ಕರ್ನಾಟಕ

karnataka

ರಾಜ್ಯ ಸರ್ಕಾರದಿಂದ ರೈತರಿಗೆ 2,000 ರೂ.ವರೆಗೆ ಬರ, ಬೆಳೆ ನಷ್ಟ ಪರಿಹಾರ: ಸಿಎಂ

By ETV Bharat Karnataka Team

Published : Nov 30, 2023, 8:12 PM IST

Compensation for farmers: ಸಮೀಕ್ಷೆ ಆಧಾರದಲ್ಲಿ ಬೆಳೆ ನಷ್ಟ ಪರಿಹಾರವಾಗಿ 2,000 ರೂ.ವರೆಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

drought-crop-loss-compensation-for-farmers-from-karnataka-government
ರಾಜ್ಯ ಸರ್ಕಾರದಿಂದ ರೈತರಿಗೆ 2,000 ರೂ.ವರೆಗೆ ಬರ, ಬೆಳೆ ನಷ್ಟ ಪರಿಹಾರ: ಸಿಎಂ

ಬೆಂಗಳೂರು: ಕೇಂದ್ರ ಸರ್ಕಾರದ ಬರ ಪರಿಹಾರ ಬಿಡುಗಡೆಯಾಗುವ ತನಕ ರಾಜ್ಯದ ರೈತರಿಗೆ ಬರ, ಬೆಳೆ ನಷ್ಟ ಪರಿಹಾರವಾಗಿ ತಲಾ ಗರಿಷ್ಠ 2,000 ರೂ.ವರೆಗೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದಿಂದ‌ ಎನ್​ಡಿಆರ್​ಎಫ್​ ಅಡಿ ಬರ ಪರಿಹಾರ ಬಿಡುಗಡೆ ವಿಳಂಬ ಹಿನ್ನೆಲೆ ಮೊದಲ ಕಂತಿನಲ್ಲಿ ರೈತರಿಗೆ ಬೆಳೆ ಪರಿಹಾರವಾಗಿ ತಲಾ ಗರಿಷ್ಟ 2,000 ರೂ.ವರೆಗೆ ಬೆಳೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಕನಿಷ್ಠ 1,000 ರೂ. ನಷ್ಟ ಪರಿಹಾರ ನೀಡಲಾಗುತ್ತದೆ. ಜಮೀನಿನ ವಿಸ್ತೀರ್ಣದ ಆಧಾರದಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತದೆ. ನಾಲ್ಕೈದು ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರದಿಂದ ಹಣ ಬರುವವರೆಗೆ ಈ ರೀತಿ ಪಾವತಿ ಮಾಡುತ್ತೇವೆ. ಸಮೀಕ್ಷೆ ಆಧಾರದಲ್ಲಿ ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಬಾರಿ ರಾಜ್ಯದಲ್ಲಿನ ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬರದಿಂದಾಗಿ ರಾಜ್ಯ ಸುಮಾರು 48.19 ಲಕ್ಷ ಹೆಕ್ಟೇರ್​​ನಷ್ಟು ಬೆಳೆ ನಷ್ಟ ಆಗಿದೆ. ಒಟ್ಟು 33,770.10 ಕೋಟಿ ರೂ. ಬರ ನಷ್ಟ ಅಂದಾಜಿಸಲಾಗಿದೆ. ಈ ಪೈಕಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (NDRF) ನಡಿ 18,171.44 ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ. ಬಳಿಕ 21/09/2023ರಂದು ಮೊದಲ ಮೆಮೊರಾಡಂ ಕೊಟ್ಟಿದ್ದೆವು. ಬಳಿಕ ಕೇಂದ್ರದ ತಂಡ ಅಕ್ಟೋಬರ್ ನಲ್ಲಿ ಬರ ಅಧ್ಯಯನ ಮಾಡಿತು. ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಇದೆ. ಕೇಂದ್ರ ಬರ ಅಧ್ಯಯನ ತಂಡ ಸಭೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಬರದಿಂದ ರಾಜ್ಯದಲ್ಲಿ ಬೆಳೆ ನಷ್ಟ ಪರಿಹಾರ 4,663.12 ಕೋಟಿ ರೂ. ಆಗಿದೆ. ಈವರೆಗೆ ಬರ ಪರಿಹಾರ ಸಂಬಂಧ ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಭೆ ಕರೆದಿಲ್ಲ, ಪರಿಹಾರವನ್ನೂ ಕೊಟ್ಟಿಲ್ಲ. ಕಂದಾಯ ಸಚಿವರು, ಕೃಷಿ ಸಚಿವರು ದೆಹಲಿಗೆ ಹೋಗಿದ್ದಾರೆ. ಆಗ ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರು ಹಾಗೂ ಕೃಷಿ ಸಚಿವರೂ ಸಿಕ್ಕಿಲ್ಲ. ಬಳಿಕ ಅಧಿಕಾರಿಗಳನ್ನು ಭೇಟಿ ಮಾಡಿ ಬರ ಪರಿಸ್ಥಿತಿ ವಿವರಿಸಿದ್ದಾರೆ. ಆ ಮೇಲೆ ಕಂದಾಯ ಹಾಗೂ ಕೃಷಿ ಸಚಿವರು ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.

ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್​​ಗೆ 8,500 ರೂ. ಮಳೆ ಆಶ್ರಿತ ಬೆಳೆಗೆ ಪರಿಹಾರ ನಿಗದಿ ಮಾಡಿದೆ. ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್​​ಗೆ 17,000 ರೂ.‌, ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್​​ಗೆ 22,500 ರೂ. ಪರಿಹಾರ ಹಣ ನಿಗದಿ ಮಾಡಿದೆ. ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್​​ವರೆಗೆ ಮಾತ್ರ ಬೆಳೆ ಪರಿಹಾರ ನೀಡಲಾಗುತ್ತದೆ. ಕೇಂದ್ರ ಗೃಹ ಸಚಿವರಿಗೆ ನಾನು ಪತ್ರ ಬರೆದು, ನನಗೆ ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿದ್ದೇನೆ. ಆದರೆ ಈವರೆಗೆ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ತಿಳಿಸಿದರು.

ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ಬೆಳೆ ವಿಮೆ ಪರಿಹಾರವಾಗಿ 6.5 ಲಕ್ಷ ರೈತರಿಗೆ 440 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಒದಗಿಸಲು 327 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. 780 ಕೋಟಿ ರೂ. ಡಿಸಿಗಳ ಪಿಡಿ ಖಾತೆಯಲ್ಲಿ ಇದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಕಂದಾಯ ಸಚಿವರಿಗೆ ಸೂಚನೆ ನೀಡಿದ್ದೇನೆ. 60 ಹಳ್ಳಿಗಳಲ್ಲಿ ಟ್ಯಾಂಕರ್ ಗಳಲ್ಲಿ ನೀರು ಕೊಡಲಾಗುತ್ತಿದೆ. ಮೇವಿನ ಸಮಸ್ಯೆ ಈವರೆಗೆ ತಲೆದೋರಿಲ್ಲ. 7 ಲಕ್ಷ ಮೇವಿನ‌ ಬೀಜ ವಿತರಣೆ ಮಾಡಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.

ಯಡಿಯೂರಪ್ಪ ಇದ್ದಾಗಲೂ ಬರ, ನೆರೆ ಇತ್ತು ಎಂದ ಸಿಎಂ:ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯಕ್ಕೆ ಬರ ಬರುತ್ತೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ಯಡಿಯೂರಪ್ಪ ಬಂದಾಗ ಬರವೂ ಇತ್ತು, ನೆರೆಯೂ ಇತ್ತು. 12 ರಾಜ್ಯದಲ್ಲಿ ಬರ ಇದೆ. ಅಲ್ಲೆಲ್ಲಾ ನಾನು ಸಿಎಂ ಇದ್ದೇನಾ?. ಸಾಮಾನ್ಯವಾಗಿ ರಾಜ್ಯದಲ್ಲಿ ನಾಲ್ಕು ವರ್ಷಕ್ಕೊಮ್ಮೆ ಬರ ಬರುತ್ತೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮೂರು ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ:ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸುತ್ತ, ಮೂರು ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಮೂರು ರಾಜ್ಯಗಳಾದ ತೆಲಂಗಾಣ, ಛತ್ತೀಸ್​​ಘಡ ಹಾಗೂ ಮಧ್ಯಪ್ರದೇಶದಲ್ಲಿ ಗೆಲ್ಲಲಿದ್ದೇವೆ. ರಾಜಸ್ಥಾನದಲ್ಲಿ 50-50 ಇದೆ. ಲೋಕಸಭೆ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಕಂದಾಯ ಸಚಿವರ ಮಾಹಿತಿ:ಬೆಳೆ ನಷ್ಟ ಸಂಬಂಧ ಸಮೀಕ್ಷೆ ಆಧಾರದಲ್ಲಿ, ರೈತರ ಭೂಮಿ ವಿಸ್ತೀರ್ಣದ ಮೇಲೆ 1,000 ರೂ.ಗಳಿಂದ 2,000 ರೂ‌.ವರೆಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಜಮೀನು ವಿಸ್ತೀರ್ಣ, ಬೆಳೆ ನಷ್ಟವನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಬೆಳೆ ನಷ್ಟ ಪರಿಹಾರ ಹಣ ನೀಡುವ ಸಂದರ್ಭ ರೈತರಿಗೆ ರಾಜ್ಯ ಸರ್ಕಾರ ಎಷ್ಟು ಬೆಳೆ ಪರಿಹಾರ ಹಣ ಪಾವತಿಸಿದೆ, ಅಷ್ಟನ್ನು ಕಡಿತಗೊಳಿಸಿ ಬಾಕಿ ಉಳಿದ ಪರಿಹಾರವನ್ನು ರೈತರಿಗೆ ಪಾವತಿಸಲಿದೆ. ಬರಪೀಡಿತ 223 ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು 2,000 ರೂ.ವರೆಗಿನ ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇದನ್ನೂ ಓದಿ:ಪಂಚರಾಜ್ಯ ಚುನಾವಣೆಯಲ್ಲಿ ಕನಿಷ್ಠ ಮೂರು ಕಡೆ ಅಧಿಕಾರ ಹಿಡಿಯುತ್ತೇವೆ : ಸಚಿವ ಎಂ ಬಿ ಪಾಟೀಲ್​

ABOUT THE AUTHOR

...view details