ಬೆಂಗಳೂರು:ಕಾಫಿ, ಟೀ, ಮೆಣಸು, ರಬ್ಬರ್ ಬೆಳೆಯಲು ಅರಣ್ಯ ಇಲಾಖೆಯ ಭೂಮಿಯನ್ನು ಲೀಸ್ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿಯನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಕಾಸಸೌಧದಲ್ಲಿ ಇಂದು (ಮಂಗಳವಾರ) ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ''ಸ್ವಾತಂತ್ರ್ಯ ಪೂರ್ವದಲ್ಲಿ ಕಾಫಿ, ಟೀ, ರಬ್ಬರ್ ಬೆಳೆಯಲು ಸಾವಿರಾರು ಎಕರೆ ಭೂಮಿಯನ್ನು ಲೀಸ್ಗೆ ನೀಡಲಾಗಿತ್ತು. ಲೀಸ್ ಹಣ ಬರದೇ ಇದ್ದ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ. ಎಕರೆಗೆ ಕೇವಲ ಎರಡು ರೂ. ನಿಂದ ಏಳು ರೂ. ಅಂತ ನಿಗದಿ ಮಾಡಿಕೊಡಲಾಗಿತ್ತು. 1997 ರಲ್ಲಿ ಹೆಕ್ಟೇರ್ ಗೆ 5 ಸಾವಿರ ರೂ. ಅಂತ ನಿಗದಿ ಮಾಡಲಾಗಿತ್ತು. ಆ ಪ್ರಕಾರ ಲೀಸ್ ಹಣ ಬಾಕಿ ಉಳಿಸಿಕೊಂಡ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲಾಗುತ್ತದೆ'' ಎಂದರು.
''ವಿರಾಜಪೇಟೆಯ ಮರ್ಕೆರಾ ಕಂಪನಿ 1,575 ಎಕರೆ ಭೂಮಿಯನ್ನು ಲೀಸ್ಗೆ ಪಡೆದುಕೊಂಡಿದ್ದು, ಥಾಮ್ಸನ್ ರಬ್ಬರ್ ಲಿ. 625 ಎಕರೆ ಗುತ್ತಿಗೆ ಪಡೆದಿದ್ದು, 2015 ರವರೆಗೆ 91.29 ಕೋಟಿ ರೂ. ಪಾವತಿಸಬೇಕಿದೆ. ನಿಲಂಬೂರ್ ರಬ್ಬರ್ ಕಂಪನಿ ಲಿಮಿಟೆಡ್ 713 ಎಕರೆ ಗುತ್ತಿಗೆ ಪಡೆದಿದ್ದು, 130.22 ಕೋಟಿ ರೂ. ಪಾವತಿಸಬೇಕಿದೆ. ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್ ಲಿಮಿಟೆಡ್ 1288 ಎಕರೆ ಗುತ್ತಿಗೆ ಪಡೆದಿದ್ದು 2022 ರವರೆಗೆ 536.66 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಗ್ಲೆನ್ ಲಾರೆನ್ಸ್ ಪ್ರೈ.ಲಿ. ಮತ್ತು ಟಾಟಾ ಕಂಪನಿ 943 ಎಕರೆ ಅರಣ್ಯ ಭೂಮಿ ಗುತ್ತಿಗೆ ಪಡೆದಿದ್ದು, 524 ಕೋಟಿ ರೂ. ಬಾಕಿ ಪಾವತಿಸಿಬೇಕಿದೆ.
ಚಾಮರಾಜನಗರದ ಹೊನ್ನಮಟ್ಟಿ ನೀಲಗಿರಿ ಪ್ಲಾಂಟೇಷನ್ ಲಿ. ಮತ್ತಿತರರಿಂದ 2015 ರವರೆಗೆ 25.36 ಕೋಟಿ ರೂ. ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿದೆ. ಒಟ್ಟಾರೆ ಎರಡು ಸಾವಿರ ಕೋಟಿ ರೂ.ಗೂ ಹೆಚ್ಚು ಲೀಸ್ ಹಣವನ್ನು ಕಂಪನಿಗಳು ಅರಣ್ಯ ಇಲಾಖೆಗೆ ಪಾವತಿ ಮಾಡಬೇಕಿದೆ. ಈ ಪೈಕಿ ಕೆಲವರು ಬಾಕಿ ಪಾವತಿಸುವ ಬದಲಿಗೆ ಕೋರ್ಟ್ ಮೊರೆ ಹೋಗಿದ್ದರು'' ಎಂದು ಹೇಳಿದರು.
ಬಡ್ಡಿ ಸಹಿತ ಬಾಕಿ ವಸೂಲಿಗೆ ಕ್ರಮ:''ಇದರಲ್ಲಿ ಥಾಮ್ಸನ್ ರಬ್ಬರ್ ಅರಣ್ಯ ಗುತ್ತಿಗೆ ಭೂಮಿಯನ್ನೇ ಬ್ಯಾಂಕ್ನಲ್ಲಿ ಅಡಮಾನ ಇಟ್ಟು ಸಾಲ ಪಡೆದಿದ್ದು, ಸಾಲ ಕಟ್ಟದ ಕಾರಣ ಬ್ಯಾಂಕ್ನವರು ಅದನ್ನು ಹರಾಜು ಹಾಕಿದ್ದಾರೆ. ಇದರ ಜೊತೆಗೆ ವಿರಾಜಪೇಟೆ ಒಂದರಿಂದಲೇ ಸಂಬಂಧಿಸಿದಂತೆ ಆಡಿಟ್ ವರದಿಯಲ್ಲಿ ಇಲಾಖೆಗೆ ಗುತ್ತಿಗೆ ಮೊತ್ತ 1,601 ಕೋಟಿ ರೂಪಾಯಿ ಬರಬೇಕು ಎಂದು ತಿಳಿಸಿದೆ. ಈ ಪೈಕಿ ಬಾಕಿ ಪಾವತಿಸುವಂತೆ ನೋಟಿಸ್ ನೀಡಿದ ಕೂಡಲೇ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, ಕೆಲವು ಪ್ರಕರಣ ಬಾಕಿ ಇದೆ. ಇದೆಲ್ಲ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ಒಂದು ವಿಶೇಷ ತಂಡ ರಚಿಸಲಾಗುವುದು. ಗುತ್ತಿಗೆ ಪಡೆದಿರುವ ಕಂಪನಿಗಳಿಂದ ಬರಬೇಕಿರುವ ಬಾಕಿ ವಸೂಲಿಗೆ ಒಂದು ವಿಶೇಷ ಪಿಸಿಸಿಎಫ್ ಅಥವಾ ಎಪಿಸಿಸಿಎಫ್ ದರ್ಜೆಯ ಅಧಿಕಾರಿಗೆ ಇದರ ಹೊಣೆ ನೀಡಲಾಗುವುದು. ಒಂದು ವರ್ಷದಲ್ಲಿ ಈ ಎಲ್ಲ ಬಾಕಿ, ದಂಡ ಶುಲ್ಕ ಮತ್ತು ಬಡ್ಡಿ ಸಹಿತ ಬಾಕಿ ವಸೂಲಿ ಮಾಡಲು ಕ್ರಮ ವಹಿಸಲಾಗುವುದು'' ಎಂದು ತಿಳಿಸಿದರು.