ಕರ್ನಾಟಕ

karnataka

ಶೃಂಗೇರಿ ಶಾಸಕ ರಾಜೇಗೌಡ ಕ್ಷಮೆ ಯಾಚಿಸಬೇಕು: ಸಿ ಟಿ ರವಿ ಆಗ್ರಹ

By

Published : Jan 24, 2023, 5:44 PM IST

ct ravi reaction on td rajegowda statement
ಶೃಂಗೇರಿ ಶಾಸಕ ರಾಜೇಗೌಡ ಕ್ಷಮೆ ಯಾಚಿಸಬೇಕು:ಸಿಟಿ ರವಿ ಆಗ್ರಹ.. ()

ದತ್ತಪೀಠ ಮತ್ತು ಅಯೋಧ್ಯೆ ಬಗ್ಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಹೇಳಿಕೆ - ಶಾಸಕ ಸಿ ಟಿ ರವಿ ಖಂಡನೆ - ಕ್ಷಮೆಯಾಚನೆಗೆ ಆಗ್ರಹ

ಬೆಂಗಳೂರು:ದತ್ತಪೀಠ ಮತ್ತು ಅಯೋಧ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಗ್ರಹಿಸಿದರು. ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ಶಾಸಕ ಟಿಡಿ ರಾಜೇಗೌಡ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಶೃಂಗೇರಿ ಶಾಸಕರು ತಾಯಿ ಶಾರದೆ ಇರುವ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ದತ್ತಮಾಲೆ, ಅಯೋಧ್ಯೆ ಬಗ್ಗೆ ಅವರ ಹೇಳಿಕೆ ದುರಾದೃಷ್ಟಕರ. ದತ್ತಪೀಠ, ಅಯೋಧ್ಯೆ ಬಗ್ಗೆ ಮಾತಾಡಿದವರೆಲ್ಲ ರಾಜಕೀಯವಾಗಿ ಅಡ್ರೆಸ್ ಇಲ್ಲದಂತಾಗಿದ್ದಾರೆ. ರಾಜೇಗೌಡರು ಕೂಡಲೇ ಕ್ಷಮೆ ಕೇಳಿದರೆ ಅವರ ಮನೆತನದ ಗೌರವವೂ ಉಳಿಯುತ್ತದೆ ಎಂದರು.

ಎಮ್‌ಎಲ್‌ಸಿ ಗೋವಿಂದರಾಜು ಅವರ ಡೈರಿ ದೆಹಲಿಗೆ ಕಪ್ಪ ಕಾಣಿಕೆ ಕೊಟ್ಟ ಕಥೆ ಹೇಳುತ್ತದೆ:ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿದ ಸಿ ಟಿ ರವಿ, ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿದ್ದವು. ಲೋಕೋಪಯೋಗಿ ಇಲಾಖೆ ಹಗರಣ, ಹಾಸಿಗೆ ದಿಂಬು ಹಗರಣ ನಡೆಯಿತು. ಎಮ್‌ಎಲ್‌ಸಿ ಗೋವಿಂದರಾಜು ಅವರ ಡೈರಿ ದೆಹಲಿಗೆ ಕಪ್ಪ ಕಾಣಿಕೆ ಕೊಟ್ಟ ಕಥೆ ಹೇಳುತ್ತದೆ, ಪ್ರಾಮಾಣಿಕರು ಕಪ್ಪ ಕಾಣಿಕೆಗಳನ್ನು ಕೊಡುತ್ತಾರಾ?. ನಾವು ನಿರ್ದೋಷಿಗಳು, ಒಂದೇ ಒಂದು ಪೈಸೆ ಭ್ರಷ್ಟಾಚಾರ ಮಾಡಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಅವರು ಹೇಳಿದ್ದು ನಿಜ, ಪೈಸೆ ಲೆಕ್ಕದಲ್ಲಿ ಹಗರಣ, ಅಕ್ರಮ ನಡೆಯಲ್ಲ. ನೀವು ಪೈಸೆ ಲೆಕ್ಕದಲ್ಲಿ ಹಗರಣ ಮಾಡಿಲ್ಲ, ಮಾಡಿರೋದೆಲ್ಲ ಸಾವಿರಾರು ಕೋಟಿ ಲೆಕ್ಕದಲ್ಲಿ, ದೊಡ್ಡ ದೊಡ್ಡ ಲೆಕ್ಕದಲ್ಲಿ ಅಕ್ರಮ ಮಾಡಿದ್ದೀರಿ ನೀವು ಎಂದು ವಾಗ್ದಾಳಿ ನಡೆಸಿದರು.

