ಬೆಂಗಳೂರು:ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಯಾರೂ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆಯ 63 ಸಬ್ ಡಿವಿಜನ್ ಕಚೇರಿಗಳ ಮೂಲಕ ಅನುಮತಿಗೆ ಕಲ್ಪಿಸಲಾಗುತ್ತಿದೆ. ಬೆಸ್ಕಾಂ, ಪೊಲೀಸ್ ಇಲಾಖೆ, ಬಿಬಿಎಂಪಿ, ಅಗ್ನಿಶಾಮಕ ದಳದ ಅಧಿಕಾರಿಗಳು ಒಂದೇ ಸೂರಿನಡಿ ಅನುಮತಿ ನೀಡಲಿದ್ದಾರೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಟೌನ್‌ಹಾಲ್‌ನಲ್ಲಿ ಸಾರ್ವಜನಿಕ ಸಭೆ ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ಉಪಸ್ಥಿತಿಯಲ್ಲಿ ನಗರದ ಟೌನ್‌ಹಾಲ್‌ನಲ್ಲಿ ನಡೆದ ಸಾರ್ವಜನಿಕ ಸಭೆ ಬಳಿಕ ಮಾತನಾಡಿದ ಅವರು, ಏರಿಯಾದಲ್ಲಿ 10-20 ಫ್ಲೆಕ್ಸ್ ಹಾಕುವಂತಿಲ್ಲ. ಗಣೇಶ ಮೂರ್ತಿ ಕೂರಿಸುವ ಪೆಂಡಾಲ್‌ನಲ್ಲಿ ಮಾತ್ರ ಕಾರ್ಯಕ್ರಮದ ಮಾಹಿತಿ ಹಾಕಬಹುದು ಹಾಗೂ ಬಟ್ಟೆಯಲ್ಲಿ ತಯಾರಿಸುವ ಬ್ಯಾನರ್ ಮಾತ್ರ ಬಳಸಲು ಅನುಮತಿಯಿದೆ ಎಂದರು.
ಟೌನ್‌ಹಾಲ್‌ನಲ್ಲಿ ಸಾರ್ವಜನಿಕ ಸಭೆ ದೊಡ್ಡ ಗಣೇಶ ಮೂರ್ತಿಗಳನ್ನು ಇಡುವಲ್ಲಿ ಈ ಹಿಂದೆ ಅನುಮತಿ ನೀಡಿದ ಮಾರ್ಗದಲ್ಲಿ ಸಾಗಬೇಕಿದೆ. ಉಳಿದಂತೆ ಪ್ರತಿ ವಾರ್ಡ್ನಲ್ಲಿ ಎರಡು ಕಡೆ ಟ್ಯಾಂಕರ್ ಇರಲಿದೆ. ಪಿಒಪಿ ಗಣೇಶ ಮೂರ್ತಿ ನಿಷೇಧ ಮಾಡಲಾಗಿದ್ದು, ಅದರ ಬದಲಾಗಿ ಮಣ್ಣಿನ ಗಣೇಶನನ್ನು ಕೂರಿಸಲು ಮಾತ್ರ ಅವಕಾಶವಿದೆ ಎಂದು ಹೇಳಿದರು.
ನಿಮಜ್ಜನಕ್ಕೆ ಸೂಕ್ತ ವ್ಯವಸ್ಥೆ:ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಗಣೇಶ ನಿಮಜ್ಜನಕ್ಕೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರ ಪ್ರಮುಖ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಪ್ರಮುಖ ಸ್ಥಳ, ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ವಾರು ತಾತ್ಕಾಲಿಕ ಸಂಚಾರಿ ನಿಮಜ್ಜನ ಘಟಕ (ಮೊಬೈಲ್ ಟ್ಯಾಂಕ್)ಗಳ ವ್ಯವಸ್ಥೆ ಮಾಡಲಾಗುತ್ತದೆ. ಮೂರ್ತಿಗಳ ನಿಮಜ್ಜನಕ್ಕೆ ಗುರುತಿಸಿರುವ ಕೆರೆ, ಕಲ್ಯಾಣಿಗಳ ಬಳಿ ಭದ್ರತೆಯ ದೃಷ್ಠಿಯಿಂದ ಪೊಲೀಸ್ ಸಿಬ್ಬಂದಿ, ಬ್ಯಾರಿಕೇಡಿಂಗ್, ಸಿಸಿಟಿವಿ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ ಹಾಗೂ ಕ್ರೇನ್‌ಗಳ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.
ಪೊಲೀಸ್ ಭದ್ರತೆ:ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾತನಾಡಿ, ಪ್ರತಿ ವರ್ಷದಂತೆ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಬೇಕಿದೆ. ಈಗಾಗಲೇ ಎಲ್ಲಾ ಕಡೆ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಈ ಬಾರಿ ಯಾವುದೇ ರೀತಿಯ ಅನಾನುಕೂಲ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ, ಪೊಲೀಸ್ ಇಲಾಖೆಯಿಂದ ಬರುವ ಸಲಹೆ, ಸೂಚನೆಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಮೆರವಣಿಗೆ, ಮೆರವಣಿಗೆಯ ಮಾರ್ಗಕ್ಕೆ ಎಲ್ಲರೂ ಸಹಕಾರ ನೀಡಬೇಕು. ಹಬ್ಬದ ಬೇಳೆ ಅನಾನುಕೂಲ, ಅಚಾತುರ್ಯ ನಡೆಯದಂತೆ ನೋಡಿಕೊಳ್ಳಲಾಗುವುದು. ಎಲ್ಲಿಯೂ ಸಂಚಾರ ದಟ್ಟಣೆಯಾಗದಂತೆ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗಣೇಶ ನಿಮಜ್ಜನದ ಮೆರವಣಿಗೆ ವೇಳೆ ಪಟಾಕಿ, ಸಿಡಿಮದ್ದು ಸಿಡಿಸುವುದು ಹಾಗೂ ನಾಗರಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ ಗುಪ್ತಾ, ಸತೀಶ್ ಕುಮಾರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಪ್ರಮುಖರು, ವಿವಿಧ ಸಮುದಾಯಗಳ ಮುಖಂಡರು ಇದ್ದರು.
ಇದನ್ನೂ ಓದಿ:ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ತೆರೆ : ಅದ್ಧೂರಿಯಾಗಿ ನಡೆದ ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