ಕರ್ನಾಟಕ

karnataka

ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ, ಅವರಿಗೆ ಶುಭ ಕೋರುತ್ತೇನೆ: ಡಿ ಕೆ ಶಿವಕುಮಾರ್​

By ETV Bharat Karnataka Team

Published : Nov 18, 2023, 5:45 PM IST

Updated : Nov 18, 2023, 8:19 PM IST

ದಿನಬೆಳಗಾದರೆ ಸುಳ್ಳು ಆರೋಪ ಮಾಡುವುದು ಹೆಚ್​ ಡಿ ಕುಮಾರಸ್ವಾಮಿ ಅವರ ಘನತೆಗೆ ಸರಿಯಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ.

dcm-dk-shivakumar-reaction-on-h-d-kumaraswamy
ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ, ಅವರಿಗೆ ಶುಭ ಕೋರುತ್ತೇನೆ: ಡಿ ಕೆ ಶಿವಕುಮಾರ್​

ಡಿಸಿಎಂ ಡಿ ಕೆ ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: "ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, "ಅವರು ಏನೇನೋ ದೊಡ್ಡ ಸ್ಕೀಮು, ತಂತ್ರ, ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲವೂ ನಡೆಯಲಿ ಬಿಡಿ. ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ" ಎಂದು ತಿಳಿಸಿದರು.

"ದಿನಬೆಳಗಾದರೆ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಸರಿಯಲ್ಲ. ಕುಮಾರಣ್ಣ ಹಾಗೂ ವಿಜಯೇಂದ್ರ ಅವರು ಈಗ ಪಾರ್ಟ್ನರ್​ಗಳು. ಅವರ ಮಧ್ಯೆಯೇ ಗೊಂದಲ ಇರುವಾಗ ನಾನು ಹೇಗೆ ಪ್ರತಿಕ್ರಿಯೆ ನೀಡಲಿ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪಕ್ಷದ ಅಧ್ಯಕ್ಷರಾಗಿದ್ದವರು. ಅವರು ಆ ಸ್ಥಾನಗಳಿಗೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಅವರ ತಂದೆಯವರು ಅನೇಕ ಬಾರಿ ಈ ಬಗ್ಗೆ ಸಲಹೆ ನೀಡಿದ್ದಾರೆ ಎಂಬ ವಿಚಾರ ಕೇಳಿದೆ. ದೇವೇಗೌಡರು, ಯಡಿಯೂರಪ್ಪ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಸದಾನಂದಗೌಡರು, ಬಸವರಾಜ ಬೊಮ್ಮಾಯಿ ಅವರು ಕೂಡ ಮಾಜಿ ಮುಖ್ಯಮಂತ್ರಿಗಳು. ಅವರುಗಳು ಇವರಂತೆ ಸುಮ್ಮ ಸುಮ್ಮನೆ ಮಾತನಾಡುತ್ತಾರಾ?" ಎಂದು ಪ್ರಶ್ನಿಸಿದರು.

"ದೇವರು, ಜನ ಕೊಟ್ಟ ಅವಕಾಶ, ಬೆಂಬಲಿಗರ ಸಹಾಯ, ತಂದೆ ತಾಯಿ ಆಶೀರ್ವಾದ, ತಮ್ಮದೇ ಆದ ಹೋರಾಟದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಆ ಸ್ಥಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ಮನಸ್ಸಿಗೆ ಬಂದಂತೆ ಈ ರೀತಿ ಮಾತನಾಡಿದರೆ ಪ್ರಯೋಜನವಿಲ್ಲ. ಮಾಜಿ ಮುಖ್ಯಮಂತ್ರಿ ಮಾತು, ವರ್ತನೆ ಎಂದರೆ ನಾವು ಹೆದರಿ ಗಡ, ಗಡ ನಡಗುವಂತೆ ಇರಬೇಕು" ಎಂದು ಟೀಕಿಸಿದರು.

"ನಮ್ಮ ಮಾಜಿ ಶಾಸಕ ಯತೀಂದ್ರ ಅವರು ತಮ್ಮ ತಂದೆಗಾಗಿ ಸ್ಥಾನ ತ್ಯಾಗ ಮಾಡಿದವರು. ನಾವು ಹಾಗೂ ನಮ್ಮ ಪಕ್ಷದ ಹೈಕಮಾಂಡ್ ಅವರನ್ನು ಎಂಎಲ್​ಸಿ ಮಾಡುತ್ತೇವೆ ಎಂದರೂ ಅದನ್ನು ಬೇಡ ಎಂದವರು. ಆತ ತಂದೆಯ ಕ್ಷೇತ್ರದಲ್ಲಿ ಕೆಡಿಪಿ ಸದಸ್ಯನಾಗಿ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ನೂರಾರು ಕೆಲಸಗಳಿರುತ್ತವೆ. ನಮ್ಮ ಕ್ಷೇತ್ರದಲ್ಲೂ ಅಧಿಕಾರಿಗಳ ವರ್ಗಾವಣೆ ಅರ್ಜಿ ಇಟ್ಟುಕೊಂಡು ಅನೇಕರು ಬರುತ್ತಾರೆ. ಹಾಗೆಂದು ಯತೀಂದ್ರ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಅರ್ಥವಲ್ಲ. ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿ ಖುಷಿಪಡಬೇಕು. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ" ಎಂದು ತಿಳಿಸಿದರು.

ಕುಮಾರಸ್ವಾಮಿ ಏನು ಬಿಜೆಪಿಯ ವಕ್ತಾರರೇ?:ಜಿ ಟಿ ದೇವೇಗೌಡರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, "ಎಲ್ಲಾ ಪಕ್ಷದ ಶಾಸಕರು ಕೆಲಸದ ವಿಚಾರವಾಗಿ ನನ್ನನ್ನು ಭೇಟಿ ಮಾಡುತ್ತಾರೆ. ನನಗೆ ಅನೇಕ ಸ್ನೇಹಿತರಿದ್ದಾರೆ. ಅವರ ಜೊತೆ ಊಟ, ಚರ್ಚೆ ಮಾಡುತ್ತೇವೆ. ಕುಮಾರಸ್ವಾಮಿ ಅವರು ಕೂಡ 40 ಜನ ಕಾಂಗ್ರೆಸ್ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಏನು ಬಿಜೆಪಿಯ ವಕ್ತಾರರೇ?" ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ದ್ವಂದ್ವ ನಿಲುವಿನಿಂದ ಹೆಚ್​ಡಿಕೆ ನಾಯಕತ್ವದ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ: ಸಚಿವ ಮಹದೇವಪ್ಪ

Last Updated : Nov 18, 2023, 8:19 PM IST

ABOUT THE AUTHOR

...view details