿ ಸಚಿವ ಬಿ.ಸಿ.ನಾಗೇಶ್

By

Published : Aug 18, 2023, 8:26 PM IST

ಎಸ್​ಇಪಿ ಎಂದರೆ ಸೋನಿಯಾ ಎಜುಕೇಷನ್​ ಪಾಲಿಸಿ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಟೀಕಿಸಿದರು.

ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಕಾಂಗ್ರೆಸ್​ನವರಿಗೆ ಎನ್​ಇಪಿ ಅಂದ್ರೆ ನಾಗಪುರ ಶಿಕ್ಷಣ ಪಾಲಿಸಿ ಎಂದಾದರೆ, ನಮಗೆ ಅವರ ಎಸ್​ಇಪಿ ಸೋನಿಯಾ ಎಜುಕೇಷನ್ ಪಾಲಿಸಿಯಂತೆ ಕಾಣುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದರು.

ವಿಧಾನಸೌಧದಲ್ಲಿಂದು ಮೇಲ್ಮನೆ ಸದಸ್ಯರ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿರುವ ಎಸ್​ಇಪಿ ಅಂದ್ರೆ ಸೋನಿಯಾ ಎಜುಕೇಷನ್ ಪಾಲಿಸಿ ಅಥವಾ ಸಿದ್ದರಾಮಯ್ಯ ಎಜುಕೇಷನ್ ಅಥವಾ ಶಿವಕುಮಾರ್ ಎಜುಕೇಷನ್ ಪಾಲಿಸಿಯನ್ನು ಮಕ್ಕಳ ಮೇಲೆ ಹೇರಲು ಹೊರಟಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣ ನೂತನ ಶಿಕ್ಷಣ ನೀತಿ (ಎನ್‍ಇಪಿ) ಬದಲಿಸುವ ಮಾತನಾಡಿದ್ದಾರೆ. ಆದರೆ, ಅದರಲ್ಲಿರುವ ಲೋಪದೋಷಗಳಿದ್ದರೆ ಅವುಗಳನ್ನು ಬದಲಿಸುವ ಮಾತನಾಡಿಲ್ಲ" ಎಂದರು.

"ಇವತ್ತಿನ ರಾಜ್ಯ ಸರಕಾರದಲ್ಲಿ ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಅವರಲ್ಲಿ ಯಾರು ಶಿಕ್ಷಣ ಸಚಿವರು?. ಸರ್ಕಾರದ ಹಿಂದಿರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ" ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರ ಸರ್ಕಾರ ಶ್ರೇಷ್ಠ ವಿಜ್ಞಾನಿ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು 6 ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ನೀಡಿತ್ತು. ಈ ಶಿಫಾರಸುಗಳನ್ನು ಜನರ ಮುಂದಿಡಲಾಗಿತ್ತು. 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನೂ ಸೇರಿಸುವ ಪ್ರಯತ್ನ ಮಾಡಿದ್ದರು. ಗ್ರಾಮಸಭೆಗಳಲ್ಲೂ ಇದನ್ನು ಇಡಲಾಗಿತ್ತು. ರಾಜಕೀಯ ದೃಷ್ಟಿ ಮತ್ತು ವಿರೋಧಕ್ಕಾಗಿಯೇ ವಿರೋಧ ಮಾಡುತ್ತಿದ್ದಾರೆ" ಎಂದು ಕಿಡಿ ಕಾರಿದರು.

ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿ: "ಕರ್ನಾಟಕದ ಭವಿಷ್ಯ ಹಾಗೂ ಇಲ್ಲಿನ ಯುವಜನರ ದೃಷ್ಟಿಯಿಂದ ಇದು ಕೆಟ್ಟ ನಿರ್ಣಯವಾಗಲಿದೆ. ಸ್ಪರ್ಧೆಯ ದೃಷ್ಟಿಯಿಂದಲೂ ಇದು ಸರಿಯಲ್ಲ. ಸಿದ್ದರಾಮಯ್ಯನವರ ಮೊಮ್ಮಗ ಇಂಟರ್​ನ್ಯಾಷನಲ್​ ಸ್ಕೂಲಿನಲ್ಲಿ ಓದುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಸಿಬಿಎಸ್‍ಇ, ಐಸಿಎಸ್‍ಇ ಶಿಕ್ಷಣದಲ್ಲಿ ಓದಿಸುತ್ತಿದ್ದಾರೆ. ನಮ್ಮ ಬಡ ಮಕ್ಕಳು ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿಯಡಿ ಓದಬೇಕೆಂಬ ಆಶಯ ಇವರದು" ಎಂದು ಟೀಕಿಸಿದರು.

