ಕರ್ನಾಟಕ

karnataka

ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶೀಘ್ರ ಶಿಲಾನ್ಯಾಸ: ಅಶ್ವತ್ಥನಾರಾಯಣ

By

Published : Mar 28, 2023, 9:39 PM IST

ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಅಭಿವೃದ್ಧಿ ಪಡಿಸಲಾಗುವುದು. ಶೀಘ್ರ ಮುಜರಾಯಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಅನುಮತಿಯನ್ನು ಪಡೆದುಕೊಂಡು ಶಿಲಾನ್ಯಾಸ ಮಾಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.

ashwatthanarayan-reaction-on-construction-of-ram-mandir
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶೀಘ್ರ ಶಿಲಾನ್ಯಾಸ

ರಾಮ ಮಂದಿರದ ಪ್ರಾತ್ಯಕ್ಷಿಕೆ

ಬೆಂಗಳೂರು: ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶೀಘ್ರದಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು. ವಿಕಾಸಸೌಧದಲ್ಲಿ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರದ ಪ್ರಾತ್ಯಕ್ಷಿಕೆ ಪ್ರದರ್ಶನ ಬಳಿಕ ಅವರು ಮಾತನಾಡಿದರು.

19 ಎಕರೆ ವಿಸ್ತೀರ್ಣ ಹೊಂದಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ 100-120 ಕೋಟಿ ರೂ. ಖರ್ಚಾಗಬಹುದು. ಮುಜರಾಯಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಅನುಮತಿಯನ್ನು ಪಡೆದುಕೊಂಡು, ಶಿಲಾನ್ಯಾಸ ಮಾಡಲಾಗುವುದು. ಆದರೆ ಇದಕ್ಕೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ ಎಂದು ತಿಳಿಸಿದರು.

ನಮ್ಮ ಸರ್ಕಾರನೇ ಬರೋದು, ನಾವೇ ರಾಮಮಂದಿರ ಮಾಡೋದು: ಶ್ರೀರಾಮನ ಸೇನೆಗೆ ಚುನಾವಣೆ ಬಂದರೂ, ಮುಂದೆ ನಾವೇ ಇರುವುದು ನಮ್ಮ ಸರ್ಕಾರನೇ ಬರುವುದು ನಾವೇ ರಾಮಮಂದಿರ ಮಾಡುತ್ತೇವೆ. ಶಿಲಾನ್ಯಾಸವನ್ನು ತ್ವರಿತವಾಗಿ ‌ಮಾಡಲಾಗುತ್ತದೆ. ರಾಮದೇವರ ಬೆಟ್ಟದಲ್ಲಿ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ಜತೆಗೆ ಇಲ್ಲಿರುವ ರಣಹದ್ದುಗಳ ಆವಾಸ ಸ್ಥಾನಕ್ಕೂ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಮುಜರಾಯಿ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕಳಿಸಿ ಕೊಡಲಾಗುವುದು. ಈ ವಿಚಾರದಲ್ಲಿ ಯಾವುದೇ ಕಾನೂನಿನ ತೊಡಕು ಎದುರಾಗದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಆರಂಭಿಕವಾಗಿ ಯೋಜನಾ ವರದಿ ಸಿದ್ಧಪಡಿಸಲು 40 ಲಕ್ಷ ರೂ.ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಳಿ ಚರ್ಚಿಸಿ ತೀರ್ಮಾನಿಸಲಾಗಿದೆ. ಈ ಸ್ಥಳದ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಕ್ರಮ ವಹಿಸಲಾಗುತ್ತದೆ. ಏನೆಲ್ಲಾ ಸೌಕರ್ಯ ಬೇಕು, ಇತಿಹಾಸವನ್ನು ತೋರಿಸುವ ಕೆಲಸ ಮಾಡಲಾಗುವುದು. ಪರಿಸರದ ದೃಷ್ಟಿಯಿಂದ ಏನೆಲ್ಲಾ ಕ್ರಮ ವಹಿಸಬಹುದು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಪರಿಸರ ಸ್ನೇಹಿ ದೇವಸ್ಥಾನ ನಿರ್ಮಾಣ.. ರಾಮನಗರದ ರಾಮದೇವರ ಬೆಟ್ಟದಲ್ಲಿರುವ ರಾಮನ ದೇವಸ್ಥಾನವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ತೀರ್ಮಾನಿಸಿದ್ದು, ಮಂಗಳವಾರ ಆ ಸಂಬಂಧದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವಿಕಾಸಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ:ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್​ ಹೆಸರು ಮರುನಾಮಕರಣ: ರೆಬೆಲ್ ಸ್ಟಾರ್ ಪ್ರತಿಮೆ ಹಾಗು ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ

ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನಿಡಿದ್ದ ಸಿಎಂ:ಸೋಮವಾರ ರಾಮನಗರ ಜಿಲ್ಲೆಯ ಅರ್ಚಕರಹಳ್ಳಿ ಬಳಿಯ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ನಂತರ ಮಾತನಾಡಿದ್ದ ಅವರು, ಕಳೆದ 16 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕ್ಯಾಂಪಸ್ ನಿರ್ಮಾಣವೇ ಗೊಂದಲದ ಗೂಡಾಗಿತ್ತು. ಎಲ್ಲಾ ಸಮಸ್ಯೆಗಳನ್ನು ಎದುರಿಸಿ, ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದರು.

ABOUT THE AUTHOR

...view details