ಕರ್ನಾಟಕ

karnataka

ನಂದಿನಿ ಹಾಲನ್ನೇ ಬಳಸಲು ನಿರ್ಧರಿಸಿದ ಬೆಂಗಳೂರು ಹೊಟೇಲ್ ಸಂಘ

By

Published : Apr 9, 2023, 4:07 PM IST

Updated : Apr 9, 2023, 4:46 PM IST

ರಾಜ್ಯದ ರೈತರನ್ನು ಬೆಂಬಲಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ನಂದಿನಿ ಹಾಲನ್ನೇ ಬಳಲು ತೀರ್ಮಾನಿಸಿದೆ.

Bengaluru hoteliers decide to use Nandini milk to support state's farmers
ರಾಜ್ಯದ ರೈತರ ಬೆಂಬಲಿಸಲು ನಂದಿನಿ ಹಾಲು ಬಳಕೆ: ಬೆಂಗಳೂರು ಹೊಟೇಲ್ ಸಂಘ ತೀರ್ಮಾನ

ಬೆಂಗಳೂರು:ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗೆ ಅಮುಲ್​ ಹಾಲು ಮತ್ತು ಮೊಸರು ಉತ್ಪನ್ನ ಪ್ರವೇಶ ಪಡೆಯುವ ಸಂಬಂಧ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಇದರ ನಡುವೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್​ನವರು ನಂದಿನಿ ಹಾಲನ್ನು ಪ್ರೋತ್ಸಾಹಿಸಲು ಮತ್ತು ರಾಜ್ಯದ ಹೈನುಗಾರಿಕೆ ರೈತರಿಗೆ ಬೆಂಬಲಿಸಲು ನಿರ್ಧರಿಸಿದೆ. ಅಮುಲ್ ಕುರಿತು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್​, ಜೆಡಿಎಸ್ ಪರಸ್ಪರ ವಾಗ್ದಾಳಿಯಲ್ಲಿ ತೊಡಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಬೆಂಗಳೂರು ಹೊಟೇಲ್ ಅಸೋಸಿಯೇಷನ್​ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, ಅಮುಲ್ ಹೆಸರಿಸದೆ ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಬೆಂಬಲಿಸಬೇಕೆಂದು ಕರೆ ನೀಡಿದೆ. ''ನಮ್ಮ ರೈತರು ಉತ್ಪಾದಿಸುವ ನಂದಿನಿ ಹಾಲಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ನಂದಿನಿ ಹಾಲನ್ನು ಪ್ರೋತ್ಸಾಹಿಸಬೇಕು. ನಮ್ಮ ನಗರದಲ್ಲಿ ಶುದ್ಧ ಮತ್ತು ರುಚಿಕರವಾದ ಕಾಫಿ ತಿಂಡಿಗಳಿಗೆ ನಂದಿನಿ ಹಾಲೇ ಕಾರಣ. ನಾವು ಅದನ್ನು ಬಹಳ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ. ಇತ್ತೀಚೆಗೆ ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಹಾಲು ರವಾನೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ನಾವೆಲ್ಲರೂ ನಂದಿನಿಯನ್ನೇ ಉಪಯೋಗಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ'' ಎಂದು ತಿಳಿಸಿದೆ.

ವಿವಾದವೇನು?: ಕಳೆದ ಬುಧವಾರ ಗುಜರಾತ್​ ಮೂಲದ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್), ಶೀಘ್ರವೇ ಬೆಂಗಳೂರಿಗೆ ತಾಜಾ ಹಾಲು ಪ್ರವೇಶವಾಗಲಿದೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌, ಪಶ್ಚಿಮ ತುದಿಯಿಂದ ಪೂರ್ವಕ್ಕೆ "LaunchAlert" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್​ ಮಾಡಿತ್ತು. ಹಾಲು ಮತ್ತು ಮೊಸರು ಪೂರೈಕೆ ಸುಲಭಗೊಳಿಸಲು ತ್ವರಿತ ವಾಣಿಜ್ಯ ವೇದಿಕೆಗಳನ್ನು ಬಳಸಲಾಗುವುದು ಎಂದೂ ತನ್ನ ಟ್ವೀಟ್‌ನಲ್ಲಿ ತಿಳಿಸಿತ್ತು.