ನಮ್ಮ ವಿರುದ್ಧ ದಾಖಲೆ ಇಟ್ಟು ಆರೋಪ ಮಾಡಲಿ:ಸಿದ್ದರಾಮಯ್ಯ ಪ್ರಾಮಾಣಿಕರು ಆಗಿದ್ದಿದ್ದರೆ ಲೋಕಾಯುಕ್ತ ಸಂಸ್ಥೆಯನ್ನು ಯಾಕೆ ಮುಚ್ಚಿದ್ರು ಅಂತ ಹೇಳಲಿ ಎಂದು ಸಿದ್ದರಾಮಯ್ಯಗೆ ಸವಾಲೆಸೆದ ಸಿ ಟಿ ರವಿ, ದಲಿತರನ್ನು, ಹಿಂದುಳಿದವರನ್ನು ವಿಭಜಿಸಲು ಮುಂದಾಗಿದ್ದರು. ಇದು ಅವರಿಗೆ ತಿರುಗು ಬಾಣ ಆಯಿತು. ಲಿಂಗಾಯತ ಧರ್ಮ ಮಾಡಲು ಹೋದರು, ಇದೆಲ್ಲ ಆಗದ ಹಿನ್ನೆಲೆಯಲ್ಲಿ ಹತಾಷರಾಗಿ ಪ್ರತಿಭಟನೆ ಮಾಡಿದ್ದಾರೆ. ಸೋಮವಾರ ನಡೆದ ಪ್ರತಿಭಟನೆ ಅವರ ರಾಜಕೀಯದ ಟೂಲ್ ಕಿಟ್ ನ ಒಂದು ಭಾಗ ಅಷ್ಟೇ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರನ್ನು ಒಡೆಯಲು ಹೋಗಿದ್ದೂ ಒಂದು ಟೂಲ್ ಕಿಟ್, ನಮ್ಮ ವಿರುದ್ಧ ದಾಖಲೆ ಇಟ್ಟು ಆರೋಪ ಮಾಡಲಿ. ಕಾಂಗ್ರೆಸ್‌ನವರು ದಾಖಲೆ ಇಲ್ಲದೇ ಆರೋಪ ಮಾಡೋದೂ ಒಂದು ಟೂಲ್ ಕಿಟ್ ಎಂದು ಆರೋಪಿಸಿದರು.

ಕರಾವಳಿ ಜಿಲ್ಲೆಗೆ ಬಂದು ನಾವೂ ಹಿಂದೂಗಳು ಅಂತಾರೆ, ಉದ್ಧದ ತಿಲಕ ಇಟ್ಕೋತಾರೆ. ಕುಂಕುಮ ಕಂಡರೆ ಭಯ ಅನ್ನೋರೇ ಅಲ್ಲಿಗೆ ಬಂದರೆ ನಾವೂ ಹಿಂದೂ ಅಂತಾರೆ ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.

ಆಂತರಿಕ ಭಿನ್ನಾಭಿಪ್ರಾಯ ಕಾಂಗ್ರೆಸ್ ನಲ್ಲಿದೆ:ಬಿಜೆಪಿಯಲ್ಲಿ ಆಂತರಿಕ‌ ಭಿನ್ನಾಭಿಪ್ರಾಯ ಇದೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿ ಟಿ ರವಿ, ಹುಣ್ಣು ಬಹಳ ದಿನ ಮುಚ್ಚಿಡಲು ಆಗಲ್ಲ, ಕಾಂಗ್ರೆಸ್ ನಲ್ಲೇ ಭಿನ್ನಾಭಿಪ್ರಾಯ ಇದೆ, ಅವರ ಕಚ್ಚಾಟ ಬೀದಿಗೆ ಬಂದಿದೆ. ಉಗ್ರಪ್ಪನವರೇ ದುಡ್ಡು ಕೊಟ್ಟು ನನ್ನ ಸೋಲಿಸಿದರು ಅಂದಿದ್ದಾರೆ ಎಂದರು.

