ಕರ್ನಾಟಕ

karnataka

ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ದಚಿತ್ರ ಪ್ರದರ್ಶನಕ್ಕೆ ಸಿಕ್ತು ಅವಕಾಶ: ಕಸಾಪ ಅಧ್ಯಕ್ಷ ಮಹೇಶ್ ಜೋಶಿ

By

Published : Jan 13, 2023, 10:25 PM IST

ಗಣರಾಜ್ಯೋತ್ಸವ ಪರೇಡ್​ದಲ್ಲಿ ಕರ್ನಾಟಕ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರ ಒಪ್ಪಿಗೆ - ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ ನಿರಂತರ ಪ್ರಯತ್ನ - ಕನ್ನಡ ಸಾಹಿತ್ಯ ಪರಿಷತ್ ಮನವಿಗೆ ಕೇಂದ್ರ ಅಧಿಕಾರಿಗಳು ಸ್ಪಂದನೆ - ಕಸಾಪ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಸಂತಸ

Nadoja Dr. Mahesh Joshi
ಕಸಾಪ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ

ಬೆಂಗಳೂರು:ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕ ರಾಜ್ಯದ ಸ್ಥಬ್ಧ ಚಿತ್ರಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ. ಸತತ 14 ವರ್ಷಗಳಿಂದ ಪರೇಡ್​ದಲ್ಲಿ ಅವಕಾಶ ಪಡೆಯುತ್ತಿದ್ದ ಕರ್ನಾಟಕ ರಾಜ್ಯಕ್ಕೆ ಈ ಬಾರಿ ಅವಕಾಶ ನಿರಾಕರಿಸಿತ್ತು. ಈ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ತು ಜವಾಬ್ದಾರಿಯನ್ನು ಹೊತ್ತು ಕೇಂದ್ರ ಸರಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಹಿಸಿದ ಆಸಕ್ತಿಯ ಪರಿಣಾಮ ಈ ಬಾರಿ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಸ್ತಬ್ಧ ಚಿತ್ರ ಭಾಗವಹಿಸುವಿಕೆ ಮರಳಿ ಸಿಕ್ಕಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಕನ್ನಡಿಗರು ಹಾಗೂ ಕನ್ನಡ ಪರ ಸಂಘಟಣೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮತ್ತು ಹಾವೇರಿ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಇದೊಂದು ವಿವಾದವಾಗಿ ಪರಿಣಮಿಸಬಾರದು ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುತುವರ್ಜಿವಹಿಸಿತ್ತು.

2004 ರಿಂದ 2018ರ ವರೆಗಿನ ರಾಜಪಥನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ನೇರ ಪ್ರಸಾರ ಸೇರಿದಂತೆ ಕೆಲವು ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಹಿನ್ನೆಲೆ ದೆಹಲಿಯ ಅಧಿಕಾರಿಗಳೊಂದಿಗೆ ತಾವು ಉತ್ತಮ ಬಾಂಧವ್ಯ ಹೊಂದಿದ್ದೆ. ಅವರೊಂದಿಗೆ ಮಾತನಾಡುವ ಮೂಲಕ ಈ ಬಾರಿ ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಕಲ್ಪಿಸಲೇಬೇಕು ಎನ್ನುವ ಒತ್ತಡವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಮಾಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಕೇಂದ್ರ ಅಧಿಕಾರಿಗಳಿಗೆ ಸಾಹಿತ್ಯ ಪರಿಷತ್ತಿನಿಂದ ಮನದಟ್ಟು: ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡು ನುಡಿಯ ಸಂಸ್ಕೃತಿಯನ್ನು ಗಣರಾಜ್ಯೋತ್ಸವದ ಪರೇಡ್ ಮೂಲಕ ಬಿಂಬಿಸುವ ಮಹತ್ವವನ್ನು ಕೇಂದ್ರದ ಅಧಿಕಾರಿಗಳಿಗೆ ಮನದಟ್ಟುಮಾಡಿತ್ತು. ಅದಕ್ಕೆ ಸಹಕಾರಿಯಾಗುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧಿಕಾರಿಗಳ ಮನವಲಿಸುವ ಪ್ರಯತ್ನ ಮಾಡಿದ್ದರು.

