ETV Bharat / state

ದ್ವಂದ್ವ ನಿಲುವಿನಿಂದ ಹೆಚ್​ಡಿಕೆ ನಾಯಕತ್ವದ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ: ಸಚಿವ ಮಹದೇವಪ್ಪ

author img

By ETV Bharat Karnataka Team

Published : Nov 18, 2023, 2:29 PM IST

Minister Mahadevappa; ತಮ್ಮ ದ್ವಂದ್ವ ನಿಲುವಿನಿಂದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ತಮ್ಮ ನಾಯಕತ್ವದ ಮೌಲ್ಯವನ್ನು ದಿನೇ ದಿನೆ ಕಳೆದುಕೊಳ್ಳುತ್ತಿದ್ದಾರೆ ಎಂದು ಸಚಿವ ಮಹದೇವಪ್ಪ ಹೇಳಿದರು.

Minister Mahadevappa
Minister Mahadevappa

ಬೆಂಗಳೂರು: ಕುಮಾರಸ್ವಾಮಿ ತಮ್ಮ ದ್ವಂದ್ವ ನಿಲುವುಗಳ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ಮೌಲ್ಯವನ್ನು ದಿನೇ ದಿನೆ ಕಳೆದುಕೊಳ್ಳುತ್ತಿದ್ದಾರೆ. ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕ ಆಡಿದ್ದ ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಸಚಿವ ಹೆಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉತ್ತಮ ಸಾರ್ವಜನಿಕ ಬದುಕಿನ ಭಾಗವಾಗಿ ಈ ಹಿಂದೆಯೇ ಸೈದ್ಧಾಂತಿಕ ಬದ್ಧತೆಯ ಪ್ರಾಮುಖ್ಯತೆ ಮತ್ತು ಅದು ನಾಯಕತ್ವದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹಿಂದೆಯೇ ಅವರಿಗೆ ನಾನು ಎಚ್ಚರಿಸಿದ್ದೆ. ಆದರೆ, ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಅವರು ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸೈದ್ಧಾಂತಿಕವಾಗಿ ತಾವೆಷ್ಟು ಅಧಃಪತನಕ್ಕೆ ಜಾರಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಒಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ತೋರಬೇಕಿದ್ದ ಅವರು ಈಗಲೂ ಸಹ ಅಧಿಕಾರ ಎಂದರೆ ಅತಂತ್ರ ಸ್ಥಿತಿಯಲ್ಲಿ ದೊರಕುವ ಅನಾಯಾಸ ಅವಕಾಶ ಎಂದುಕೊಂಡಿದ್ದು ಇದೊಂದು ನಗೆಪಾಟಲಿನ ವಿಷಯವಾಗಿದೆ. ಬಿಜೆಪಿಯ ಎಲ್ಲ ಜನ ವಿರೋಧಿ ನೀತಿಗಳ ಸಂದರ್ಭದಲ್ಲಿ ಮೌನವಾಗಿದ್ದು ಕೆಲವಕ್ಕೆ ಬೆಂಬಲವನ್ನೂ ನೀಡಿದ ಕುಮಾರಸ್ವಾಮಿ ಅವರು ಅಧಿಕಾರ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ಬಹಳಷ್ಟು ಹತಾಶೆಯಿಂದ ವರ್ತಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮನೆಗೆ ಕರೆಂಟ್ ಪಡೆದುಕೊಂಡ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡಬಾರದು ಎಂದು ಬೋಧಿಸುವ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗಳು ಒಂದೆರಡು ಗಂಟೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋದರೆ ಇವರಿಗೆ ರಾಜ್ಯದ ಸಮಸ್ಯೆಗಿಂತ ಕ್ರಿಕೆಟ್ ನೋಡುವುದು ಮುಖ್ಯ ಎಂದು ಅತ್ಯಂತ ಬಾಲಿಶತನದ ಹೇಳಿಕೆಯನ್ನು ನೀಡಿದ್ದರು. ತಾನು ಮಾತ್ರ ಏನಾದರೂ ಹೇಳಬಹುದು, ಮಿಕ್ಕವರೆಲ್ಲರೂ ಇವರು ಅಪೇಕ್ಷಿಸುವ ಆದರ್ಶತನದಿಂದ ಇರಬೇಕು ಎಂದು ಬಯಸುವ ಕುಮಾರಸ್ವಾಮಿ ಅವರು ತಮ್ಮ ದ್ವಂದ್ವ ನಿಲುವುಗಳ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ಮೌಲ್ಯವನ್ನು ದಿನೇ ದಿನೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ತಳಬುಡವಿಲ್ಲದ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆಗಳನ್ನು ಮಾಡಿಲ್ಲವೇ? ಅದನ್ನೂ ಅವರು ದಂಧೆ ಎಂದು ಪರಿಗಣಿಸುತ್ತಾರಾ ಎಂಬುದನ್ನು ಸ್ಪಷ್ಟ ಪಡಿಸಲಿ. ಓರ್ವ ಪ್ರಾದೇಶಿಕ ಪಕ್ಷದ ನಾಯಕನಾಗಿ, ರಾಜ್ಯದ ಜನರ ಸಂಕಷ್ಟಗಳಿಗೆ ತೆರೆದ ಮನಸ್ಸಿನಿಂದ ದನಿಯಾಗುವ ಬಹುದೊಡ್ಡ ಜವಾಬ್ದಾರಿ ಕುಮಾರಸ್ವಾಮಿ ಅವರ ಮೇಲಿದೆ. ಆದರೆ, ಅತಂತ್ರ ಸ್ಥಿತಿಯಲ್ಲಿ ಅಧಿಕಾರ ಪಡೆಯುವ ಉದ್ದೇಶ ಹೊಂದಿರುವ ಅವರಿಗೆ, ಜನರ ಬದುಕಿನ ಕಷ್ಟಗಳಾಗಲೀ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ನಿರ್ವಹಿಸುವ ಪಾತ್ರದ ಕುರಿತಾಗಲೀ ತಿಳಿದಿಲ್ಲ ಎಂಬುದಕ್ಕೆ ಅವರ ನಡವಳಿಕೆಗಳೇ ಮತ್ತೆ ಮತ್ತೆ ಸಾಕ್ಷಿ ಎನ್ನುವಂತಿವೆ ಎಂದು ಕುಟುಕಿದ್ದಾರೆ.

