ಕರ್ನಾಟಕ

karnataka

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಾಸಕ​ ಪೂಂಜಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

By

Published : Jun 9, 2023, 7:02 PM IST

Updated : Jun 9, 2023, 8:48 PM IST

ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

high-court-stays-case-against-mla-harish-poonja
ಶಾಸಕ​ ಪೂಂಜಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಬಿಜೆಪಿ ಶಾಸಕ ಹರೀಶ್​ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ''ಅರ್ಜಿದಾರರ ವಿರುದ್ಧದ ಐಪಿಸಿ ಸೆಕ್ಷನ್​ 153 ಎ ಅಡಿ ಕೇಸ್ ದಾಖಲು ಮಾಡಲು ಈ ಪ್ರಕರಣವು ಯೋಗ್ಯವಾಗಿಲ್ಲ. ಈ ಕಾರಣ ಹರೀಶ್ ಪೂಂಜಾ ವಿರುದ್ಧ ವಿಳಂಬವಾಗಿ ದೂರು ದಾಖಲು ಮಾಡಲಾಗಿದೆ. ಪೂಂಜಾ ಹೇಳಿಕೆ ನೀಡಿದ ಬಳಿಕ ಯಾವುದೇ ಶಾಂತಿ ಭಂಗದ ಕೃತ್ಯಗಳು ನಡೆದಿಲ್ಲ. ಈ ಹೇಳಿಕೆಯು ಪ್ರಚೋದನೆ ಸಷ್ಟಿಸಿಲ್ಲ'' ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಅಂಶವನ್ನು ಪುರಸ್ಕರಿಸಿದ ನ್ಯಾಯಪೀಠವು ಪ್ರಕರಣಕ್ಕೆ ವಿಚಾರಣೆ ತಡೆ ನೀಡಿ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಏನು? :ಬೆಳ್ತಂಗಡಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ವಿಜಯೋತ್ಸವವೊಂದರ ಸಂದರ್ಭದಲ್ಲಿ ಶಾಸಕ ಹರೀಶ್‌ ಪೂಂಜಾ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕಾರ್ಯಕರ್ತರನ್ನು ಹತ್ಯೆ ಮಾಡಿಸಿರುವುದಾಗಿ ತುಳು ಭಾಷೆಯಲ್ಲಿ ಮಾಡಿದ್ದ ಭಾಷಣದಲ್ಲಿ ಹೇಳಿದ್ದರು. "ಸತ್ಯಜಿತ್ ಸುರತ್ಕಲ್ ಎಂಬ ಹಿಂದೂ ನಾಯಕ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಿದ್ದರು. ನಾನು ಹಿಂದುತ್ವಕ್ಕೆ ದ್ರೋಹ ಮಾಡಿದ್ದರೆ, ಇಲ್ಲಿ ಬಂದು ನನ್ನನ್ನು ಸೋಲಿಸಲು ಸತ್ಯಣ್ಣ ಯತ್ನಿಸಿದರೆ ನಾನೂ ಒಪ್ಪಿಕೊಳ್ಳುತ್ತಿದ್ದೆ. ಆದರೆ, 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ಸಿದ್ದರಾಮಯ್ಯನವರಿಗೆ ನೀವು ಮತ ಕೇಳಿದ್ದೀರಿ. ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದ ಕಾಂಗ್ರೆಸ್ ಪರ ಮತ ಕೇಳಿದ್ದೀರಿ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದ್ದರು. ಈ ಭಾಷಣದ ಬೆನ್ನಲ್ಲೇ, ಪೂಂಜಾ ವಿರುದ್ಧ ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು.

ಇದನ್ನೂ ಓದಿ :HIGH COURT: ಮೆಟ್ರೋ ಕಾಮಗಾರಿಗೆ 203 ಮರಗಳ ತೆರವು, 45 ಮರಗಳ ಸ್ಥಳಾಂತರಕ್ಕೆ ಹೈಕೋರ್ಟ್ ಅನುಮತಿ

ಅಲ್ಲದೆ, ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ದೂರು ನೀಡುವಾಗ ಆಯಾ ಠಾಣೆಗಳ ಪೊಲೀಸರಿಗೆ ಸಲ್ಲಿಕೆ ಮಾಡಲಾಗಿತ್ತು. ಜೊತೆಗೆ, ಮುಖ್ಯಮಂತ್ರಿಗಳ ವಿರುದ್ಧ ಈ ರೀತಿಯ ಆರೋಪ ಮಾಡಿರುವುದು ಸರಿಯಲ್ಲ. ಆದ್ದರಿಂದ ಹರೀಶ್‌ ಪೂಂಜಾ ವಿಚಾರಣೆ ನಡೆಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು. ಕೋಮು ಪ್ರಚೋದಕ ಹಾಗೂ ದ್ವೇಷ ಉಂಟಾಗುವ ಭಾಷಣ ಮಾಡಿದ ಆರೋಪದ ಮೇಲೆ ಎಫ್​ಐಆರ್​ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಶಾಸಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ :ಬೆಂಗಳೂರು ನಗರಕ್ಕೆ ದಕ್ಷ ಸಾರಿಗೆ ವ್ಯವಸ್ಥೆ ಅಗತ್ಯವಿದೆ: ಹೈಕೋರ್ಟ್

Last Updated : Jun 9, 2023, 8:48 PM IST

TAGGED:

ABOUT THE AUTHOR

...view details