ಕರ್ನಾಟಕ

karnataka

ಸಂಸದ ಪ್ರತಾಪ್ ಸಿಂಹರನ್ನು ಅಮಾನತುಗೊಳಿಸಿ, ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ

By ETV Bharat Karnataka Team

Published : Dec 19, 2023, 7:02 AM IST

Updated : Dec 19, 2023, 2:32 PM IST

ಸೋಷಿಯಲ್​ ಮೀಡಿಯಾದ ಎಕ್ಸ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿಸೆಂಬರ್​​ 13 ರಂದು ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಸಂಸದ ಪ್ರತಾಪ್​​ ಸಿಂಹರನ್ನು ಅಮಾನತುಗೊಳಿಸಿ ನಂತರ ತನಿಖೆ ನಡೆಸಿ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

CM Siddaramaiah, Pratap Singh
ಸಿಎಂ ಸಿದ್ದರಾಮಯ್ಯ, ಪ್ರತಾಪ್​ ಸಿಂಹ

ಬೆಂಗಳೂರು :ಸಂಸದ ಪ್ರತಾಪ್​​ ಸಿಂಹರನ್ನು ಸ್ಥಾನದಿಂದ ಅಮಾನತುಗೊಳಿಸಿ, ಬಳಿಕ ಲೋಕಸಭೆ ದಾಳಿಯಲ್ಲಿನ ಅವರ ಪಾತ್ರ ಬಯಲಿಗೆಳೆಯಲು ತನಿಖೆ ನಡೆಸಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ​​ ಪೋಸ್ಟ್ ಮಾಡಿರುವ ಅವರು, 'ಸಂಸದರುಗಳನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಅಮಾನತು ನಡೆ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಕೆಲಸ ಮಾತ್ರವಲ್ಲ, ಪ್ರಜಾಪ್ರಭುತ್ವದ ಮೂಲ ತತ್ವಕ್ಕೇ ಸಂಚಕಾರ ತರುವಂತದ್ದಾಗಿದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ನಮ್ಮ ದೇಶದ ಮೂಲ ಸಿದ್ಧಾಂತವನ್ನೇ ಬುಡಮೇಲು ಮಾಡುತ್ತದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಲೋಕಸಭೆ ಭದ್ರತಾ ಲೋಪ ಎಸಗಲು ಕಾರಣರಾದವರು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಅದನ್ನು ಪ್ರಶ್ನಿಸುವವರನ್ನು ಅಮಾನತು ಮಾಡಿರುವುದು ದುರದೃಷ್ಟಕರ ವಿಚಾರವಾಗಿದೆ. ಮೊದಲಿಗೆ ಸಂಸದ ಪ್ರತಾಪ್​ ಸಿಂಹರನ್ನು ಅಮಾನತುಗೊಳಿಸಿ ಬಳಿಕ ಘಟನೆಯಲ್ಲಿ ಅವರ ಪಾತ್ರವನ್ನು ಬಯಲಿಗೆಳೆಯಲು ತನಿಖೆ ನಡೆಸಬೇಕಾಗಿತ್ತು. ಅವರು ಸಂಸತ್​ ಮೇಲೆ ದಾಳಿ ನಡೆಸಿದರು. ಆದರೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಭಾರತದ ಹಿಟ್ಲರ್​ ತರ ವರ್ತಿಸುತ್ತಿದ್ದಾರೆ. ಬಹುಶಃ ಹಿಟ್ಲರ್​ಗೆ ತಮ್ಮನ್ನು ಹೋಲಿಸುವುದರಿಂದ ಅವರು ಸಂತೋಷ ಪಡುತ್ತಿರಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

'ಭಿನ್ನಾಭಿಪ್ರಾಯದ ಹಕ್ಕು ಪ್ರಜಾಪ್ರಭುತ್ವದ ಮುಲಾಧಾರವಾಗಿದೆ. ವಿಪಕ್ಷಗಳಿಗೆ ತಮ್ಮ ಅಸಮಾಧಾನ, ಆಕ್ಷೇಪಗಳ ಬಗ್ಗೆ ದನಿ ಎತ್ತಲು ಅವಕಾಶ ಕಲ್ಪಿಸಿ, ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡಿ ಹೆಚ್ಚು ಒಳಗೊಳ್ಳುವಿಕೆಯ ಸಮಾಜ ರೂಪಿಸುವುದು ಸರ್ಕಾರದ ಕೆಲಸವಾಗಿದೆ ಎಂದು ಪ್ರಜಾಪ್ರಭುತ್ವ ಅಪಾಯದಲ್ಲಿ' ಎಂಬ ಹ್ಯಾಷ್ ಟ್ಯಾಗ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಮೂಲಕ ಹರಿಹಾಯ್ದಿದ್ದಾರೆ.

ಇದನ್ನೂ ಓದಿ:ನಾಳೆ ಪ್ರಧಾನಿ ಭೇಟಿ, ಹೈಕಮಾಂಡ್​ ಸಭೆ: ದೆಹಲಿ ತಲುಪಿದ ಸಿಎಂ ಸಿದ್ದರಾಮಯ್ಯ

ಸಂಸತ್ತಲ್ಲಿ ಭದ್ರತಾ ಲೋಪ :ಡಿಸೆಂಬರ್ 13 ರಂದುಕಲಾಪ ನಡೆಯುವ ವೇಳೆ ವೀಕ್ಷಕರ ಗ್ಯಾಲರಿಯಿಂದ ದಿಢೀರ್​ ಇಬ್ಬರು ಯುವಕರು ಹಾರಿ ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡಿದ್ದರು​. ಜೊತೆಗೆ ಘೋಷಣೆಗಳನ್ನು ಕೂಗಿದ್ದರು. ಸದನದಲ್ಲಿದ್ದ ಸಚಿವರು ಹಾಗೂ ಸಂಸದರು ಆತಂಕದಿಂದ ಹೊರ ಬಂದಿದ್ದರು. ಇದೇ ವೇಳೆ ಹೊರಗಿನ ಗೇಟ್​ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಭದ್ರತಾ ಲೋಪ ಆಗಿತ್ತು. ಈ ಕುರಿತು ತನಿಖೆ ಮುಂದುವರೆದಿದೆ.

Last Updated : Dec 19, 2023, 2:32 PM IST

ABOUT THE AUTHOR

...view details