ಇದರ ಬೆನ್ನಲ್ಲೇ, ರಾಜ್ಯದ ನಂದಿನಿ ಬ್ರ್ಯಾಂಡ್​ ನಾಶ ಮಾಡಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಎಲ್ಲ ಕನ್ನಡಿಗರು ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ನಾಡಿನ ರೈತರ ಹಿತಕ್ಕಾಗಿ ನಿರ್ಮಿಸಿರುವ ಕೆಎಂಎಫ್‌ನ ಕಬಳಿಕೆಯನ್ನು ಎಲ್ಲ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಮುಲ್ ಹಿಂಬಾಗಿಲಿನಿಂದ ರಾಜ್ಯದ ಡೈರಿ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಬೇಕೆಂದು ಆಗ್ರಹಿಸಿದ್ದರು.

ಕೆಎಂಎಫ್​ ಹೇಳಿದ್ದೇನು?:ಹಾಲಿನ ಮಾರುಕಟ್ಟೆ ಬಗ್ಗೆ ಉಂಟಾದ ವಿವಾದ ನಂತರ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)​ ವ್ಯವಸ್ಥಾಪಕ ನಿರ್ದೇಶಕರು ಸಹ ಪ್ರತಿಕಾ ಹೇಳಿಕೆ ನೀಡಿ, ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ನಂದಿನಿ ಬ್ರ್ಯಾಂಡ್​ ಮತ್ತೊಂದು ದೊಡ್ಡ ಸಹಕಾರಿ ಸಂಸ್ಥೆಯೊಂದಿಗೆ ವಿಲೀನ ಮಾಡಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತಿದೆ. ನಂದಿನಿ ಬ್ರ್ಯಾಂಡ್ ಹಾಲು ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ ಅನ್ನೋ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ. ಅಂತಹ ಯಾವುದೇ ಬೆಳವಣಿಗೆಗಳು ಕೆಎಂಎಫ್‌ನಲ್ಲಿ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಅಮುಲ್ ರಾಜ್ಯ ಪ್ರವೇಶ: ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ.. ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರು ಹೇಳುವುದೇನು?

ಅಲ್ಲದೇ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವು ದೇಶದ ಎರಡನೇ ಅತಿ ದೊಡ್ಡ ಸಹಕಾರ ಹಾಲು ಮಹಾಮಂಡಳ ಸಂಸ್ಥೆಯಾಗಿದೆ. 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿ ದಿನ ಸರಾಸರಿ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ, ಸುಮಾರು 150ಕ್ಕೂ ಹೆಚ್ಚು ವಿವಿಧ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಕಳೆದ 4 ದಶಕಗಳಿಂದ ಒದಗಿಸುತ್ತಿದೆ. ಹಾಲಿನ ಶೇಖರಣೆಯನ್ನು ಮುಂದಿನ ದಿನಗಳಲ್ಲಿ ಪ್ರತಿನಿತ್ಯ 1 ಕೋಟಿಗೂ ಅಧಿಕ ಲೀಟರ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಹಾಲಿನ ಸರಾಸರಿ ಶೇಖರಣೆ ಶೇ.6 ರಿಂದ 7ರಷ್ಟು ಏರಿಕೆಯಾಗಿದೆ. ಮಾರಾಟ ಶೇ.25ರಷ್ಟು ಪ್ರಗತಿಯನ್ನು ಸಾಧಿಸುತ್ತಾ, ದೇಶದ ವಿವಿಧ ರಾಜ್ಯಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಿದೆ. ನಂದಿನಿ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರ್ಯಾಂಡ್ ಆಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ನಂದಿನಿ ಹಾಲಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ: ಕೆಎಂಎಫ್ ಸ್ಪಷ್ಟನೆ

Last Updated :Apr 9, 2023, 4:46 PM IST

ABOUT THE AUTHOR

...view details