ಕರ್ನಾಟಕ

karnataka

ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್​​​ಗೆ ಜಾಮೀನು ನಿರಾಕರಿಸಿದ ಸೆಷನ್ಸ್ ನ್ಯಾಯಾಲಯ

By

Published : Aug 17, 2022, 6:42 AM IST

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಬಂಧಿಯಾಗಿರುವ ಐಪಿಎಸ್​ ಅಧಿಕಾರಿ,ಎಡಿಜಿಪಿ ಅಮೃತ್ ಪಾಲ್ ಅವರ ಜಾಮೀನು ಅರ್ಜಿಯನ್ನು ಬೆಂಗಳೂರು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.

banglore-sessions-court-denies-bail-to-adgp-amrit-paul-in-psi-scam
ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಗೆ ಜಾಮೀನು ನಿರಾಕರಿಸಿದ ಸೆಶೆನ್ಸ್ ನ್ಯಾಯಾಲಯ

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿಯಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮೃತ್ ಪಾಲ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಅಮೃತ್‌ ಪಾಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 51ನೇ ಹೆಚ್ಚುವರಿ ನಗರ ಮತ್ತು ಸೆಷನ್ಸ್ ಕೋರ್ಟ್​​​​ನ ನ್ಯಾಯಾಧೀಶ ಯಶವಂತ ಕುಮಾರ್‌ ಅವರು ಮಂಗಳವಾರ ತೀರ್ಪು ನೀಡಿ ಜಾಮೀನು ಅರ್ಜಿ ವಜಾಗೊಳಿಸಿದರು.

ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಅಮೃತ್ ಪಾಲ್​​ ಅವರು ಪಿಎಸ್‌ಐ ಹಗರಣದಲ್ಲಿ 35ನೇ ಆರೋಪಿಯಾಗಿದ್ದಾರೆ. ನೇಮಕಾತಿ ಅಕ್ರಮ ಪ್ರಕರಣ ಬಗ್ಗೆ
ಸಿಐಡಿಯು ದೋಷಾರೋಪ ಪಟ್ಟಿ ಸಲ್ಲಿಸಬೇಕಿದ್ದು, ಈ ಸಂದರ್ಭದಲ್ಲಿ ಪಾಲ್‌ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂಥ ಸಾಧ್ಯತೆಗಳಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದು ಇನ್ನೂ ಬಾಕಿಯಿರುವುದರಿಂದ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲವೆಂದು ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದೆ.

ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ಕಳೆದ ತಿಂಗಳು ಜುಲೈ 25ರಂದು ಅಮೃತ್‌ ಪಾಲ್‌ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅಮೃತ್ ಪಾಲ್‌ ಅವರು ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸಿಐಡಿಯು ಅಮೃತ್ ಪಾಲ್ ಅವರಿಗೆ ಜಾಮೀನು ನೀಡಲು ಆಕ್ಷೇಪಣೆ ವ್ಯಕ್ತಪಡಿಸಿ ಕೋರ್ಟ್ ನಲ್ಲಿ ತನ್ನ ವಾದ ಮಂಡಿಸಿತ್ತು.

ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು ವಾದಿಸಿ ಜಾಮೀನಿನ ಮೇಲೆ ಆರೋಪಿ ಪಾಲ್ ಅವರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ :ಪಿಜಿಯಲ್ಲಿ ವಿದ್ಯಾರ್ಥಿನಿಯರ ಮೇಲೆ ಸೆಕ್ಯುರಿಟಿ ಗಾರ್ಡ್ ದೌರ್ಜನ್ಯ: ಸಿಸಿಟಿವಿ ವಿಡಿಯೋ

ABOUT THE AUTHOR

...view details