ಕರ್ನಾಟಕ

karnataka

ಬಸವಣ್ಣನವರ ಅಶಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ವ್ಯಕ್ತಿ ಕೃಷ್ಣ ಭಟ್ಟರು: ದತ್ತಾತ್ರೇಯ ಹೊಸಬಾಳೆ

By

Published : Aug 6, 2023, 8:56 AM IST

Updated : Aug 6, 2023, 9:05 AM IST

ಬೆಂಗಳೂರಿನ ಅರಮನೆ ರಸ್ತೆಯ ಭಾರತೀಯ ಸ್ಕೌಟ್ಸ್ ಭವನದಲ್ಲಿ ಪ್ರೊ. ಪಿ ವಿ ಕೃಷ್ಣಭಟ್ಟರ ಕುರಿತಾದ ಪಥದರ್ಶಿ ಲೇಖನ ಸಂಗ್ರಹ ಕೃತಿ ಲೋಕಾರ್ಪಣೆ ಮಾಡಲಾಯಿತು.

Pathdarshi Book release
ದತ್ತಾತ್ರೇಯ ಹೊಸಬಾಳೆ

ಬೆಂಗಳೂರು : ಮರ ಒಂದು ಕಡೆ ಬೆಳೆದು ಹಣ್ಣು ನೀಡುತ್ತದೆ. ಆದರೆ ಸತ್ಪುರುಷರು ಎಲ್ಲೆಡೆ ಸಂಚರಿಸಿ ಫಲ ನೀಡುತ್ತಾರೆ. ಅಂತಹ ಸತ್ಪುರುಷರಲ್ಲಿ ಪ್ರೊ. ಪಿ ವಿ ಕೃಷ್ಣಭಟ್ಟರು ಒಬ್ಬರಾಗಿದ್ದಾರೆ. ಸಂಘಟನೆಯನ್ನು ಕಟ್ಟಿ ಕಾರ್ಯಕರ್ತರ ವರ್ತಮಾನ ಭವಿಷ್ಯವನ್ನು ರೂಪಿಸಿದ್ದಾರೆ. ಕಳಕಳಿಯಿಂದ ಸಮಾಜದ ಹೊರೆ ಹೊತ್ತು ಮುನ್ನಡೆಸಿರುವ ಅವರು ದಣಿವರಿಯದ ಜೀವಿಯಾಗಿದ್ದಾರೆ. ಬಸವಣ್ಣನವರ ಅಶಯವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.

ನಗರದ ಅರಮನೆ ರಸ್ತೆಯ ಭಾರತೀಯ ಸ್ಕೌಟ್ಸ್ ಭವನದಲ್ಲಿ ಪ್ರೊ. ಪಿ ವಿ ಕೃಷ್ಣಭಟ್ಟರ ಕುರಿತ ಪಥದರ್ಶಿ ಲೇಖನ ಸಂಗ್ರಹ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅನಾರೋಗ್ಯದ ಸಮಯದಲ್ಲಿ ಕೂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್ ಗಳನ್ನು ತಪ್ಪಿಸದೆ ಹಾಸಿಗೆಯ ಮೇಲೆ ಮಲಗಿ ಪಾಲ್ಗೊಂಡಿದ್ದಾರೆ. ಕೃಷ್ಣ ಭಟ್ಟ ಸತತವಾಗಿ ಭಾರತೀಯತೆಯನ್ನು ಹದಿಹರೆಯದವರಲ್ಲಿ ಕನಸುಗಳಾಗಿ ಬಿತ್ತಿ ಪೋಣಿಸಿದ್ದಾರೆ. ಧ್ಯೇಯ ಫಥದಲ್ಲಿ ನಡೆಯುತ್ತ ಅಸಂಖ್ಯಾತ ಜೀವಿಗಳಿಗೆ ಜೀವನ ದಾನ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :ಅಂತರ್ಜಾತಿ ವಿವಾಹಕ್ಕೆ ಸಂಘಪರಿವಾರದ ಸಹಮತವಿದೆ : ದತ್ತಾತ್ರೇಯ ಹೊಸಬಾಳೆ

