ಬೆಂಗಳೂರು:ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣವಾಗುತ್ತಿದ್ದಂತೆಯೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯಗಳಲ್ಲಿ ಅಧಿಕಾರ ಪಡೆಯುವ ಲೆಕ್ಕಾಚಾರ ಶುರುವಾಗಿದ್ದು,ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಿಢೀರ್ ವಿದೇಶಕ್ಕೆ ತೆರಳಿರುವುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯುವ ಲೆಕ್ಕಾಚಾರ ರಾಜ್ಯದ ಕೆಲ ಬಿಜೆಪಿ ನಾಯಕರಲ್ಲಿದ್ದರೂ,ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನು ಕಂಡಿರುವ ಬಿಜೆಪಿ ವರಿಷ್ಠರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಕಸರತ್ತು ಆರಂಭಿಸಿದ್ದು, ಇದರ ಭಾಗವಾಗಿ ಕುಮಾರಸ್ವಾಮಿ ದಿಢೀರ್ನೆ ವಿದೇಶಕ್ಕೆ ತೆರಳಿದ್ದಾರೆ.
ಹೀಗೆ ವಿದೇಶಕ್ಕೆ ತೆರಳಿರುವ ಕುಮಾರಸ್ವಾಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ದೂತರು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿದ್ದು, ಈ ಬೆಳವಣಿಗೆಯಿಂದ ಕರ್ನಾಟಕದ ರಾಜಕೀಯ ಚಿತ್ರಣ ಮತ್ತಷ್ಟು ರಂಗೇರುವಂತೆ ಮಾಡಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು, ಕಳೆದ ಬಾರಿ ನಾವು ಚುನಾವಣೆಯಲ್ಲಿ ರಾಜ್ಯದ 58 ಸಾವಿರ ಮತಗಟ್ಟೆಗಳ ಪೈಕಿ 27 ಸಾವಿರ ಮತಗಟ್ಟೆಗಳಲ್ಲಿ ಮುನ್ನಡೆ ಸಾಧಿಸಿದ್ದೆವು. ಆದರೆ ಈ ಬಾರಿ 31 ಸಾವಿರ ಮತಗಟ್ಟೆಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ಹೀಗಾಗಿ ಕನಿಷ್ಠ 120 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಸಂತೋಷ್ ಅವರ ಆತ್ಮವಿಶ್ವಾಸದ ಮಾತುಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಹಿರಿಯ ನಾಯಕರು 80 ರಿಂದ 85 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಗಳಿಸಲಿದ್ದು, ಸಮ್ಮಿಶ್ರ ಸರ್ಕಾರ ಅನಿವಾರ್ಯವಾಗಬಹುದು ಎಂದಿದ್ದಾರೆನ್ನಲಾಗಿದೆ.
ಇಂತಹ ಅಭಿಪ್ರಾಯಗಳ ನಡುವೆಯೇ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದಿಢೀರನೆ ವಿದೇಶಕ್ಕೆ ತೆರಳಿದ್ದು, ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕನಿಷ್ಠ ಸ್ಥಾನಗಳು ಲಭ್ಯವಾಗಲಿದ್ದು, ನಮಗೆ ದಕ್ಕುವ 80ರಷ್ಟು ಸ್ಥಾನಗಳನ್ನು ಸೇರಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸಬಹುದು ಎಂದು ಮೋದಿ-ಅಮಿತ್ ಶಾ ಭಾವಿಸಿದ್ದಾರೆ. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರ ಜೊತೆ ಮಾತುಕತೆಗೆ ವೇದಿಕೆ ಸಿದ್ಧ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಉಳಿದಂತೆ ಪ್ರತಿಪಕ್ಷ ಕಾಂಗ್ರೆಸ್ ಪಾಳೆಯದಲ್ಲಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರಗಳು ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಈ ಬಾರಿ ನಮಗೆ 140 ಸ್ಥಾನಗಳಲ್ಲಿ ಗೆಲುವು ದಕ್ಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 120 ಕ್ಷೇತ್ರಗಳಲ್ಲಿ ನಮಗೆ ಗೆಲುವು ದಕ್ಕಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಸಿದ್ದರಾಮಯ್ಯ ಆಪ್ತರ ಪ್ರಕಾರ, ಕಳೆದ ಚುನಾವಣೆಗಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರೆತಿರುವ ಶೇಕಡಾವಾರು ಮತಗಳ ಪ್ರಮಾಣ ಹೆಚ್ಚು. ಕಳೆದ ಬಾರಿ ಶೇ.38 ರಷ್ಟು ಮತಗಳು ಬಂದಿದ್ದರೆ, ಈ ಬಾರಿ ಶೇ.40 ಕ್ಕಿಂತ ಹೆಚ್ಚು ಮತಗಳು ಬಂದಿವೆ. ಕಳೆದ ಬಾರಿ ಪಿಎಫ್ಐ ಮತ್ತು ಎಸ್ಡಿಪಿಐ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಯಾಗಿತ್ತು. ಈ ಎರಡು ಶಕ್ತಿಗಳು ಅಲ್ಪಸಂಖ್ಯಾತರ ಮತಗಳಲ್ಲಿ ಪಾಲು ಪಡೆದ ಪರಿಣಾಮವಾಗಿ ಕಾಂಗ್ರೆಸ್ ಗೆ ಬರಬೇಕಿದ್ದ ಈ ಮತಗಳು ಕಡಿಮೆಯಾಗಿದ್ದವು.
