ಕರ್ನಾಟಕ

karnataka

ಬಿಎಸ್​ವೈ ಹೇಳಿಕೆ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Nov 3, 2023, 7:37 PM IST

ಪ್ರತಿದಿನ ಬೈದರೆ ಪ್ರಧಾನಿ ಅವರು ಏಕೆ ಸಿದ್ದಾರಮಯ್ಯ ಅವರನ್ನು ಭೇಟಿ ಮಾಡುತ್ತಾರೆ ಎಂಬ ಬಿಎಸ್​ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬಿಎಸ್​ವೈ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ
ಬಿಎಸ್​ವೈ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ

ಬೆಂಗಳೂರು: ನಿತ್ಯ ಬೈದರೆ ಪ್ರಧಾನಿ ನರೇಂದ್ರ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಫೇಸ್​ಬುಕ್ ಪೋಸ್ಟ್ ಮಾಡಿರುವ ಅವರು, ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಬೈದಾಡಿದ್ದ ಯಡಿಯೂಪರಪ್ಪ ತನ್ನ ರಾಜಕೀಯ ಅಸ್ವಿತ್ವ ಉಳಿಸಿಕೊಳ್ಳಲು ಇಂತಹ ಗುಲಾಮಿ ಮನೋಭಾವ ಬೆಳೆಸಿಕೊಂಡಿರುವುದು ವಿಷಾದನೀಯ.

ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕವಾಗಿ ನನಗೇನು ಪ್ರೀತಿ ಇಲ್ಲವೇ ದ್ವೇಷ ಇಲ್ಲ. ವೈಯಕ್ತಿಕವಾಗಿ ಅವರೇನು ನನಗೆ ಹಾನಿ ಮಾಡಿಲ್ಲ. ಆದರೆ, ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿಯಾಗಿ ನಮ್ಮ ಜನರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯ ಕಂಡು ಕಣ್ಣುಮುಚ್ಚಿಕೊಂಡು ಇರಲಾಗುವುದಿಲ್ಲ. ಈ ಬಗ್ಗೆ ಪ್ರಶ್ನಿಸುವ ಕೆಲಸ ಮಾಡದೇ ಇದ್ದರೆ ಅದು ಜನದ್ರೋಹವಾಗುತ್ತದೆ ಎಂದು ಹೇಳಿದ್ದಾರೆ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದನ್ನು ಯಡಿಯೂರಪ್ಪ ಮರೆತುಬಿಟ್ಟಂತಿದೆ. ಕೇಂದ್ರ ಸರ್ಕಾರ ಎಂದರೆ ಅರಸೊತ್ತಿಗೆಯೂ ಅಲ್ಲ, ಮೋದಿ ಅರಸರೂ ಅಲ್ಲ. ಅವರೂ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಅಷ್ಟೇ. ಒಕ್ಕೂಟ ವ್ಯವಸ್ಥೆಯಲ್ಲಿರುವ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ. ಇಷ್ಟೊಂದು ದೀರ್ಘಕಾಲ ರಾಜಕೀಯದಲ್ಲಿರುವ ಯಡಿಯೂರಪ್ಪಗೆ ಪ್ರಜಾಪ್ರಭುತ್ವದ ಈ ಮೂಲ ಪಾಠ ತಿಳಿಯದೆ ಇರುವುದು ದುರಂತವೇ ಸರಿ ಎಂದು ಕಿಡಿ ಕಾರಿದ್ದಾರೆ.

