ಕರ್ನಾಟಕ

karnataka

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್​​​, ಬಂಟಿಂಗ್ಸ್ ತೆರವು: ಅಧಿಕಾರಿಗಳಿಗೆ ಪಾಲಿಕೆ ಆಯುಕ್ತರ ಖಡಕ್ ಸೂಚನೆ

By

Published : Feb 28, 2022, 7:19 PM IST

ಸಿಲಿಕಾನ್​ ಸಿಟಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್​​​ಗಳನ್ನು ತೆರವುಗೊಳಿಸುವ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರ ಎಲ್ಲ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

BBMP Commissioner Gaurav Gupta held meeting with officers
ಅಧಿಕಾರಿಗಳ ಜೊತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಭೆ

ಬೆಂಗಳೂರು: ರಾಜಧಾನಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್​​​ಗಳನ್ನು ತೆರವುಗೊಳಿಸುವ ಕೆಲಸ ಇನ್ನಷ್ಟು ವೇಗವಾಗಿ ನಡೆಯಬೇಕಿದ್ದು, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್​​​​ಗಳ ತೆರವುಗೊಳಿಸುವಿಕೆ ಬಗ್ಗೆ ನಡೆದ ವರ್ಚುಯಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್​​​​​ಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದೆ. ಆಯಾ ವಲಯ ವ್ಯಾಪ್ತಿಯಲ್ಲಿನ ಸ್ಥಳೀಯ ಅಧಿಕಾರಿಗಳು ಯಾವುದೇ ಫ್ಲೆಕ್ಸ್​​​​ಗಳನ್ನು ಅಳವಡಿಸಲು ಬಿಡಬಾರದು. ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವಂತಹವರ ಮೇಲೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಫ್​ಐಆರ್​​ ದಾಖಲಿಸಲು ಸೂಚನೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಹೇಗೆ ನಗರವು ಬ್ಯಾನರ್, ಫ್ಲೆಕ್ಸ್​​​​​ಗಳಿಂದ ಮುಕ್ತವಾಗಿರುತ್ತದೆಯೋ ಅದೇ ರೀತಿ ಈಗಲೂ ಕೂಡ ನಗರವು ಬ್ಯಾನರ್, ಫ್ಲೆಕ್ಸ್ ಗಳಿಂದ ಮುಕ್ತವಾಗಿರಬೇಕು. ನಗರದಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಫ್ಲೆಕ್ಸ್, ಬ್ಯಾನರ್​​​​​ಗಳನ್ನು ಅಳವಡಿಸಲಾಗಿದೆಯೋ ಅಂತಹ ಸ್ಥಳಗಳಲ್ಲಿ ಪೊಲೀಸ್ ಸಹಯೋಗದ ಜೊತೆಗೆ ಮಾರ್ಷಲ್‌ಗಳನ್ನು ಸಹ ನಿಯೋಜನೆ ಮಾಡಿಕೊಂಡು ತೆರವುಗೊಳಿಸಲು ಮುಂದಾಗಬೇಕು. ಪಾಲಿಕೆಯ ಶಿಲ್ಟ್ ಅಂಡ್ ಟ್ರ್ಯಾಕ್ಟರ್​ ಸೇರಿ ಹೆಚ್ಚುವರಿಯಾಗಿ ಇನ್ನಿತರ ವಾಹನಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ತೆರವು ಕಾರ್ಯಾಚರಣೆ ನಡೆಸಲು ಸೂಚಿಸಿದರು.

ನಗರದಲ್ಲಿ ಫ್ಲೆಕ್ಸ್, ಬ್ಯಾನರ್​ಗಳು, ಬಂಟಿಗ್ಸ್, ಭಿತ್ತಿಪತ್ರ, ಬಾವುಟಗಳು ಸೇರಿದಂತೆ ಇತ್ಯಾದಿ ಜಾಹೀರಾತು/ಪ್ರಕಟಣೆಗಳ ಅಳವಡಿಕೆಯು ಬಿಬಿಎಂಪಿ ಕಾಯ್ದೆ 2020 ಮತ್ತು ಕರ್ನಾಟಕ ಮುಕ್ತ ಸ್ಥಳಗಳ(ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ(3)ರ ಅಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೂ ಸಹ ನಗರದಲ್ಲಿ ಮತ್ತೆ ಮತ್ತೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್​ಗ​​ಳನ್ನು ಅಳವಡಿಸಿ ನಗರದ ಸೌಂದರ್ಯ ಆಳಾಗುವಂತಹ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ಅಧಿಕಾರಿಗಳು ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ತೆರವು ಕಾರ್ಯಾಚರಣೆ ಮಾಡಿ, ಯಾವುದೇ ಅನಧಿಕೃತ ಫ್ಲೆಕ್ಸ್ ಗಳು ಇರದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಪೊಲೀಸ್ ಇಲಾಖೆಯಿಂದ ಸಹಯೋಗ ನೀಡಲು ಮನವಿ:ಸ್ಥಳೀಯ ಪೊಲೀಸ್ ಸಿಬ್ಬಂದಿಯು ಅನಧಿಕೃತ ಫ್ಲೆಕ್ಸ್​​​ಗಳನ್ನು ತೆರವುಗೊಳಿಸುವ ವೇಳೆ ಪಾಲಿಕೆ ಅಧಿಕಾರಿಗಳ ಜೊತೆ ತೆರಳಿ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಗೆ ಸಹಕಾರ ಅತ್ಯಗತ್ಯ ಎಂದು ಮುಖ್ಯ ಆಯುಕ್ತರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​​ ಅವರಿಗೆ ಮನವಿ ಮಾಡಿದರು.

ಈ ವೇಳೆ ಆಯುಕ್ತರು ಪ್ರತಿಕ್ರಿಯಿಸಿ, ಪಾಲಿಕೆಯ ಜೊತೆಗೆ ನಮ್ಮ ಅಧಿಕಾರಿಗಳು ಕೈಜೋಡಿಸಿ ಕಾರ್ಯ ನಿರ್ವಹಿಸಲಿದ್ದು, ಪಾಲಿಕೆ ಅಧಿಕಾರಿಗಳಿಗೆ ಬೇಕಾದಂತಹ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಪಾಲಿಕೆಯ ಎಲ್ಲ ವಲಯ ಆಯುಕ್ತರುಗಳು, ಹಣಕಾಸು ವಿಭಾಗದ ಅಪರ ಆಯುಕ್ತರು ವೆಂಕಟೇಶ್.ಎಸ್, ಎಲ್ಲ ವಲಯ ಜಂಟಿ ಆಯುಕ್ತರುಗಳು, ಎಲ್ಲ ವಲಯ ಮುಖ್ಯ ಇಂಜಿನಿಯರ್‌ಗಳು, ಎಲ್ಲ ವಿಭಾಗೀಯ ಕಾರ್ಯಪಾಲಕ ಇಂಜಿನಿಯರ್‌ಗಳು ಇತರ ಅಧಿಕಾರಿಗಳು ಉಪಸ್ಥಿರಿದ್ದರು.

ಇದನ್ನೂ ಓದಿ: ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ : ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

TAGGED:

ABOUT THE AUTHOR

...view details