ಕರ್ನಾಟಕ

karnataka

ಸರ್ಕಾರಿ ಜಮೀನುಗಳ ಒತ್ತವರಿ ತೆರವುಗೊಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

By ETV Bharat Karnataka Team

Published : Sep 11, 2023, 10:51 PM IST

ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತೆರವುಗೊಳಿಸಲು ಮುಂದಾಗಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

clear-the-encroachment-of-government-lands-high-court-instructed-governmnett
ಸರ್ಕಾರಿ ಜಮೀನುಗಳ ಒತ್ತವರಿ ತೆರವುಗೊಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತೆರವುಗೊಳಿಸಲು ಮುಂದಾಗಬೇಕು. ಅಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೆಂಗಳೂರು ನಗರದಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಪ್ರಸ್ತುತ ದಾಖಲಾಗಿರುವ ಪ್ರಕರಣ ಕೇವಲ ಟಿಪ್ ಆಫ್ ಐಸ್ ಬರ್ಗ್, ಇಂತಹ ನೂರಾರು ಪ್ರಕರಣಗಳಿದ್ದು, ಸರ್ಕಾರ ಅವುಗಳ ಬಗ್ಗೆ ಗಮನ ಹರಿಸಬೇಕು ಎಂದು ತಾಕೀತು ಮಾಡಿದೆ. ಜೊತೆಗೆ, ಸರ್ಕಾರ ಮತ್ತು ಬೆಂಗಳೂರು ಜಿಲ್ಲಾಧಿಕಾರಿಗೆ ಕ್ರಮ ಕೈಗೊಂಡಿರುವ ಬಗ್ಗೆ 4 ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ 1.9 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡದ ಮಾಲೀಕರಿಗೆ ನಿಯಮದಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಆ ಕುರಿತು ಇನ್ನೂ ಪ್ರತಿವಾದಿಗಳು ಉತ್ತರ ನೀಡಿಲ್ಲ. ಪ್ರಕರಣದ ಎಲ್ಲ ಮಾಹಿತಿಯನ್ನು ವರದಿಯ ರೂಪದಲ್ಲಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ವರದಿ ಪರಿಶೀಲಿಸಿದ ನ್ಯಾಯಪೀಠ, ಅಧಿಕಾರಿಗಳೇ ಇದಕ್ಕೆ ನೇರ ಕಾರಣ. ಅಧಿಕಾರಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು. ಒಂದೆಡೆ ಒತ್ತುವರಿ ತೆರವು ಪ್ರಕ್ರಿಯೆಯೊಂದಿಗೆ ತಪ್ಪಿತಸ್ಥ ಅಧಿಕಾರಿಗಳು ಯಾರೆಂದು ಗುರುತಿಸಿ ಅವರಿಂದ ದಂಡ ವಸೂಲು ಮಾಡಲು ಮುಂದಾಗಬೇಕು. ಇಲ್ಲವಾದರೆ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಪೀಠ ತಿಳಿಸಿತು. ಸರ್ಕಾರಿ ಭೂಮಿ ದುರುಪಯೋಗವಾಗುವುದನ್ನು ತಡೆಯಬೇಕು. ಇಂತಹ ಪ್ರಕರಣಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಹಾಗಾಗಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಾಗಲೇಬೇಕು. ಅದೇ ರೀತಿ ಯಾರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿರುತ್ತಾರೋ ಅಂತಹ ಮಾಲೀಕರು ಅಥವಾ ಆ ಕಟ್ಟಡಗಳ ವಾಸಿಗಳು ಕ್ರಮದಿಂದ ತಪ್ಪಿಸಿಕೊಳ್ಳಬಾರದು. ಅವರಿಗೆ ನೋಟಿಸ್ ನೀಡಿ ಕಾನೂನು ರೀತ್ಯ ಕ್ರಮ ಜರುಗಿಬಸಬೇಕು ಎಂದು ಸೂಚನೆ ನೀಡಿತು.

ಈ ಪ್ರಕರಣ ಒಂದು ಸಣ್ಣ ಉದಾಹರಣೆಯಷ್ಟೇ, ಹಾಗಾಗಿ ಸರ್ಕಾರಿ ಯಂತ್ರ ಈ ವಿಚಾರದ ಬಗ್ಗೆ ಗಂಭೀರ ಗಮನಹರಿಸಿ ಕ್ರಮ ಕೈಗೊಂಡು ನ್ಯಾಯಾಲಯ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ವಿಚಾರಣೆ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ವಿಶೇಷ ಭೂಸ್ವಾಧೀನ ಅಧಿಕಾರಿ ವಿಚಾರಣೆ ವೇಳೆ ಖುದ್ದು ಹಾಜರಿದ್ದರು.

ಇದನ್ನೂ ಓದಿ:ಧರ್ಮ, ಕಾನೂನಿನಲ್ಲಿ ಹೆಂಡತಿ - ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಜವಾಬ್ದಾರಿ : ಹೈಕೋರ್ಟ್

ABOUT THE AUTHOR

...view details