ಬಹಳ ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ರೀತಿ ಹೇಳಿಕೆ ನೀಡುವ ಯಾವ ನೈತಿಕತೆ ಇಲ್ಲವೇ ಇಲ್ಲ. ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿಕೊಂಡ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬೆಂಬಲಿಗರು ಕೇವಲ ಮೋದಿ ಅವರ ವಿರುದ್ಧ ಮಾತ್ರ ಅಲ್ಲ ಎಲ್.ಕೆ.ಅಡ್ವಾನಿಯವರಂತಹ ಪಕ್ಷದ ಹಿರಿಯ ನಾಯಕರ ವಿರುದ್ಧ ಹೇಗೆಲ್ಲಾ ಬೈದಿದ್ದಾರೆ ಎನ್ನುವುದನ್ನು ರಾಜ್ಯದ ಜನ ಕಂಡಿದ್ದಾರೆ. ಯಡಿಯೂರಪ್ಪ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರೂ ಹೊತ್ತು ಹಾಡಿ ಹೊಗಳುತ್ತಿದ್ದಾರೆ. ಹೀಗಿದ್ದರೂ ಈಗಲೂ ಅವರಿಗೆ ಕೂತು ನಿರಾಳವಾಗಿ ಮಾತನಾಡಲು ಮೋದಿಯವರು ಒಂದು ಅಪಾಯ್ಟ್‌ಮೆಂಟ್ ಕೊಡುತ್ತಿಲ್ಲ. ದೆಹಲಿಗೆ ಹೋಗಿ ದಿನಗಟ್ಟಲೆ ಕಾಯಬೇಕಾಗುತ್ತದೆ. ಕರ್ನಾಟಕದಲ್ಲಿ ರಾಜಾ ಹುಲಿ ಎಂದು ಕರೆಸಿಕೊಳ್ಳುವ ಯಡಿಯೂರಪ್ಪ ನರೇಂದ್ರ ಮೋದಿಯವರ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆಮೊನ್ನೆಯ ವರೆಗೆ ಆರ್.ಎಸ್.ಎಸ್, ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು ಆದ ಹೆಚ್. ಡಿ ಕುಮಾರಸ್ವಾಮಿ ಅವರು ಹಿಗ್ಗಾಮುಗ್ಗಾ ಬೈದಾಡುತ್ತಿದ್ದರು. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಕುಮಾರಸ್ವಾಮಿ ಅವರನ್ನು ಕರೆಸಿ ಮಾತನಾಡಿ ಬೆನ್ನು ತಟ್ಟಿ ಕಳುಹಿಸುತ್ತಾರೆ. ಕುಮಾರಸ್ವಾಮಿ ಬೈದಾಡಿದ್ದು ಮೋದಿಯವರಿಗೆ ತಿಳಿದಿರಲಿಲ್ಲವೇ? ಇದ್ಯಾವ ಸೀಮೆಯ ಸ್ವಾಭಿಮಾನಿ ನಡವಳಿಕೆ. ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ನನಗೆ ತೀವ್ರ ಅಸಮಾಧಾನ ಇದೆ ಎಂದರು.

ಇದಕ್ಕಿಂತಲೂ ಅಸಮಾಧಾನ ಎಲ್.ಕೆ.ಅಡ್ವಾಣಿ, ಬಿ.ಎಸ್. ಯಡಿಯೂರಪ್ಪನವರಂತಹ ತಮ್ಮದೇ ಪಕ್ಷದ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಬಗ್ಗೆಯೂ ಇದೆ. ಯಡಿಯೂರಪ್ಪನವರೇ, ನೀವು ನಿಮ್ಮ ನಾಯಕರ ಮೇಲೆ ಬರಪೂರ ಹೊಗಳಿಕೆಯ ಮಳೆ ಸುರಿಸಿ, ಮನಸ್ಸಿಗೆ ತೃಪ್ತಿ ಆಗುವಷ್ಟು ಓಲೈಸಿ, ಬೇಕಿದ್ದರೆ ಕಾಲುಗಳನ್ನು ಬೇಕಾದರೂ ಹಿಡಿಯಿರಿ, ನಮಗೇನೂ ಅಭ್ಯಂತರ ಇಲ್ಲ. ಅದರಿಂದಾದರೂ ರಾಜ್ಯದ ಜನತೆಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:'ಶಾಸಕರಿಗೆ 50 ಕೋಟಿ ಆಫರ್​ ನೀಡುವ ಅಗತ್ಯವಿಲ್ಲ, ಜಗಳದಲ್ಲೇ ಸರ್ಕಾರ ಬೀಳುತ್ತೆ‘: ನಳಿನ್​ ಕುಮಾರ್​ ಕಟೀಲ್​

ABOUT THE AUTHOR

...view details