ಕರ್ನಾಟಕ

karnataka

ಕಾಂಗ್ರೆಸ್ ಬಿಜೆಪಿ ನಡುವೆ ಅನ್ನಭಾಗ್ಯ ಅಕ್ಕಿ ವಾರ್: ಸಿದ್ದು ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

By

Published : Jun 14, 2023, 7:31 PM IST

ಅಕ್ಕಿ ಸಂಗ್ರಹ ಇದ್ದರೂ ಪೂರೈಕೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕೀಳು ರಾಜಕಾರಣ ನಿಲ್ಲಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಹರಿಹಾಯ್ದರು.

Etv Bharatbjp-leaders-outrage-against-cm-siddaramaiah-govrnment-on-rice-issue
ಕಾಂಗ್ರೆಸ್ ಬಿಜೆಪಿ ನಡುವೆ ಅನ್ನಭಾಗ್ಯ ಅಕ್ಕಿ ವಾರ್: ಸಿದ್ದು ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ನಡೆದಿದೆ. ಸಿದ್ದರಾಮಯ್ಯ ಆರೋಪಕ್ಕೆ ರಾಜ್ಯ ಬಿಜೆಪಿ ನಾಯಕರು ಸರಣಿ ಟ್ವೀಟ್​ಗಳನ್ನು ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಮಾಜಿ ಸಚಿವ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಬೆನ್ನಲ್ಲೇ ಮಾಜಿ ಸಚಿವ ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಹ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಕ್ಕಿ ವಿತರಣೆ ತಾರತಮ್ಯ ಆರೋಪವನ್ನು ಟ್ವೀಟ್ ಮೂಲಕ ಟೀಕಿಸಿರುವ ಮಾಜಿ ಸಚಿವ ಸುನೀಲ್ ಕುಮಾರ್, ಸಿದ್ದರಾಮಯ್ಯನವರೇ, ನುಡಿದಂತೆ ನಡೆಯುತ್ತೇವೆ ಎಂದು ಪುಗಸಟ್ಟೆ ಪ್ರಚಾರ ತೆಗೆದುಕೊಂಡು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಾರಿಕೊಳ್ಳುವ ಪ್ರಯತ್ನ ನಡೆಸುತ್ತೀರಾ?. ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ಧಪಡಿಸುವಾಗ‌ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಿದ್ದಿರಾ?. ಈ ಹಿಂದೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಕೊಟ್ಟ ಅಕ್ಕಿಯನ್ನೇ ನಾನು ಉಚಿತವಾಗಿ ಕೊಟ್ಟೆ ಎಂದು ಡೋಂಗಿ ಹೊಡೆದವರು ನೀವಲ್ಲವೇ?. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂಬ ಸಬೂಬು ಏಕೆ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಕೊಡುತ್ತಿದ್ದ ಐದು ಕೆಜಿ ಅಕ್ಕಿ ಪೂರೈಕೆಯನ್ನು ನಿಲ್ಲಿಸಿಲ್ಲ. ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದು ನಿಮ್ಮ ವಾಗ್ದಾನ. ಅದರಂತೆ ನಡೆದುಕೊಳ್ಳಿ. ಅಂಗಳ ಡೊಂಕು ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕೀಳು ರಾಜಕಾರಣ ನಿಲ್ಲಿಸಿ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಪ್ರತಿಕ್ರಿಯಿಸಿ, ಉಚಿತ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ಒದಗಿಸುತ್ತಿಲ್ಲ ಎಂದು ಆರೋಪಿಸುತ್ತೀದ್ದೀರಿ?. ಈ ಹಿಂದೆಯೂ ನಿಮ್ಮ ಆಡಳಿತ ಅವಧಿಯಲ್ಲಿ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ, ಅಪ್ಪಿ ತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯ ತೋರಲೇ ಇಲ್ಲ, ಇದೀಗ ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ನಿಮ್ಮ ದಿಕ್ಕು ತಪ್ಪಿಸುವ ತಂತ್ರ ಅರ್ಥಮಾಡಿಕೊಳ್ಳದೇ ಇರುವಷ್ಟು ನಮ್ಮ ಜನ ಮುಗ್ಧರಲ್ಲ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯರವರೇ, ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ. ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತ ನವರಂಗಿ ನಾಟಕ ಮಾಡುತ್ತಿದ್ದೀರಿ. ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ, ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ ಕೈ ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ ಗ್ಯಾರಂಟಿ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ ಎಂದು ಟ್ವಿಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ:Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details