ETV Bharat / state

'ಚು.ಆಯೋಗದ ಮೇಲೆ ನಂಬಿಕೆಯಿಲ್ಲದೇ ಸಹೋದರನಿಂದಲೇ ಡಿಕೆಶಿ ನಾಮಪತ್ರ ಸಲ್ಲಿಕೆ'

author img

By

Published : Apr 20, 2023, 9:46 PM IST

ಬಿಜೆಪಿ ಎಸ್.ಸಿ.ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.

Narayanaswamy
ಛಲವಾದಿ ನಾರಾಯಣಸ್ವಾಮಿ

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.

ಬೆಂಗಳೂರು: ''ಸುಮಾರು ಆರು ದಶಕಗಳ ಕಾಲ ಆಡಳಿತ ಮಾಡಿ ವ್ಯವಸ್ಥೆಯನ್ನು ರೂಪಿಸಿದವರೇ ಅವರು. ಚುನಾವಣಾ ಆಯೋಗದ ಬಗ್ಗೆ ಡಿಕೆಶಿಗೆ ನಂಬಿಕೆ ಇಲ್ಲ. ಅದಕ್ಕಾಗಿಯೇ ಸಹೋದರ (ತಮ್ಮ) ಡಿ.ಕೆ.ಸುರೇಶ್ ಕೈಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಪದ್ಮನಾಭ ನಗರದಲ್ಲಿ ನಾಮಪತ್ರ ಸಲ್ಲಿಸಲು ಸಮಯ ಸಿಗಲಿಲ್ಲವೆಂದು ಕಾಣುತ್ತದೆ'' ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ ರಾಜ್ಯವೆಲ್ಲ ಸುತ್ತಿ ಮತ್ತೆ ವರುಣಕ್ಕೆ ಬಂದಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣ ಗೆಲ್ಲುತ್ತಾರೆ. ಸಿದ್ದರಾಮಯ್ಯರಿಗೆ ಸೊಸೆ, ಮೊಮ್ಮಕ್ಕಳನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಎಲ್ಲರನ್ನೂ ಗೆಲ್ಲಿಸುವ ಮಾತನಾಡಿದ ಅವರು, ತಮ್ಮನ್ನು ಗೆಲ್ಲಿಸಲು ಸೊಸೆ, ಮೊಮ್ಮಕ್ಕಳನ್ನು ಕರೆದುಕೊಂಡು ಬರಬೇಕಾದುದು ಎಂಥ ವಿಪರ್ಯಾಸ'' ಎಂದು ಟೀಕಿಸಿದರು.

''ಎಲ್ಲರ ಶಾಪದಿಂದ ಸಿದ್ದರಾಮಯ್ಯ ಈ ಸಾರಿ ಸೋಲುತ್ತಾರೆ ಎಂದ ಅವರು, ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ. ಡಿ.ಕೆ.ಶಿವಕುಮಾರ್ ಅವರು ಸೋಲುವ ಭಯದಲ್ಲಿದ್ದಾರೆ ಎಂದು ತಿಳಿಸಿದರು. ನಮ್ಮ ಪಕ್ಷದ ಆರ್.ಅಶೋಕ್ ಅವರಿಗೆ ಜನಬೆಂಬಲ ಕಾಣುತ್ತಿದೆ. ತಮ್ಮ ಸೋದರನ ನಾಮಪತ್ರ ಹಾಕಿಸುವ ಮೂಲಕ ಅಶೋಕ್ ಅವರು ಗೆಲ್ಲುವ ಮುನ್ಸೂಚನೆಯನ್ನು ಡಿಕೆಶಿ ಅವರು ನೀಡಿದ್ದಾರೆ'' ಎಂದು ತಿಳಿಸಿದರು.

''ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರ ನಡುವೆ ಅಪನಂಬಿಕೆ ಇರುವುದು ಎಂದು ನಾವು ಅಂದುಕೊಂಡಿದ್ದೆವು. ಆ ಯೋಚನೆ ಕಳಚಿ ಹೋಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಯಾರ ಮೇಲೂ ನಂಬಿಕೆ ಇಲ್ಲವಾಗಿದೆ. ಯಾವ ವ್ಯಕ್ತಿಗೆ ಜೀವನದಲ್ಲಿ ಕಲ್ಮಶಗಳಿಲ್ಲವೋ ಅವರಿಗೆ ಜೀವನದಲ್ಲಿ ಭಯ ಇರುವುದಿಲ್ಲ. ಹಲವಾರು ತಪ್ಪುಗಳನ್ನು ಮಾಡಿದವರಿಗೆ ಭಯ ಇದ್ದೇ ಇರುತ್ತದೆ. ಹಳ್ಳಿಯಲ್ಲಿ ದೇಹದಲ್ಲಿ ತೂಕ ಇದ್ದರೆ, ದಾರಿಯಲ್ಲಿ ಭಯ ಎಂಬ ಗಾದೆಮಾತಿದೆ. ಮೈಮೇಲೆ ಚಿನ್ನ ಬೆಳ್ಳಿ ಇದ್ದಾಗ ಕಳ್ಳರ ಭಯ ಸಹಜ. ಕಾಂಗ್ರೆಸ್‍ನ ಪ್ರತಿಯೊಬ್ಬರಲ್ಲೂ ಸಮಸ್ಯೆ ಇದೆ. ಅದೇ ಕಾರಣಕ್ಕೆ ಕಾಂಗ್ರೆಸ್ಸಿಗರಿಗೆ ಹೆಜ್ಜೆ ಹೆಜ್ಜೆಗೂ ಭಯ ಕಾಡುತ್ತಿದೆ'' ಎಂದು ವಿಶ್ಲೇಷಿಸಿದರು.

ಡಿಕೆಶಿ 1,240 ಕೋಟಿ ರೂ. ಆಗಿದೆ- ನಾರಾಯಣಸ್ವಾಮಿ: ''ತಪ್ಪು ಮಾಡದೇ ತಿಹಾರ್​ಗೆ ಯಾರಾದರೂ ಹೋಗಲು ಸಾಧ್ಯವೇ? ಶಿವಕುಮಾರ್ ಆಸ್ತಿ ಹಿಂದೆ 840 ಕೋಟಿ ಇದ್ದದ್ದು, ಸದ್ಯ 1240 ಕೋಟಿ ರೂಪಾಯಿ ಆಗಿದೆ. ನೂರಾರು ಕೋಟಿ ಜಾಸ್ತಿ ಆಗಿದೆಯಲ್ಲವೇ? ಎಲ್ಲಿಂದ ಸಂಪಾದನೆ ಆಗಿದೆ. ಮಕ್ಕಳು ಶಾಲೆಗೆ ಹೋಗುವಾಗಲೇ ನೂರಾರು ಕೋಟಿ ಹಣ ಗಳಿಸುತ್ತಿದ್ದಾರೆ. ರಾಜಕಾರಣದಲ್ಲಿ ಭ್ರಷ್ಟಾಚಾರದ ಸ್ಪಷ್ಟತೆ ಇದಲ್ಲವೇ'' ಎಂದರು.

ನಂಬಿಕೆ ಕಳಕೊಂಡ ಡಿ.ಕೆ.ಶಿವಕುಮಾರ್- ಆರೋಪ: ''ಇವತ್ತಿನವರೆಗೆ ಡಿಕೆಶಿ ಅವರು ಕನಕಪುರದಿಂದ ಆರಿಸಿ ಬರುತ್ತಿದ್ದರು. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಅಲ್ಲಿಗೆ ತೆರಳುತ್ತಿದ್ದರು. ಚುನಾವಣೆಯಲ್ಲಿ ಬೂತ್‍ಗಳನ್ನೇ ಹೊತ್ತೊಯ್ದ ಕೇಸು ಶಿವಕುಮಾರ್ ಅವರ ಮೇಲಿದೆ. ಈಗ ಜನರಲ್ಲಿ ಅಶೋಕ್ ಅವರ ಬಗ್ಗೆ ನಂಬಿಕೆ ಇದೆ. ಮತ್ತು ಅವರನ್ನು ಗೆಲ್ಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಯಾವ ಸ್ಥಿತಿಗೆ ಜಾರಿದೆ ಎಂದು ಈಗ ನಾವೆಲ್ಲ ನೋಡುತ್ತಿದ್ದೇವೆ. ಇದುವರೆಗೆ ಅವರು ನಾಗಾಲೋಟದಲ್ಲಿದ್ದರು. ಈಗ ಭೂಮಿಗೆ ಬಂದಂತೆ ಕಾಣುತ್ತಿದೆ. ಡಿ.ಕೆ.ಶಿವಕುಮಾರ್ ಅವರು ವ್ಯವಸ್ಥೆ ಬಗ್ಗೆ ನಂಬಿಕೆ ಕಳಕೊಂಡಿದ್ದಾರೆ'' ಎಂದು ಆರೋಪಿಸಿದರು.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.