'ಪಥದರ್ಶಿ' ಪುಸ್ತಕದ ಮುಖಪುಟದಲ್ಲಿ ಶತಾವಧಾನಿ ಗಣೇಶ್ ಉತ್ತಮವಾಗಿ ಕೃಷ್ಣಭಟ್ಟರ ಕುರಿತು ವ್ಯಾಖ್ಯಾನಿಸಿದ್ದಾರೆ. ಅವರನ್ನು ಸಂಘಟನೆಯ ಕಾರ್ಯಕರ್ತನಾಗಿ ನೋಡಿದೆ, ಚಿಂತಕನಾಗಿ ಕಂಡೆ, ಸ್ನೇಹದ ಸತ್ಯ ಮೂರುತಿಯಾಗಿ ಸಾಕ್ಷಾತ್ಕರಿಸಿದೆ. ಅವರು ಹೇಳಿದ ಮೇಲೆ ಎರಡನೇ ಮಾತು ಇಲ್ಲ. ಬಡ ರೈತರ ಸಂಕಟಕ್ಕೆ ಕಣ್ಣೀರು ಹಾಕಿರುವುದನ್ನು ಮತ್ತು ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚಿರುವುದನ್ನು ಈ ಪುಸ್ತಕದಿಂದ ಮನಗಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಪಥದರ್ಶಿ ಲೇಖನ ಸಂಗ್ರಹ ಕೃತಿ ಲೋಕಾರ್ಪಣೆ ಕಾರ್ಯಕ್ರಮ

ಇವರ ಜೊತೆಗೆ ಹಲವು ವಿಚಾರಗಳನ್ನು ಸಂಘಟನೆಯ ಸಮಯದಲ್ಲಿ, ಯಾತ್ರಾ ಸಮಯದಲ್ಲಿ ಅವರಲ್ಲಿನ ಹಾಸ್ಯ ಚಿಂತನೆಯನ್ನು ಕಂದವರಲ್ಲಿ ನಾನೂ ಒಬ್ಬನಾಗಿದ್ದೇನೆ. ಅವರನ್ನು ನಾನೂ ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆ ಎಂದು ಹೇಳುವುದಿಲ್ಲ. ಆದರೆ, ಅವರು ನಾಡಿಗೆ ಸಮಾಜಕ್ಕೆ, ಸಂಘಟನೆಗೆ ಸಂಪತ್ತು ಎಂದು ಮಾತ್ರ ಸ್ಪಷ್ಟವಾಗಿ ಹೇಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, "ಕೃಷ್ಣ ಭಟ್ಟರು ಆದರ್ಶ ಪುರುಷರಾಗಿ ತಮ್ಮ ಜೀವನ ಸಾಗಿಸಿದ್ದಾರೆ. ಜೀವನದ ಅನುಭವ, ರಾಷ್ಟ್ರಕ್ಕೆ ಶಕ್ತಿ ಸಾಮರ್ಥ್ಯವನ್ನು ತುಂಬುವ ಕೆಲಸ ಮಾಡಿ ದೇಶಾದ್ಯಂತ ಮಾನ್ಯತೆ ಪಡೆದಿದ್ದಾರೆ. ನನಗೂ ಮಾರ್ಗದರ್ಶಕರಾಗಿ ಕೆಲಸ ಮಾಡಿಸಿದ್ದಾರೆ. ಇಂತಹ ಗುರು ಸಮಾನರಾದ ವ್ಯಕ್ತಿಗಳು ಸಮಾಜಕ್ಕೆ ಬೇಕಾಗಿದ್ದಾರೆ" ಎಂದು ಹೇಳಿದರು.

