ಕರ್ನಾಟಕ

karnataka

ಹುಲಿ ದಾಳಿ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ

By

Published : Feb 13, 2023, 4:13 PM IST

ಕೊಡಗಿನಲ್ಲಿ ಹುಲಿ ದಾಳಿಯಿಂದ ಇಬ್ಬರು ಮೃತಪಟ್ಟಿರುವ ಪ್ರಕರಣ - ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ - ಸಚಿವ ಜೆ.ಸಿ.ಮಾಧುಸ್ವಾಮಿ.

Minister J C Madhuswamy
ಹುಲಿ ದಾಳಿ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ಕೊಡಗಿನಲ್ಲಿ ಹುಲಿ ದಾಳಿ ಮಾಡಿ 12 ವರ್ಷದ ಬಾಲಕ ಹಾಗೂ ಸುಮಾರು 75 ವರ್ಷದ ವೃದ್ಧನನ್ನು ಕೊಂದು ತಿಂದಿರುವ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು. ಶೂನ್ಯ ವೇಳೆಯಲ್ಲಿ ಇಂದು ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಸ್ತಾಪಕ್ಕೆ ಸಚಿವರು ಉತ್ತರಿಸಿದರು.

ಕೊಡಗಿನಲ್ಲಿ ಹುಲಿ ದಾಳಿಯಿಂದ ಇಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಬಂದ ನಂತರ ಅವರ ಗಮನಕ್ಕೆ ಈ ವಿಚಾರ ತಂದು ಈ ಪ್ರಕರಣದ ಬಗ್ಗೆ ಸದನಕ್ಕೆ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಪರಿಹಾರದ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಅರಣ್ಯ ಇಲಾಖೆಯ ನಿರ್ಲಕ್ಷ್ಯ ಇದೆ:ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ್ದ ಬೋಪಯ್ಯ, ವಿರಾಜಪೇಟೆ ತಾಲ್ಲೂಕು ಕೆ. ಬಾಡಗ ಗ್ರಾಮದಲ್ಲಿ ನಿನ್ನೆ ಸಂಜೆ 4 ಗಂಟೆಯಲ್ಲಿ ಹುಲಿಯೊಂದು 12 ವರ್ಷ ಬಾಲಕನನ್ನು ಹಿಡಿದು ತಿಂದು ಹಾಕಿದೆ. ಈ ಗ್ರಾಮ ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹಾಗೆಯೇ ಇಂದು ಬೆಳಗ್ಗೆ ಇದೇ ಹುಲಿ 75 ವರ್ಷದ ವೃದ್ಧನನ್ನು ತಿಂದಿದೆ. ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಇದೆ.

ಸ್ಥಳೀಯ ಡಿಎಫ್ಓ ರವರನ್ನು ಅಮಾನತ್ತು ಮಾಡಬೇಕು. ನಿನ್ನೆಯೇ ಹುಲಿ ದಾಳಿಯ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅವರು ರಕ್ಷಣೆ ಒದಗಿಸಲು ಕ್ರಮ ಕೈಗೊಂಡಿಲ್ಲ. ಹಾಗಾಗಿ ಮತ್ತೆ ಬೆಳಿಗ್ಗೆ ಹುಲಿಗೆ ಬಲಿಯಾದ ಬಾಲಕನ ಅಜ್ಜನನ್ನೆ ತಿಂದು ಹಾಕಿದೆ. ಈ ಘಟನೆಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅವರನ್ನು ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು.

ಕೊಡಗಿನಲ್ಲಿ ಹುಲಿಗಳನ್ನು ನಿಯಂತ್ರಿಸಿ. ಇಲ್ಲದಿದ್ದರೆ ನಮಗೆ ಬಿಡಿ, ನಾವೇ ನಿಯಂತ್ರಿಸುತ್ತೇವೆ. ಕೊಡಗಿನಲ್ಲಿ ಹುಲಿ ಮದುವೆ ಪದ್ದತಿಯಿದೆ. ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್, ಡಿಎಫ್​ಒ ವಿರುದ್ಧ ಕ್ರಮ ಆಗಬೇಕು. ನಿನ್ನೆ ಸಂಜೆ ಹುಲಿ ದಾಳಿ ಮಾಡಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ಇಂದು ಬೆಳಿಗ್ಗೆ ಮತ್ತೆ ಹುಲಿ ದಾಳಿ ಮಾಡಿದೆ ಎಂದು ಹೇಳಿದರು.

ಕಾಡಂಚಿನ ಗ್ರಾಮದಲ್ಲಿರುವ ಶಾಸಕರ ಸ್ಥಿತಿ ಹೇಳಲು ಬಾರದು:ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ನ ಸದಸ್ಯ ಹೆಚ್.ಪಿ. ಮಂಜುನಾಥ್ ಅವರು, ಹುಲಿ ದಾಳಿಯಿಂದ ಮೃತಪಟ್ಟ ಬಾಲಕ ಮತ್ತು ವೃದ್ಧ ಹುಣಸೂರು ತಾಲ್ಲೂಕಿನ ಗ್ರಾಮದವರು. ಕೂಲಿ ಕೆಲಸಕ್ಕಾಗಿ ಕೊಡಗಿಗೆ ಹೋಗಿದ್ದರು. ಹುಡುಗ ಹುಲಿ ದಾಳಿಯಿಂದ ಮೃತಪಟ್ಟ ಸುದ್ದಿಯನ್ನು ಕೇಳಿ ಅವರ ವೃದ್ಧ ಕೊಡಗಿಗೆ ಹೋಗಿದ್ದಾಗ ಇಂದು ಬೆಳಿಗ್ಗೆ ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿದ ಆ ಕುಟುಂಬದ ಮನೆಯ ಯಜಮಾನಿ ಸಹ ಆಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಕಾಡಂಚಿನ ಗ್ರಾಮದಲ್ಲಿರುವ ಶಾಸಕರ ಸ್ಥಿತಿ ಹೇಳಲು ಬಾರದು. ಎಲ್ಲದಕ್ಕೂ ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ

ABOUT THE AUTHOR

...view details