ಕರ್ನಾಟಕ

karnataka

ಅಕ್ರಮ ಡಿನೋಟಿಫಿಕೇಶನ್​ ಆರೋಪ ಪ್ರಕರಣ.. ಬಿಎಸ್​ವೈ ವಿರುದ್ಧ ಕ್ರಿಮಿನಲ್‌ ಕೇಸ್​ ದಾಖಲಿಸುವಂತೆ ಕೋರ್ಟ್​ ಆದೇಶ

By

Published : Mar 31, 2022, 9:30 PM IST

Updated : Mar 31, 2022, 9:51 PM IST

ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

B.S.  Yeddyurappa
ಬಿ.ಎಸ್‌. ಯಡಿಯೂರಪ್ಪ

ಬೆಂಗಳೂರು: ನಗರದ ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿ ನಡುವೆ ಮಾಹಿತಿ ತಂತ್ರಜ್ಞಾನ (ಐಟಿ) ಕಾರಿಡಾರ್‌ ಸ್ಥಾಪಿಸಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಮನ್ಸ್ ಜಾರಿ: ಅಕ್ರಮ ಡಿನೋಟಿಫಿಕೇಷನ್ ವಿಚಾರವಾಗಿ ಬೆಳ್ಳಂದೂರು ನಿವಾಸಿ ವಾಸುದೇವ ರೆಡ್ಡಿ ಎಂಬುವರು 2013ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್‌ ಕುಮಾರ್ ಈ ಆದೇಶ ನೀಡಿದ್ದಾರೆ. ಅಲ್ಲದೇ, ಇದೇ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13 (1) (ಡಿ) ಹಾಗೂ ಸೆಕ್ಷನ್‌ 13 (2)ರ ಅಡಿ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಬಿ.ಎಸ್‌. ಯಡಿಯೂರಪ್ಪ 2006ರ ಜೂನ್‌ 21ರಂದು ಸರ್ಕಾರಿ ಅಧಿಸೂಚನೆಯ ಮೂಲಕ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ, 15.30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ವಾಸುದೇವ ರೆಡ್ಡಿ ಪಿಸಿಆರ್ ದಾಖಲಿಸಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯುವ ಚಿಂತನೆ ಇಲ್ಲ: ಸಚಿವ ಸೋಮಶೇಖರ್

ದೂರು ಪರಿಗಣಿಸಿದ್ದ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್ 2015ರ ಫೆಬ್ರವರಿ 18ರಂದು ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಬಳಿಕ, ತಮ್ಮ ವಿರುದ್ಧದ ದೂರು ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್ ಬಿಎಸ್‌ವೈ ಮನವಿಯನ್ನು 2020ರ ಡಿಸೆಂಬರ್‌ 22ರಂದು ತಿರಸ್ಕರಿಸಿತ್ತು. ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2021ರ ಫೆಬ್ರವರಿ 23ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು. ವರದಿ ತಿರಸ್ಕರಿಸಿದ್ದ ಕೋರ್ಟ್ ಹೆಚ್ಚುವರಿ ಸೂಕ್ತ ತನಿಖೆ ನಡೆಸಿ ಹೆಚ್ಚುವರಿ ವರದಿ ಸಲ್ಲಿಸಲು ಆದೇಶಿಸಿತ್ತು. 2021ರ ಸೆಪ್ಟಂಬರ್​ 17ರಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಬಿ ಅಂತಿಮ ವರದಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ಯಡಿಯೂರಪ್ಪ ವಿರುದ್ಧದ ಆರೋಪವನ್ನು ಪರಿಗಣಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.

ಬಿಎಸ್​ವೈ ವಿರುದ್ಧ ಆರೋಪ: ಬಿ.ಎಸ್‌. ಯಡಿಯೂರಪ್ಪ 2006 -07ರ ನಡುವೆ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಿದ್ದಾರೆ. ಖಾಸಗಿ ವ್ಯಕ್ತಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಇದಾಗಿದೆ.

ದೂರುದಾರರ ಆರೋಪವೇನು?: ಬೆಳ್ಳಂದೂರು, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಸುತ್ತಮುತ್ತ ಕೆಐಎಡಿಬಿ 434 ಎಕರೆ ಭೂಮಿ ವಶಪಡಿಸಿಕೊಳ್ಳಲು 2001ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2004ರ ಮೇ 7ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಂತಿಮ ಅಧಿಸೂಚನೆಗೆ ಒಳಪಟ್ಟ ಭೂಮಿಯನ್ನು ಯಡಿಯೂರಪ್ಪ ಡಿಸಿಎಂ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ. ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.

Last Updated : Mar 31, 2022, 9:51 PM IST

TAGGED:

ABOUT THE AUTHOR

...view details