ಯಾವುದೇ ಆಡಂಬರ ಇಲ್ಲದೆ ದೀಪದಿಂದ ಮತ್ತೊಂದು ದಿಪ ಹಚ್ಚುವ ರೀತಿಯಲ್ಲಿ ಜ್ಞಾನ ಮತ್ತು ಅನುಭವದಿಂದ ಆದರ್ಶ ಯುವ ಪಡೆಯನ್ನು ಕಟ್ಟುವ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ನಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಾಜನೀತಿ, ಸಮಾಜಶಾಸ್ತ್ರ ಸೇರಿದಂತೆ ಪಾಂಡಿತ್ಯ ಹೊಂದಿರುವ ಅವರು ನಿಗರ್ವಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಎಲ್ಲರಲ್ಲೂ ದೇಶಪ್ರೇಮದ ಬೀಜ ಬಿತ್ತಿ, ತಾಯಿ ಭಾರತಾಂಬೆಗೆ ಉತ್ತಮ ರೀತಿಯಲ್ಲಿ ಸೇವೆ ಮಾಡುತ್ತಾ ಬಂದಿರುವುದು ಅವರ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :‘ಹಿಂದೂ ಸಮಾಜದಲ್ಲಿ ಜಾತಿಯಾಧಾರಿತ ಅಸ್ಪೃಷ್ಯತೆ ದೂರವಾಗಬೇಕೆಂಬುದೇ ಆರ್​ಎಸ್​ಎಸ್​ನ ಸ್ಪಷ್ಟ ನಿಲುವು’

"ಈ ಪುಸ್ತಕ ಬಿಡುಗಡೆ ವಿಶೇಷವಾದ ಸಂದರ್ಭವಾಗಿದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ತರಹ ನಾನು ವಿಭಿನ್ನ ಪಥದಲ್ಲಿ ರಾಜಕೀಯ ದಾರಿಯನ್ನು ತುಳಿದೆ. ಎಬಿವಿಪಿ ಅಧ್ಯಕ್ಷನಾಗಿ ಚುನಾವಣೆ ಮೂಲಕ ಆಯ್ಕೆಯಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿರುವುದನ್ನು ಮರೆಯಲು ಸಾಧ್ಯವಿಲ್ಲ" ಎಂದು ಹಿರಿಯ ರಾಜಕೀಯ ಧುರೀಣ ಪಿ ಜಿ ಆರ್ ಸಿಂಧ್ಯ ಹೇಳಿದರು.

1970 ರಲ್ಲಿ ಕೃಷ್ಣ ಭಟ್ಟರನ್ನು ಕಂಡಿದ್ದ ನಾನು ಈಗಲೂ ಅವರನ್ನು ಹಾಗೆಯೇ ಕಾಣುತ್ತೇನೆ. ಅಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಲ್ಲಿ ಇದ್ದವರು ಜೆಪಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಈಗ ರಾಜಕೀಯ ಚುಕ್ಕಾಣಿ ಹಿಡಿದಿರುವುದು ಸಂತಸ ತರುತ್ತಿದೆ. ಶ್ರದ್ಧೆ, ದೇಶಭಕ್ತಿ ಸೇರಿದಂತೆ ಉತ್ತಮ ರೀತಿಯ ಮೌಲ್ಯವನ್ನು ಯುವಕರಲ್ಲಿ ಮೂಡಿಸಿ, ಉತ್ತಮ ರಾಜಕೀಯ ಧುರೀಣರನ್ನು ಸೃಷ್ಟಿಸುವುದರಲ್ಲಿ ಕೃಷ್ಣ ಭಟ್ಟರ ಕೊಡುಗೆಯಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಅಭಿಪ್ರಾಯಪಟ್ಟರು.

"ಮಹಾ ಪುರುಷರ ಋಣವನ್ನು ತೀರಿಸುವ ಕೆಲಸ ಕಷ್ಟಸಾಧ್ಯ. ಇಲ್ಲಿ ಅವರ ಮಕ್ಕಳು ಪಿತೃ ಋಣವನ್ನು ಪೂರೈಸುವ ಕೆಲಸ ಮಾಡಿದ್ದಾರೆ. ಆದರೆ, ಕೃಷ್ಣ ಭಟ್ಟರತರಹದ ಉತ್ಕೃಷ್ಟ ವ್ಯಕ್ತಿಗಳ ಋಷಿ ಋಣವನ್ನು ತೀರಿಸುವ ಕೆಲಸ ಸಮಾಜದ್ದಾಗಿದೆ" ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಾಜಿ ಅಧ್ಯಕ್ಷ ರಾಜಕುಮಾರ್ ಭಾಟಿಯಾ ಹೇಳಿದರು. ಈ ವೇಳೆ ಲೇಖಕ ಪ್ರೊ. ಕೃಷ್ಣ ಭಟ್, ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ್, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Last Updated : Aug 6, 2023, 9:05 AM IST

ABOUT THE AUTHOR

...view details