ಕರ್ನಾಟಕ

karnataka

ತಾಕತ್ತಿದ್ದರೆ 2004 ರಿಂದ ಇಲ್ಲಿಯವರೆಗಿನ ಎಲ್ಲ ಕಾಲದ ಅಕ್ರಮ ಆರೋಪಗಳನ್ನ ಲೋಕಾಯುಕ್ತ ತನಿಖೆಗೆ ವಹಿಸಿ: ನಾರಾಯಣಸ್ವಾಮಿ ಸವಾಲು

By

Published : Jul 11, 2023, 7:35 PM IST

ಕಾಂಗ್ರೆಸ್​ನ ದೋಖಾ ಮತ್ತು ನಮ್ಮ ಲೋಪದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿಯ ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

chhalavadi-narayanaswamy-reaction-on-congress-government
ತಾಕತ್ತಿದ್ದರೆ 2004 ರಿಂದ ಇಲ್ಲಿಯವರೆಗಿನ ಎಲ್ಲ ಕಾಲದ ಅಕ್ರಮ ಆರೋಪ ಲೋಕಾಯುಕ್ತ ತನಿಖೆಗೆ ವಹಿಸಿ: ಸರ್ಕಾರಕ್ಕೆ ನಾರಾಯಣಸ್ವಾಮಿ ಸವಾಲು

ಬೆಂಗಳೂರು:ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರ ಆರೋಪಗಳನ್ನು ಲೋಕಾಯುಕ್ತ ತನಿಖೆ ಮಾಡಿಸುವುದಾಗಿ ಹೇಳಿದ್ದೀರಿ, ನಿಮಗೆ ದಮ್ಮು ತಾಕತ್ತು ಇದ್ದರೆ 2004 ರಿಂದ ಇಲ್ಲಿಯವರೆಗೂ ಯಾವ ಯಾವ ಸರ್ಕಾರದ ಅವಧಿಯಲ್ಲಿ ಏನೇನು ಭ್ರಷ್ಟಾಚಾರ ನಡೆದಿದೆ ಎಂದು ತನಿಖೆ ನಡೆಸಿ ಎಂದು ಬಿಜೆಪಿಯ ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ರಾಜ್ಯಪಾಲರು ಮಾಡಿರುವ ಭಾಷಣದಲ್ಲಿ 48 ಪ್ಯಾರಾ ಇದೆ. ಆದರೆ, ಒಂದು ಪ್ಯಾರಾದಲ್ಲೂ ಕ್ಲಾರಿಟಿ ಇಲ್ಲ, ಫೆಬ್ರವರಿಯಲ್ಲಿ ನಮ್ಮ ಸರ್ಕಾರ ಇದ್ದಾಗ ಮಾಡಿದ್ದ ಭಾಷಣದಲ್ಲಿ ಅಂಕಿ ಅಂಶದೊಂದಿಗೆ ಸ್ಪಷ್ಟನೆ ಇತ್ತು. ಆದರೆ, ಈ ಭಾಷಣ ಗಾಳಿಯಲ್ಲಿ ಗುಂಡು ಹೊಡೆದಂತಿದೆ. ಸುಳ್ಳಿನ ಕಂತೆಯಾಗಿದೆ, ಹೊಸ ಬಾಟಲಿಯಲ್ಲಿ ಹಳೆ ಮದ್ಯ ತುಂಬಿಸಿ ಮಾರಲು ಹೊರಟಿದ್ದಾರೆ. ರಾಜ್ಯಪಾಲರಿಂದ ಕಳಪೆ ಭಾಷಣ ಮಾಡಿಸಿದ್ದಾರೆ, ಐದು ಗ್ಯಾರಂಟಿಗೆ ನೀಡಿದ ಒತ್ತು ಇತರ ಯಾವ ಯೋಜನೆಗೂ ಕೊಟ್ಟಿಲ್ಲ, ಲಾಟರಿ ರೀತಿ ಇವರಿಗೆ ಫಲಿತಾಂಶ ಬಂದಿದೆ, ಇವರು ಆ ಲಾಟರಿಯಲ್ಲಿ ತೇಲುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯಪಾಲರಿಂದ ಇವರು ಮಾಡಿಸಿರುವುದು ಸಪ್ಪೆ ಭಾಷಣ, ಅದರಲ್ಲಿ ಗಂಧ ಗಾಳಿ ಇಲ್ಲ, ರಾಜ್ಯದ ಅಭಿವೃದ್ಧಿಯ ಸ್ಪಷ್ಟತೆ ಇಲ್ಲ, ಸಮುದಾಯದ ನಡುವೆ ಗೋಡೆ ಕಟ್ಟುವ ಭಾಷಣ ಮಾಡಿಸಿದ್ದಾರೆ. ಸದನದ ಮೂಲಕ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ಇವರ ಯೋಜನೆಗಳು ಹಳೆ ಪ್ರಿಂಟ್​ನ ರೀ ಪ್ರಿಂಟ್ ಮಾಡುತ್ತಿರುವಂತಿದೆ. ಕಾಂಗ್ರೆಸ್​ನ ದೋಖಾ ಮತ್ತು ನಮ್ಮ ಲೋಪದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.

ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಒಂದು ಗ್ರಾಂ ಕೂಡ ಕೊಟ್ಟಿಲ್ಲ, ಐದು ಕೆಜಿ ಅಕ್ಕಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೊಡುತ್ತಿದೆ. ಕೇಂದ್ರ ಸರ್ಕಾರ ಎಲ್ಲರಿಗೂ ಸೇರಿದ್ದಾಗಿದೆ. ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ, ಆದರೆ,2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಲೋಕಾಯುಕ್ತ ಮುಚ್ಚಿದರು, ದಮ್ಮು ತಾಕತ್ತು ಇದ್ದವರು ಯಾಕೆ ಲೋಕಾಯುಕ್ತ ಸಂಸ್ಥೆ ಮುಚ್ಚಿದರು ಎಂದು ಪ್ರಶ್ನಿಸಿದರು.

ಎಸಿಬಿಯವರು ಒಬ್ಬರನ್ನಾದರೂ ಬಂಧಿಸಿದರಾ?. ನಂತರ ಕೋರ್ಟ್ ಛೀಮಾರಿ ಹಾಕಿತು. ನಾವು ಅಪೀಲ್ ಹೋಗದೇ ಲೋಕಾಯುಕ್ತ ಮರು ರಚಿಸಿದೆವು, ಈಗ ಬಿಜೆಪಿ ಅವಧಿ ಅಕ್ರಮ ಲೋಕಾಯುಕ್ತ ತನಿಖೆ ನಡೆಸುತ್ತೇವೆ ಎಂದಿದ್ದೀರಿ, ಲೋಕಾಯುಕ್ತ ತನಿಖೆ ಸ್ವಾಗತ ಮಾಡಲಿದ್ದೇವೆ. ಆದರೆ, ನಿಮಗೆ ದಮ್ಮು ತಾಕತ್ತು ಇದ್ದರೆ 2004 ರಿಂದ ಇಲ್ಲಿಯವರೆಗೆ ಯಾವ ಯಾವ ಸರ್ಕಾರ ಇದ್ದಾಗ ಏನೇನು ಹಗರಣ ಆಗಿದೆ ಎಂದು ತನಿಖೆ ನಡೆಸಿ, ನೀವು ದ್ವೇಷದ ರಾಜಕಾರಣ ಮಾಡಲು ಹೋಗಬೇಡಿ ಎಲ್ಲ ಕಾಲದ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಭ್ರಷ್ಟಾಚಾರ ಉಗಮ ಸ್ಥಾನ ಬೆಂಗಳೂರಿನಲ್ಲಿ ಭೂಮಾಫಿಯಾ ಹೆಚ್ಚಾಗಿದೆ. ಪೊಲೀಸರಿಂದ ಸಮಸ್ಯೆಯಾಗಿದೆ. ಬಡವರ, ದುರ್ಬಲರ ಸ್ವತ್ತು ಕಬಳಿಕೆಗೆ ಪೊಲೀಸರೇ ಸಹಕಾರ ನೀಡುತ್ತಿದ್ದಾರೆ. ನಾನು ಶಿಕ್ಷಕನಾಗಿದ್ದ ವೇಳೆ ಚಿಕ್ಕಬೆಟ್ಟಹಳ್ಳಿಯಲ್ಲಿ ತಿಂಗಳಿಗೆ ಎರಡು ಸಾವಿರ ಕಟ್ಟಿ ನಿವೇಶನ ಪಡೆದೆ, ಆದರೆ ಈಗ ನಿವೇಶನ ಇಲ್ಲ, ಭೂಮಾಫಿಯಾ ಆ ರೀತಿ ಇದೆ. ಈಗ ಅಲ್ಲಿ ನನ್ನ ನಿವೇಶನವೇ ಇಲ್ಲ, ಪೊಲೀಸರನ್ನು ಕೇಳಿದರೆ ಮಾತುಕತೆ ನಡೆಸಿ ಪರಿಹರಿಸಿಕೊಳ್ಳಿ ಎನ್ನುತ್ತಿದ್ದಾರೆ. ಏಳು ವರ್ಷದಿಂದ ನಾನು ಹೋರಾಟ ನಡೆಸುತ್ತಿದ್ದೇನೆ. ನನಗೇ ಈ ರೀತಿ ಆದರೆ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಅಧಿಕಾರಿ ವರ್ಗಾವಣೆ ವಿಚಾರ ಗದ್ದಲ: ಪರಿಶೀಲನೆ ನಡೆಸುವ ಸಚಿವರ ಭರವಸೆಯೊಂದಿಗೆ ಸುಖಾಂತ್ಯ

ABOUT THE AUTHOR

...view details