ಕರ್ನಾಟಕ

karnataka

ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ: ಏಪ್ರಿಲ್ 8 ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ..?

By

Published : Apr 3, 2023, 6:05 PM IST

ರಾಜ್ಯದ ಜನತೆಯಲ್ಲಿ ಕುತೂಹಲ ಕೆರಳಿಸಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

BJP core committee meeting tomorrow: BJP to release first list on April 8..?
ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ: ಏಪ್ರಿಲ್ 8 ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ..?

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಏಪ್ರಿಲ್ 8 ರಂದು ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಜಿಲ್ಲಾ ಸಮಿತಿಗಳಿಂದ ಅಭಿಪ್ರಾಯ ಸಂಗ್ರಹಿಸಿರುವ ರಾಜ್ಯ ಬಿಜೆಪಿ ಇನ್ನೆರಡು ದಿನದಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಲಿದ್ದು, ಏಪ್ರಿಲ್ 8 ರಂದು ನವದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಮೊದಲ ಪಟ್ಟಿ ಅಂತಿಮಗೊಳಿಸಿ ಬಿಡುಗಡೆ ಮಾಡಲಾಗುತ್ತದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಜಿಲ್ಲಾ ಕೋರ್ ಕಮಿಟಿಗಳಿಂದ ಆಯಾ ಜಿಲ್ಲೆಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಏಪ್ರಿಲ್ 4 ಮತ್ತು 5 ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.

ರಾಜ್ಯ ಮಟ್ಟದ ಕೋರ್ ಕಮಿಟಿಯಲ್ಲಿ ಹಾಲಿ ಶಾಸಕರಿರುವ ವಿವಾದಗಳಿಲ್ಲದ ಕಡೆ ಒಂದೇ ಹೆಸರನ್ನು ಶಿಫಾರಸು ಮಾಡಲಿದ್ದು, ಹೆಚ್ಚಿನ ಆಕಾಂಕ್ಷಿಗಳಿದ್ದಲ್ಲಿ ಅಥವಾ ಜಿಲ್ಲಾ ಸಮಿತಿ ಬೇರೊಬ್ಬರ ಹೆಸರಿಗೆ ಪ್ರಬಲ ಅಪೇಕ್ಷೆ ವ್ಯಕ್ತಪಡಿಸಿದ್ದಲ್ಲಿ ಎರಡು ಹೆಸರು ಕಳುಹಿಸಲಾಗುತ್ತದೆ. ಏಪ್ರಿಲ್ 5 ರಂದೇ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಿ ಕೊಡಲಾಗುತ್ತದೆ. ಈ ಕುರಿತು ಪಕ್ಷದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದು, ನಾಳೆ ಮತ್ತು ನಾಡಿದ್ದು ಚುನಾವಣಾ ಸಮಿತಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯ ಪರಿಶೀಲನೆ ನಡೆಸಲಾಗುತ್ತದೆ. ಕೋರ್ ಕಮಿಟಿ ಒಮ್ಮತದ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 8 ರಂದು ನವದೆಹಲಿಯಲ್ಲಿ ಪಕ್ಷದ ಅತ್ಯುನ್ನತ ಸಮಿತಿಯಾದ ಕೇಂದ್ರ ಸಂಸದೀಯ ಮಂಡಲಿ ಮತ್ತು ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ನಡೆಸಲಾಗುತ್ತದೆ. ಮೂರು ಹಂತದಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, 8 ರಂದು ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ಇನ್ನೆರಡು ದಿನ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಲಾಗುತ್ತದೆ. 8 ರಂದು ಸಂಸದೀಯ ಮಂಡಳಿ ಸಭೆ ಇದ್ದು, ಅಂದೇ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಬಂಡಾಯ ಸಾಧ್ಯತೆ ಇಲ್ಲದ, ಬಹುತೇಕ ಹಾಲಿ ಶಾಸಕರೇ ಇರುವ ಕ್ಷೇತ್ರಗಳನ್ನೇ ಒಳಗೊಂಡ ಮೊದಲ ಪಟ್ಟಿಯನ್ನು ಮೊದಲು ಬಿಡುಗಡೆ ಮಾಡಲಿದ್ದು, ನಂತರ ಹಾಲಿ ಶಾಸಕರಿಗೆ ವಿರೋಧ ಇರುವ ಕಡೆ ಅವಲೋಕನ ನಡೆಸಿ, ಹೊಸ ಮುಖ ಪರಿಚಯ ಇರುವ ಕಡೆ ಅರ್ಹರ ಆಯ್ಕೆ ಮಾಡಿ, ಪೈಪೋಟಿ ಇರುವ ಕ್ಷೇತ್ರಕ್ಕೆ ಪರಾಜಿತ ಅಭ್ಯರ್ಥಿ ಸೂಕ್ತವೋ, ಹೊಸಬರಿಗೆ ಅವಕಾಶ ನೀಡಬೇಕೋ ಎನ್ನುವ ನಿರ್ಧಾರ ಕೈಗೊಂಡು ಏಪ್ರಿಲ್ 13 ರ ಒಳಗೆ ಮತ್ತೆರಡು ಪಟ್ಟಿಯ ಮೂಲಕ ಎಲ್ಲಾ 224 ಕ್ಷೇತ್ರಕ್ಕೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ.

ಬಂಡಾಯವೇಳುವ ಕಡೆ ಕಡೇಯದಾಗಿ ಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ನಾಮಪತ್ರ ಸಲ್ಲಿಕೆ ಆರಂಭಗೊಳ್ಳುವ ಮುನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕು ಎಂದು ರಾಜ್ಯ ಘಟಕ ಹೈಕಮಾಂಡ್​ಗೆ ಮನವಿ ಸಲ್ಲಿಸಿದ್ದು, ಅದರಂತೆ ಮೂರು ಪಟ್ಟಿಗಳು ಏಪ್ರಿಲ್ 13 ರ ಒಳಗೆ ಬಿಡುಗಡೆಯಾಗಲಿವೆ ಎನ್ನಲಾಗಿದೆ.

ಇದನ್ನೂ ಓದಿ:ಜಿಲ್ಲಾ ಸಮಿತಿಗಳೊಂದಿಗಿನ ಸಭೆ ಮುಕ್ತಾಯ: ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ

ABOUT THE AUTHOR

...view details