ಕರ್ನಾಟಕ

karnataka

ಐಟಿ ದಾಳಿ ಅಂತ್ಯ: ಕೆಜಿಎಫ್ ಬಾಬು ವಿರುದ್ಧ ದೂರು ದಾಖಲಿಸಿದ ಚುನಾವಣಾ ಅಧಿಕಾರಿಗಳು

By

Published : Apr 20, 2023, 12:03 PM IST

ಕೆಜಿಎಫ್​ ಬಾಬು ನಿವಾಸದಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ವೇಳೆ ಸೀರೆ ಡಿ.ಡಿ. ಜೊತೆಗೆ ಮತದಾರರ ಗುರುತಿನ ಚೀಟಿ ಪತ್ತೆಯಾಗಿರುವ ಹಿನ್ನೆಲೆ ಚುನಾವಣಾಧಿಕಾರಿಗಳು ಕೆಜಿಎಫ್​ ಬಾಬು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೆಜಿಎಫ್ ಬಾಬು ವಿರುದ್ಧ ದೂರು
ಕೆಜಿಎಫ್ ಬಾಬು ವಿರುದ್ಧ ದೂರು

ಬೆಂಗಳೂರು: ಉದ್ಯಮಿ ಹಾಗೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಕೆಜಿಎಫ್ ಬಾಬುಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಚುನಾವಣಾ ಅಕ್ರಮ ಶಂಕೆ ಮೇರೆಗೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ವೇಳೆ ಸೀರೆ ಡಿ.ಡಿ. ಜೊತೆಗೆ ಮತದಾರರ ಗುರುತಿನ ಚೀಟಿ ಪತ್ತೆಯಾಗಿವೆ. ಮೆಲ್ನೋಟಕ್ಕೆ ಅಕ್ರಮ ಎಸಗಿರುವುದು ಕಂಡು ಬಂದ ಹಿನ್ನೆಲೆ ಬಾಬು ವಿರುದ್ದ ಎನ್​ಸಿಆರ್ ದಾಖಲಾಗಿದ್ದು, ನ್ಯಾಯಾಲಯದಿಂದ ಅನುಮತಿ‌ ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲು ಹೈಗ್ರೌಂಡ್ಸ್ ಪೊಲೀಸರು ಸಿದ್ದತೆ ನಡೆಸಿಕೊಂಡಿದ್ದಾರೆ.

ವಸಂತನಗರದಲ್ಲಿರುವ ರುಕ್ಸಾನ ಪ್ಯಾಲೇಸ್​ನಲ್ಲಿರುವ ಕೆಜಿಎಫ್ ನಿವಾಸದಲ್ಲಿ ನಿನ್ನೆ ಬೆಳಗ್ಗೆ ಐಟಿ ದಾಳಿ ನಡೆಸಿದ್ದರು. ಶೋಧ ಕಾರ್ಯಾಚರಣೆ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾಗಿವೆ. 1,925 ಚೆಕ್​ಗಳ ಜೊತೆಯಲ್ಲಿ ಮತದಾರರ ಚೀಟಿಗಳು, ಎಚ್​ಡಿಎಫ್​ಸಿ ಬ್ಯಾಂಕ್ ಅಕೌಂಟ್​ನ 50200060873761 ನಂಬರಿನ ಚೆಕ್​ಗಳು ಪತ್ತೆಯಾಗಿವೆ. ಅಲ್ಲದೇ ಚೆಕ್​ಗಳ ಜೊತೆ ವೋಟರ್ ಐಡಿ ಅಟ್ಯಾಚ್ ಮಾಡಿ ಇರಿಸಲಾಗಿತ್ತು. ಪ್ರತಿ ಚೆಕ್​ನಲ್ಲಿ 5000 ರೂ ನಮೂದು ಮಾಡಲಾಗಿದೆ.

ಇನ್ನು ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್​ಗಳಲ್ಲಿದ್ದ ಸೀರೆ, ಚಿಕ್ಕಪೇಟೆಗೆ ಸಂಬಂಧಿಸಿದ ಮುದ್ರಣ ಪ್ರತಿಗಳು, ವ್ಯಾನ್ ಹುಸೇನ್ ಕಂಪನಿಯ 481 ಸೂಟ್​ಗಳು ದೊರಕಿವೆ. ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಹಿನ್ನೆಲೆ ಶಿವಾಜಿನಗರ ವಲಯದ ಚುನಾವಣಾ ಉಸ್ತುವಾರಿಯಿಂದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಕೆಜಿಎಫ್ ಬಾಬು ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ದಾಖಲಿಸಿದ್ದು, ಇಂದು ಕೋರ್ಟ್ ಪರ್ಮೀಷನ್ ಪಡೆದು ಪೊಲೀಸರು ಎಫ್ ಐ ಆರ್ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.

ನಿನ್ನೆ ದಿನ ಕೆಜಿಎಫ್​ ಬಾಬು ಮನೆಯಲ್ಲಿ 2,000 ಸಾವಿರಕ್ಕೂ ಹೆಚ್ಚು ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ), ಐದು ಸಾವಿರ ಬೆಲೆಯ 5 ಸಾವಿರಕ್ಕೂ ಹೆಚ್ಚು ಸೀರೆಗಳು ದೊರೆತಿದ್ದವು. ಸೀರೆ ಹಾಗೂ ಡಿ.ಡಿ ಕವರ್​ಗಳ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿರುವುದು ಕಂಡು ಬಂದಿತ್ತು. ಕೆಜಿಎಫ್ ಬಾಬು ಮನೆ ಮೇಲೆ‌ ನಡೆಯುತ್ತಿರುವ ದಾಳಿ ಇದೇ ಮೊದಲಲ್ಲ. ಈ ಹಿಂದೆಯೂ ದಾಳಿ ನಡೆದಿತ್ತು. ಅಲ್ಲದೇ ಅಕ್ರಮವಾಗಿ ಹಣ ವರ್ಗಾವಣೆ ಕಾಯ್ದೆಯಡಿ‌ ಅವರ ವಿರುದ್ಧ ಜಾರಿ ನಿರ್ದೇಶನಾಲಯ‌ (ಇ.ಡಿ) ಪ್ರಕರಣ ದಾಖಲಿಸಿಕೊಂಡಿತ್ತು. ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ವ್ಯವಹಾರ‌‌ಗಳನ್ನು ಮಾಡಿಕೊಂಡಿರುವ ಬಾಬು ಅವರು ಅಕ್ರಮ ಹಣ ವರ್ಗಾವಣೆ ಮಾಡಿರುವ ಬಗ್ಗೆ ಇಡಿ ತನಿಖೆಯೂ ನಡೆಯುತ್ತಿದೆ.

ಕೆಜಿಎಫ್‌ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಈ ಭಾರಿ ತಯಾರಿ ನಡೆಸಿದ್ದರು. ಆದರೆ, ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆ ಈ ಬಾರಿಯ ಚುನಾವಣೆಗೆ ಚಿಕ್ಕಪೇಟೆ ಕ್ಷೇತ್ರದಿಂದ ಪತ್ನಿ ಶಾಝಿಯಾ ತರನ್ನುಮ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಕೆಜಿಎಫ್‌ ಬಾಬು ಅವರ ಆಸ್ತಿ ವಿವರ ಘೋಷಿಸಿದ್ದು, 1,621 ಕೋಟಿ ರೂ. ಆಸ್ತಿ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ: ಏನೆಲ್ಲ ಸಿಕ್ತು?

ABOUT THE AUTHOR

...view details