ಸರಕಾರಿ ಶಾಲೆಗಳನ್ನು ಮುಚ್ಚಿಸುವ ಅಜೆಂಡಾ: "ಕರ್ನಾಟಕದ ಶೇ 50ರಿಂದ 60ರಷ್ಟು ಖಾಸಗಿ ಶಾಲೆಗಳ ಮಾಲೀಕರು ರಾಜಕಾರಣಿಗಳು. ಸರಕಾರಿ ಶಾಲೆಗಳನ್ನು ಮುಚ್ಚಿಸುವ ಹಿಡನ್ ಅಜೆಂಡಾ ಅವರದಿರಬಹುದು. ಎನ್‌ಇಪಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಕೊಡುತ್ತದೆ. ಖಾಸಗಿ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿರಬಹುದು. ಯಾರ ಅಭಿಪ್ರಾಯವನ್ನೂ ಪಡೆಯದೆ, ದೇಶದ ಭವಿಷ್ಯವನ್ನು ನಿರ್ಣಯಿಸುವ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತಿರುವುದು ದೇಶದ ದೃಷ್ಟಿಯಿಂದ ಮತ್ತು ಸಮಾಜದ ದೃಷ್ಟಿಯಿಂದ ಆಘಾತಕಾರಿ ವಿಚಾರ" ಎಂದು ಆತಂಕ ವ್ಯಕ್ತಪಡಿಸಿದರು.

"ಮನಮೋಹನ್ ಸಿಂಗ್ ಸರಕಾರ ಅನುಷ್ಠಾನಕ್ಕೆ ತರಲು ಬಯಸಿದ್ದ ರಾಷ್ಟ್ರೀಯ ಪಠ್ಯಕ್ರಮವನ್ನು ಇಲ್ಲಿನ ಕಾಂಗ್ರೆಸ್ ರಾಜ್ಯ ಸರ್ಕಾರ ಜಾರಿಗೊಳಿಸಲಿಲ್ಲ. ಯಡಿಯೂರಪ್ಪ ಅವರ ಸರ್ಕಾರವು ಅದನ್ನು ಜಾರಿಗೊಳಿಸಲು ಮುಂದಾಗಿತ್ತು. ಬಿಜೆಪಿ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿರಲಿಲ್ಲ. ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಮಾಫಿಯಕ್ಕೆ ಶರಣಾದಂತಿದೆ. ಈ ನಿರ್ಣಯ ಅವಾಂತರಕಾರಿ; ಇದು ರಾಜ್ಯ ಮತ್ತು ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ" ಎಂದರು.

ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆ: "ಡಿಕೆಶಿ ತರಲು ಹೊರಟಿರುವ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆ ನಡೆಸುವ ಉದ್ದೇಶದ ಹಿಂದೆ ಹುನ್ನಾರವಿರುವ ಆತಂಕವಿದೆ. ಸರ್ಕಾರಿ ಶಾಲೆ ಮುಚ್ಚಲು ಈ ನಿರ್ಧಾರ ಮಾಡಿರುವ ಸಾಧ್ಯತೆ ಇದೆ. ಈ ನಿರ್ಧಾರ ಮುಂದೆ ಶಾಲೆಗಳನ್ನು ಮುಚ್ಚಿಸುವ ಕಾರ್ಯದ ಮುನ್ನುಡಿ. ಇತ್ತೀಚೆಗೆ ಬಂದ ಅನ್ಯಭಾಷೆಯ ಚಲನಚಿತ್ರದಲ್ಲಿನ ವಿಚಾರ ನೋಡಿ ಈ ಯೋಜನೆ ಜಾರಿಗೆ ಡಿಸಿಎಂ ಮುಂದಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ಇರಬೇಕು" ಎಂದು ಹೇಳಿದರು.

ಇದನ್ನೂ ಓದಿ:Yatnal: ಡಿಕೆಶಿ ಎಂದಿಗೂ ಸಿಎಂ ಆಗಲ್ಲ, ಸಿದ್ದರಾಮಯ್ಯ ಅವರೇ ಕಾಂಗ್ರೆಸ್​ನ ಕೊನೇಯ ಸಿಎಂ- ಯತ್ನಾಳ್

ABOUT THE AUTHOR

...view details