ಮಾಧುಸ್ವಾಮಿ ಹೇಳಿಕೆ ಅವರಿಗೂ ಅನ್ವಯ:ಸಚಿವಮಾಧುಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಬಿಜೆಪಿ ಅಂದರೆ ಮಾಧುಸ್ವಾಮಿ ಅವರನ್ನು ಹೊರತುಪಡಿಸಿ ಅಲ್ಲ, ಮಾಧುಸ್ವಾಮಿ ಅವರನ್ನೂ ಸೇರಿಸಿ ಬಿಜೆಪಿ ಇದೆ. ಅಗ್ರೆಸ್ಸಿವ್ ಆಗಬೇಕು ಅಂದರೆ ಮಾಧುಸ್ವಾಮಿ ಅವರೂ ಸೇರಿ ಅಗ್ರೆಸ್ಸಿವ್ ಆಗಬೇಕು. ಬಿಜೆಪಿಯವ್ರು ಸ್ಟ್ರಾಂಗ್ ಇಲ್ಲ ಅಂದರೆ ಮಾಧುಸ್ವಾಮಿ ಅವರೂ ಸೇರುತ್ತಾರೆ, ಅವರನ್ನೂ ಸೇರಿ ನನ್ನನ್ನೂ ಸೇರಿ ಎಲ್ಲರೂ ಸ್ಟ್ರಾಂಗ್ ಆಗಬೇಕು, ಅಗ್ರೆಸ್ಸಿವ್ ಆಗಬೇಕು ಅದು ಸ್ವಾಭಾವಿಕ ಎಂದರು.

ಇನ್ನೊಬ್ಬರ ಕಡೆಗೆ ಹೂಡಿದ ಬಾಣ ಇವರಿಗೂ ತಿರುಗು ಬಾಣ ಆಗುತ್ತದೆ:ಕೋಲಾರದಲ್ಲಿ ಸಿದ್ದರಾಮಯ್ಯ ಪರ ಕರಪತ್ರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ನಾನು ಸೈದ್ಧಾಂತಿಕ ಕಾರಣಕ್ಕೆ ಮಾತ್ರ ವಿರೋಧ ಮಾಡೋನು, ವ್ಯಕ್ತಿಗತವಾಗಿ ಯಾರನ್ನೂ ವಿರೋಧ ಮಾಡಲ್ಲ. ಕರ್ಮ‌ ಯಾರಿಗೂ ಬಿಡಲ್ಲ. ಪರಮೇಶ್ವರ್, ಮುನಿಯಪ್ಪ ಅವರನ್ನು ಸೋಲಿಸಲಾಯಿತು. ಈಗ ಮುನಿಯಪ್ಪ, ಪರಮೇಶ್ವರ್ ಸುಮ್ನೆ ಕೂರುತ್ತಾರಾ? ಇನ್ನೊಬ್ಬರ ಕಡೆಗೆ ಹೂಡಿದ ಬಾಣ ಇವರಿಗೂ ತಿರುಗುಬಾಣ ಆಗುತ್ತದೆ. ಸಿದ್ದರಾಮಯ್ಯ ಪ್ರಯೋಗಿಸಿದ ತಂತ್ರಗಳನ್ನೇ ಡಿ ಕೆ ಶಿವಕುಮಾರ್ ಅವರೂ ಬಳಸುತ್ತಾರೆ ಎಂದರು.

ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಇದುವರೆಗೂ ಉಲ್ಟಾ ಆಗಿದೆ:ಪ್ರಧಾನಿ ನರೇಂದ್ರ ಮೋದಿ ನೂರು ಸಲ ಬಂದರೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರೋದು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಇದುವರೆಗೂ ಉಲ್ಟಾ ಆಗಿದೆ. ಮೋದಿಯವರು ಅಪ್ಪನಾಣೆಗೂ ಪಿಎಂ ಆಗಲ್ಲ ಅಂದಿದ್ದರು. ಆದರೆ ಮೋದಿ ಪ್ರಧಾನಿ ಆದರು. ಕಳೆದ ಸಲ ನಾನೇ ಮುಂದಿನ ಸಿಎಂ ಅಂದರು. ಆದ್ರೆ ಅಧಿಕಾರ ಕಳೆದುಕೊಂಡರು. ಸಿದ್ದರಾಮಯ್ಯ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ಅವರು ಬಿಜೆಪಿಯೇ ಅಧಿಕಾರಕ್ಕೆ ಬರೋದು, ಬೊಮ್ಮಾಯಿ ಅವರೇ ಸಿಎಂ ಆಗೋದು ಅನ್ನಲಿ, ಅದಕ್ಕೆ ಉಲ್ಟಾ ಆಗುತ್ತದೆ, ಇದನ್ನು ಸಿದ್ದರಾಮಯ್ಯ ಹೇಳಿ ನೋಡಲಿ ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.

ಹರಿಪ್ರಸಾದ್ ಖಾಲಿ ಡಬ್ಬಾದಲ್ಲಿ ಸೌಂಡ್ ಮಾಡ್ತಾರೆ:ಬಿಜೆಪಿಗೆ ರವಿ ಅನ್ನೋರದ್ದೇ ಕಾಟ ಆಗಿಹೋಗಿದೆ ಎಂದು ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಆದರೆ ಹರಿಪ್ರಸಾದ್ ಸಂಸದೀಯ ಕಾರ್ಯ ಪದ್ಧತಿ ಬಗ್ಗೆ ಅರಿವಿಲ್ಲದಂತೆ ಮಾತನಾಡುತ್ತಾರೆ. ಸದನದಲ್ಲಿ ಚರ್ಚೆಗೆ ತಯಾರಿದ್ದರೆ ಮಾಡಲಿ ಅವರನ್ನು ಯಾರು ಕಟ್ಟಿ ಹಾಕಿದ್ದಾರೆ. ಹರಿಪ್ರಸಾದ್ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಅವರೇ ಸ್ಥಳ, ದಿನಾಂಕ ನಿಗದಿ ಮಾಡಲಿ, ನಾವು ಚರ್ಚೆಗೆ ಬರುತ್ತೇವೆ. ಜೈಲಿಂದ ಶುರುವಾಗಿ ಯಾರ್ಯಾರು ಎಲ್ಲೆಲ್ಲಿ ಅಡ್ಡಾಡುತ್ತಿದ್ದಾರೆ ಅಂತ ಬಿಚ್ಚಿಡುತ್ತೇವೆ. ಹರಿಪ್ರಸಾದ್ ಖಾಲಿ ಡಬ್ಬಾದಲ್ಲಿ ಸೌಂಡ್ ಮಾಡುತ್ತಾರೆ, ಒಳಗೆ ಏನೂ ಇಲ್ಲ, ಅವರು ಆರೋಪ ಮಾಡುವಾಗ ದಾಖಲೆ ಇಟ್ಟು ಮಾತಾಡಲಿ ಎಂದು ಸವಾಲೆಸೆದರು.

ರೆಡ್ಡಿ ಪಕ್ಷ ಬೆಂಬಲಿಸಿ, ಪಕ್ಷ ಸೇರಿ ಎಂಬ ಸಚಿವ ಶ್ರೀರಾಮುಲು ಟ್ವೀಟ್ ಡಿಲೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಇದರ ಬಗ್ಗೆ ನಾನು ಏನೂ ಹೇಳಲ್ಲ, ಅವರನ್ನೇ ಕೇಳಬೇಕು. ಅವರು ಟ್ವೀಟ್ ಮಾಡಿದ್ದೂ ಗೊತ್ತಿಲ್ಲ, ಡಿಲೀಟ್ ಮಾಡಿದ್ದೂ ಗೊತ್ತಿಲ್ಲ ಎಂದರು.

ಇದನ್ನೂ ಓದಿ:ಭ್ರಷ್ಟಾಚಾರ, ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ದಾಖಲೆಯೊಂದಿಗೆ ಉತ್ತರಿಸುವೆ: ಕಾಂಗ್ರೆಸ್ ಗೆ ಸುಧಾಕರ್ ಸವಾಲ್

ABOUT THE AUTHOR

...view details