ಕರ್ನಾಟಕ

karnataka

ಪರಿಷತ್ ಚುನಾವಣೆ: ಶಿಕ್ಷಕರ, ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ, ಹೊರಟ್ಟಿ ಕ್ಷೇತ್ರ ಸಸ್ಪೆನ್ಸ್!

By

Published : Mar 11, 2022, 6:35 PM IST

Updated : Mar 11, 2022, 7:46 PM IST

ರಾಜ್ಯ ವಿಧಾನಪರಿಷತ್​ನ ಒಂದು ಶಿಕ್ಷಕರ ಕ್ಷೇತ್ರ ಮತ್ತು ಎರಡು ಪದವೀಧರ ಕ್ಷೇತ್ರಗಳ‌ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಿಸಿದೆ.

BJP announced candidate for Karnataka Legislative Council election
ವಿಧಾನಪರಿಷತ್​ ಚುನಾವಣೆ

ಬೆಂಗಳೂರು:ಜೂನ್ ತಿಂಗಳಿನಲ್ಲಿ ತೆರವಾಗಲಿರುವ ಎರಡು ಶಿಕ್ಷಕರ ಕ್ಷೇತ್ರ ಎರಡು ಪದವೀಧರರ ಕ್ಷೇತ್ರ ಸೇರಿ ಒಟ್ಟು ವಿಧಾನಪರಿಷತ್​​ನ ನಾಲ್ಕು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಜೆಡಿಎಸ್​​ನ ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸದೆ ಕುತೂಹಲ ಮೂಡುವಂತೆ ಮಾಡಿದೆ.

ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅರುಣ್ ಶಹಾಪುರ, ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಹನುಮಂತ ರುದ್ರಪ್ಪ ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ. ರವಿಶಂಕರ್ ಹೆಸರನ್ನು ಘೋಷಣೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಅವರಿಗೆ ಈ ಬಾರಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿತ್ತಾದರೂ ಈ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಬಿಜೆಪಿ ಪ್ರಕಟಿಸಿಲ್ಲ‌.


ವಾಯವ್ಯ ಪದವೀಧರ ಕ್ಷೇತ್ರದಿಂದ ಹಾಲಿ ಸದಸ್ಯ ಹನುಮಂತ ನಿರಾಣಿ, ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಅರುಣ್ ಶಹಾಪುರ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದ್ದ ಬಿಜೆಪಿ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯನ್ನು ಬಾಕಿ ಉಳಿಸಿಕೊಂಡಿತ್ತು. ಎಂ.ವಿ. ರವಿಶಂಕರ್‌, ವಿಧಾನಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ್‌, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಶ್‌, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್‌ ಯೋಗೇಂದ್ರ, ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಈ.ಸಿ. ನಿಂಗರಾಜೇಗೌಡ, ಯಮುನಾ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ರವಿಶಂಕರ್​​ಗೆ ಟಿಕೆಟ್ ಲಭ್ಯವಾಗಿದೆ.

ಟಿಕೆಟ್‌ಗಾಗಿ ಇತ್ತು ಪೈಪೋಟಿ: ಸತತ 7 ಬಾರಿ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಕಣಕ್ಕಿಳಿಯಲು ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮುಂದಾಗಿದ್ದು, ಟಿಕೆಟ್​​ಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಈ ಹಿಂದೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಮಾಜಿ ಸಚಿವ ಹೆಚ್​.ಕೆ. ಪಾಟೀಲ್‌ ಅವರನ್ನು ಸೋಲಿಸಿದ್ದ ಇವರು, ಈ ಸಲ ಶಿಕ್ಷಕರ ಕ್ಷೇತ್ರದಿಂದ ತಮಗೆ ಟಿಕೆಟ್‌ ಕೊಡಿ ಎಂದು ಕೇಳಿದ್ದಾರೆ. ಇವರ ಜೊತೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸುಧೀಂದ್ರ ದೇಶಪಾಂಡೆ, ಕರ್ನಾಟಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಸಂದೀಪ್ ಬೂದಿಹಾಳ ಕೂಡ ಟಿಕೆಟ್‌ ಕೇಳಿದ್ದಾರೆ. ಈ ಮೂವರ ನಡುವೆ ಇದೀಗ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಆದರೆ ಸದ್ಯ ಯಾರಿಗೂ ಟಿಕೆಟ್ ನೀಡಿಲ್ಲ.

ಹೊರಟ್ಟಿ ಬಿಜೆಪಿಗೆ?:ಹಾಲಿ ಸದಸ್ಯ ಬಸವರಾಜ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಕೂಡ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಇವೆಲ್ಲದರ ನಡುವೆ ಹೊರಟ್ಟಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟಿಸದೇ ಇರುವುದು ಹೊರಟ್ಟಿ ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆಗೆ ಪುಷ್ಟಿ ನೀಡುವಂತೆ ಮಾಡಿದೆ.

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ 4 ಸದಸ್ಯ ಸ್ಥಾನಗಳಿಗೆ ಚುನಾವಣೆಯು 2022ರ ಜೂನ್ ತಿಂಗಳಲ್ಲಿ ನಡೆಯಲಿದೆ. ಪ್ರಸ್ತುತ ಹಾಲಿ ಸದಸ್ಯರ ಅವಧಿಯು ಕ್ರಮವಾಗಿ 2022ರ ಜ.5ರಂದು ಹಾಗೂ 2022ರ ಜುಲೈ 4ರಂದು ಕೊನೆಗೊಳ್ಳಲಿದೆ. ನಾಲ್ಕೂ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಬಿಡುಗಡೆಗೊಳಿಸಿ ಪಟ್ಟಿಯನ್ನು ಆಯೋಗ ಅಂತಿಮಗೊಳಿಸಿದೆ.

ವಾಯವ್ಯ ಪದವೀಧರರ ಕ್ಷೇತ್ರದಲ್ಲಿ 50,807 ಮತದಾರರು, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ 1,08,090 ಮತದಾರರು, ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 14,359 ಮತದಾರರು, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 12,607 ಮತದಾರರಿದ್ದಾರೆ. ಡಿ. 8ರಂದು ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಡಿ. 27ರೊಳಗೆ ಆಕ್ಷೇಪಣೆ ಸಲ್ಲಿಕೆ, ಹೆಸರು ಸೇರಿಸಲು, ಬದಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಸಮಯ ಮುಗಿದ ಹಿನ್ನೆಲೆಯಲ್ಲಿ ಪಟ್ಟಿಯನ್ನು ಆಯೋಗ ಅಂತಿಮಗೊಳಿಸಿದೆ.

ಇದನ್ನೂ ಓದಿ:ಒವೈಸಿ ಪಕ್ಷಕ್ಕಿಂತ ನೋಟಾಗೆ ಬಿದ್ದ ಮತಗಳೇ ಹೆಚ್ಚು; ಸ್ಪರ್ಧಿಸಿದ 100 ಸ್ಥಾನಗಳಲ್ಲಿ 99ರಲ್ಲಿ ಠೇವಣಿ ನಷ್ಟ!

Last Updated : Mar 11, 2022, 7:46 PM IST

ABOUT THE AUTHOR

...view details