ಕೇಂದ್ರದ ಅಧಿಕಾರಿ ವರ್ಗದವರೊಂದಿಗೆ ತಮ್ಮ ವೈಯಕ್ತಿಕ ಸಂಬಂಧ ಉತ್ತಮವಾಗಿ ಇರುವುದರಿಂದ ಹಾಗೂ ನಮ್ಮೆಲ್ಲಾ ಸಾಂಘಿಕ ಪ್ರಯತ್ನ ಮತ್ತು ಮನವಿಗೆ ಸ್ಪಂದಿಸಿದ ಕೇಂದ್ರದ ಅಧಿಕಾರಿಗಳು ಈ ಬಾರಿ ನಡೆಯುವ ಗಣರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ಹೆಮ್ಮೆ ಪ್ರದರ್ಶಿಸುವ ಸ್ಥಬ್ಧ ಚಿತ್ರಕ್ಕೆ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅವಕಾಶ ವಂಚಿತವಾಗಿರುವುದಕ್ಕೆ ಆತಂಕ: ಕಳೆದ 14 ವರ್ಷಗಳಲ್ಲಿ ಪ್ರದರ್ಶಿಸಿದ ಎಲ್ಲ ಸ್ಥಬ್ಧ ಚಿತ್ರಗಳೂ ನಮ್ಮ ನಾಡು ನುಡಿ ಕಲೆ, ಸಂಸ್ಕೃತಿ ಸಾಹಿತ್ಯವನ್ನು ಬಿಂಬಿಸುವಲ್ಲಿ ಯಶಸ್ವಿ ಕಂಡಿದ್ದವು. ಆದರೆ, ಏಕಾಏಕಿ ಈ ಬಾರಿ ಅವಕಾಶ ವಂಚಿತವಾಗಿರುವುದು ಆತಂಕಕ್ಕೆ ಸೃಷ್ಟಿಸಿತು. ಈ ಬಗ್ಗೆ ಮಾಧ್ಯಮಗಳು, ಕನ್ನಡ ಪರ ಸಂಘಟನೆಗಳು, ಕನ್ನಡ ಪರ ಚಿಂತಕರು ಕನ್ನಡ ಸಾಹಿತ್ಯ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಮಟ್ಟದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಮಹತ್ವದ ಜವಾಬ್ದಾರಿ ಪರಿಷತ್ತಿನ ಹೆಗಲಿಗೆ ಹಾಕಿದ್ದರು.

ನಮ್ಮ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದೆ ಮಂಡಿಸುತ್ತಿದ್ದಂತೆ ರಾಜ್ಯ ಸರಕಾರವೂ ಅದಕ್ಕೆ ನಮ್ಮ ಬೆಂಬಲಕ್ಕೆ ನಿಂತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸರಕಾರಕ್ಕೆ ಈ ಬಾರಿಯ ಗಣರಾಜ್ಯೋತ್ಸವಕ್ಕೆ ನಮ್ಮ ರಾಜ್ಯದ ಸ್ಥಬ್ಧ ಚಿತ್ರ ತಂಡಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದನ್ನು ನೆನೆಪಿಸಿಕೊಂಡಿದ್ದಾರೆ.

ರಾಜ್ಯದ ಹೆಮ್ಮೆ ,ಪರಂಪರೆ ಪ್ರತಿನಿಧಿಸಲಿರುವ ಸ್ತಬ್ದಚಿತ್ರ:ಪ್ರಸಕ್ತ ರಾಜ್ಯದ ಪರ ದೆಹಲಿಯಲ್ಲಿನ ರಾಜಪಥದಲ್ಲಿ ನಡೆಯುವ ಪರೇಡ್​ನಲ್ಲಿ ಭಾಗವಹಿಸುವ ಸ್ಥಬ್ಧ ಚಿತ್ರ ಸಂಪೂರ್ಣ ರಾಜ್ಯದ ಹೆಮ್ಮೆ ಮತ್ತು ಪರಂಪರೆಯನ್ನು ಪ್ರತಿನಿಧಿಸಲಿದೆ ಎನ್ನುವ ವಿಶ್ವಾಸ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಸಮಸ್ತ ಕನ್ನಡಿಗರ ಅಸ್ಮಿತೆಯನ್ನು ದೇಶದ ಪ್ರಧಾನ ಅಂಗಳದಲ್ಲಿ ಬಿಂಬಿಸುವ ಕಾರ್ಯದಲ್ಲಿ ಎಲ್ಲರಿಗೂ ಇರುವ ವಿಶ್ವಾಸ ತಮಗಿದೆ ಎಂದು ಡಾ. ಮಹೇಶ ಜೋಶಿ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂಓದಿ:ಸುದ್ದಿ ವಾಹಿನಿಗಳಿಗೆ ಸುಪ್ರೀಂ ಚಾಟಿ: ಸಂಯಮದಿಂದ ವರ್ತಿಸುವುದನ್ನು ಕಲಿಯಲು ಸೂಚನೆ

ABOUT THE AUTHOR

...view details