ಆರೋಗ್ಯಕರ ಪ್ರಜಾಪ್ರಭುತ್ವದ ದೃಷ್ಟಿಯಿಂದ ಪ್ರತಿಪಕ್ಷಗಳು ಏನು ಮಾಡಬೇಕು ಎಂಬುದರ ಬಗ್ಗೆಯೂ ಆಡಳಿತ ಪಕ್ಷವೇ ಸಲಹೆ ನೀಡಬೇಕಾದ ಪರಿಸ್ಥಿತಿ ಮೂಡುತ್ತಿದ್ದು, ಇಂತಹ ಪರಿಸ್ಥಿತಿಗೆ ಕುಮಾರಸ್ವಾಮಿ ಆದಿಯಾಗಿ ಬಹಳಷ್ಟು ಮಂದಿ ಕಾರಣರಾಗುತ್ತಿದ್ದಾರೆ ಎಂಬುದನ್ನು ಅತ್ಯಂತ ಬೇಸರದಿಂದಲೇ ಹೇಳಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಾತಿನಲ್ಲಿ ಮೌಲ್ಯಗಳ ಮಥನ, ಕೊನೆಗೆ ಝಣ ಝಣ ಕಾಂಚಾಣ, ಇದೇ ಸಿಎಂ ಅಂತರಂಗ ಶುದ್ಧಿ: ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.