ಆದರೆ ಈ ಬಾರಿ ಈ ಶಕ್ತಿಗಳ ಹಾವಳಿ ಇಲ್ಲದೇ ಇರುವುದರಿಂದ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಣನೀಯ ಪ್ರಮಾಣದ ಮತಗಳು ಬಂದಿದ್ದು, ಇದರ ಪರಿಣಾಮ ಗೆಲುವಿನ ಅಂಚಿನಲ್ಲಿದ್ದ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆನ್ನಲಾಗಿದೆ.
ಇದೇ ರೀತಿ ಯಡಿಯೂರಪ್ಪ ಅವರ ಪದಚ್ಯುತಿ ಪ್ರಕರಣ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದ ಬಿಜೆಪಿ ಕ್ರಮ ಸಹಜವಾಗಿಯೇ ಲಿಂಗಾಯತ ಮತಬ್ಯಾಂಕಿನಲ್ಲಿ ಬಿಜೆಪಿ ವಿರೋಧಿ ಭಾವನೆ ಕಂಡು ಬರಲು ಕಾರಣವಾಗಿದ್ದು, ಗಣನೀಯ ಪ್ರಮಾಣದ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಿವೆ ಎಂದು ಸಿದ್ದರಾಮಯ್ಯ ಲೆಕ್ಕ ಹಾಕಿದ್ದಾರೆ.
ಇದೇ ಕಾರಣಕ್ಕಾಗಿ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಪರ ಅಲೆಯನ್ನು ಸೂಚಿಸುತ್ತಿದ್ದು,ಶತಾಯ ಗತಾಯ ನಾವು ಅಧಿಕಾರ ಹಿಡಿಯುವುದು ನಿಶ್ಚಿತ ಎಂಬುದು ಸಿದ್ದರಾಮಯ್ಯ ವಾದವೆನ್ನಲಾಗಿದೆ. ಈ ಮಧ್ಯೆ ಪಕ್ಷ 140 ಸೀಟುಗಳನ್ನು ಗಳಿಸಲಿದೆ ಎಂಬ ವಿಶ್ವಾಸ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ವ್ಯಕ್ತವಾಗಿದ್ದರೂ, ರಾಜ್ಯದಲ್ಲಿ ಪಕ್ಷೇತರರಾಗಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳನ್ನು ರಹಸ್ಯವಾಗಿ ಸಂಪರ್ಕಿಸತೊಡಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಗಳಿಸಿದ ನಂತರ ನಿಮ್ಮ ಬೆಂಬಲ ಕಾಂಗ್ರೆಸ್ ಜತೆಗಿರಲಿ ಎಂದು ಡಿಕೆಶಿ ಈ ಪಕ್ಷೇತರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದು, ಈ ಅಂಶ ರಾಜ್ಯ ರಾಜಕಾರಣದ ಚಿತ್ರ ಅಂದುಕೊಂಡಷ್ಟು ಸರಳವಾಗಿಲ್ಲ. ಎಲ್ಲವೂ ಮೇ 13 ರ ಮತ ಎಣಿಕೆ ಪೂರ್ಣಗೊಂಡ ನಂತರ ಸ್ಪಷ್ಟವಾಗಲಿದೆ.
ಇದನ್ನೂಓದಿ:2023ರ ಎಕ್ಸಿಟ್ ಪೋಲ್ಸ್ ರಾಜಕೀಯ ಭವಿಷ್ಯ ನಿಜವಾಗುತ್ತಾ? 2018ರಲ್ಲಿ ಸಮೀಕ್ಷೆಗಳು ಏನ್ ಹೇಳಿದ್ದವು?