ಕರ್ನಾಟಕ

karnataka

1 ರೂಪಾಯಿ ತೆರಿಗೆಯಲ್ಲಿ 15 ಪೈಸೆ ವಾಪಸ್ ನೀಡುವುದು ಮೋದಿ ಆಶೀರ್ವಾದವೇ?: ಜೆ.ಪಿ.ನಡ್ಡಾಗೆ ಸಿದ್ದರಾಮಯ್ಯ ಪ್ರಶ್ನೆ

By

Published : Apr 20, 2023, 10:45 PM IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿ, ಕೆಲವು ಪ್ರಶ್ನೆಗಳನ್ನು ಜಿ.ಪಿ.ನಡ್ಡಾ ಮುಂದಿಟ್ಟಿದ್ದಾರೆ.

Former CM Siddaramaiah
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆ.ಪಿ. ನಡ್ಡಾ

ಬೆಂಗಳೂರು:ಕರ್ನಾಟಕದ ಜನ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು, ಬಿಜೆಪಿಗೆ ಮತ ನೀಡಬೇಕು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಜೆ.ಪಿ.ನಡ್ಡಾ ಅವರೇ, ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದು, ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿ ತೆರಿಗೆಯಲ್ಲಿ ಹದಿನೈದು ಪೈಸೆ ಮಾತ್ರ ವಾಪಸ್ ನೀಡುವುದು, ಮೋದಿಯವರ ಆಶೀರ್ವಾದವೇ ಶಾಪವೇ'' ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಅನುದಾನ ಕಡಿತದಿಂದಾಗಿ ರಾಜ್ಯ ಸರ್ಕಾರ ಮಾಡಿಕೊಂಡ ಸಾಲ ರೂ.2.4.0 ಲಕ್ಷ ಕೋಟಿಗಳಿಂದ ರೂ.5.60 ಲಕ್ಷ ಕೋಟಿಗೆ ಏರಿಕೆಯಾಗಿದೆ. ಪ್ರತಿಯೊಬ್ಬ ಕನ್ನಡಿಗನ ತಲೆ ಮೇಲೆ ರೂ.86,000 ಸಾಲದ ಹೊರೆ ಬಿದ್ದಿರುವುದು ಮೋದಿ ಆಶೀರ್ವಾದವೇ? ಶಾಪವೇ? 2019ರಲ್ಲಿ ನೆರೆ ಹಾವಳಿ ನಷ್ಟಕ್ಕೆ ರೂ.35,000 ಕೋಟಿ ಪರಿಹಾರ ಕೇಳಿದ್ದರೂ, ಕೇವಲ ರೂ.1,869 ಕೋಟಿ ಮಾತ್ರ ಕೇಂದ್ರ ಸರ್ಕಾರ ಕೊಟ್ಟಿದ್ದು, 2020 ಮತ್ತು 2021ರಲ್ಲಿಯೂ ಇದೇ ಅನ್ಯಾಯ ಮುಂದುವರಿಸಿದ್ದು ಮೋದಿ ಎಂದರು.

ಇದನ್ನೂ ಓದಿ:211 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ: 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ

ಕನ್ನಡಿಗರು ಕಟ್ಟಿರುವ ಬ್ಯಾಂಕ್​ಗಳನ್ನು ನುಂಗಿ ಹಾಕಿದ ಮೋದಿ- ಸಿದ್ದು:ಕನ್ನಡಿಗರು ಕಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್​ಗಳನ್ನು ನುಂಗಿ ಹಾಕಿದ್ದು, ಕನ್ನಡಿಗರ ಹೆಮ್ಮೆಯ ‘ನಂದಿನಿ’ಯನ್ನು ಗುಜರಾತ್ ಮೂಲದ ‘ಅಮುಲ್’ ಆಪೋಶನ್ ತೆಗೆದುಕೊಳ್ಳಲು ಹೊರಟಿರುವುದು ಮೋದಿ ಆಶೀರ್ವಾದವೇ? ಶಾಪವೇ? ಐಬಿಪಿಎಸ್ ಮತ್ತು ಎಲ್ಐಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲಿಕ್ಕೆ ಅವಕಾಶ ನೀಡದೇ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿ ಕನ್ನಡಿಗ ಯುವಜನರ ಹೊಟ್ಟೆಗೆ ಹೊಡೆದದ್ದು ಮೋದಿ ಆಶೀರ್ವಾದವೇ? ಶಾಪವೇ? ಎಂದು ತಿಳಿಸಿದರು.

ಕರ್ನಾಟಕ ಗಡಿಪ್ರದೇಶವನ್ನು ಆಕ್ರಮಿಸುವ ದುರುದ್ದೇಶದಿಂದ ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ನಮ್ಮ ರಾಜ್ಯದ 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ಮೋದಿ ಆಶೀರ್ವಾದವೇ? ಶಾಪವೇ? ಎಂದು ಕೇಳಿದ್ದಾರೆ.

ಮಹದಾಹಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲು ವಿಳಂಬ ಮಾಡಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡಲು ವಿಫಲವಾಗಿದ್ದು, ಕೇಂದ್ರ ಸರ್ಕಾರದ ನೆರವಿನ ಕೊರತೆಯಿಂದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ಮೋದಿ ಆಶೀರ್ವಾದವೇ? ಶಾಪವೇ? ರಾಜ್ಯ ಬಿಜೆಪಿ ನಾಯಕರು ಶೇ 40ರಷ್ಟು ಕಮಿಷನ್ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳನ್ನು ನುಂಗಿ ಹಾಕಿರುವುದು ಮೋದಿ ಆಶೀರ್ವಾದವೇ? ಶಾಪವೇ? ಎಂದು ಕೇಳಿದ್ದಾರೆ.

ಇದನ್ನೂ ಓದಿ:'ಚು.ಆಯೋಗದ ಮೇಲೆ ನಂಬಿಕೆಯಿಲ್ಲದೇ ಸಹೋದರನಿಂದಲೇ ಡಿಕೆಶಿ ನಾಮಪತ್ರ ಸಲ್ಲಿಕೆ'

ABOUT THE AUTHOR

...view details