ಕರ್ನಾಟಕ

karnataka

ಹೆಚ್​ಡಿಕೆ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ ಆರೋಪ: ಸಿಎಸ್​ ಖುದ್ದು ಹಾಜರಿಗೆ ಹೈಕೋರ್ಟ್ ಸೂಚನೆ

By

Published : Mar 9, 2023, 8:38 PM IST

Updated : Mar 9, 2023, 9:26 PM IST

ಹೆಚ್​ಡಿಕೆ ಹಾಗೂ ಅವರ ಕುಟಂಬಸ್ಥರು ಗೋಮಾಳ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಮಾಜಿ ಸಂಸದ ದಿ. ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತವರ ಸಂಬಂಧಿಕರಾದ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರರ ವಿರುದ್ಧದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಭೂ ಕಬಳಿಕೆ ಆರೋಪ ಪ್ರಕರಣ ಸಂಬಂಧ ಸರ್ಕಾರ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ಟಿ.ವೆಂಕಟೇಶ್​ ನಾಯ್ಕ್​ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮಾ 15ಕ್ಕೆ ಮುಂದೂಡಿದೆ.

ಪ್ರಕರಣ ಸಂಬಂಧ ಕಂದಾಯ ಇಲಾಖೆ ಕಾರ್ಯದರ್ಶಿ ಸಲ್ಲಿಸಿದ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಭೂ ಕಬಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ಲೋಕಾಯುಕ್ತ 2014ರಲ್ಲಿ ಆದೇಶ ನೀಡಿದೆ. ಆದರೆ, ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ ಮುಂದಿನ ವಿಚಾರಣೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?:ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ಸೇರಿ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೇ ನಂಬರ್‌ಗಳಲ್ಲಿ 14 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರಲ್ಲಿ ಕಂದಾಯ ಇಲಾಖೆಗೆ ಆದೇಶಿಸಿದ್ದರು. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್​​ ಸಹ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ. ಹೀಗಾಗಿ ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಹಿರಿಯ ವಕೀಲ ನಂಜುಂಡರೆಡ್ಡಿ ನಿಧನ:ಹೈಕೋರ್ಟ್​ನ ಹಿರಿಯ ವಕೀಲ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎನ್. ನಂಜುಂಡರೆಡ್ಡಿ (68) ಇಂದು (ಗುರುವಾರ) ಬೆಳಗ್ಗೆ ನಗರದ ಎಚ್​ಸಿಜಿ ಆಸ್ಪತ್ರೆಯಲ್ಲಿ ನಿಧನರಾದರು. ದೇವರಗುಡಿಪಲ್ಲಿ ಗ್ರಾಮದಲ್ಲಿ ಜನಿಸಿದ್ದ ನಂಜುಂಡರೆಡ್ಡಿ ಅವರು, ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಸಾಂವಿಧಾನಿಕ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಹೈಕೋರ್ಟ್ ನಲ್ಲಿ ಚುನಾವಣಾ ತಕರಾರು ಅರ್ಜಿಗಳನ್ನು ನಡೆಸುವುದರಲ್ಲಿ ಅವರದ್ದು ಎತ್ತಿದ ಕೈ ಎನಿಸಿತ್ತು. ಹೈಕೋರ್ಟ್ ವಕೀಲರುಗಳಾದ ಚಿತ್ರದುರ್ಗದ ಬ್ಯಾರಿಸ್ಟರ್ ವಾಸುದೇವ ರೆಡ್ಡಿ ಮತ್ತು ಗೌರಿಬಿದನೂರಿನ ಜಿ.ವಿ. ಶಾಂತರಾಜು ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದ್ದ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲರಾಗಿ ಸುದೀರ್ಘ ಕಾಲ ವಕೀಲಿಕೆ ನಡೆಸಿದ್ದರು. ಇಂದು ಸಂಜೆ 5 ಗಂಟೆಗೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬದ ಸದಸ್ಯರೊಬ್ಬರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಹೆಚ್‌ಡಿಕೆ ಕುಟುಂಬಸ್ಥರಿಂದ ಜಮೀನು ಒತ್ತುವರಿ ಆರೋಪ: ಕಂದಾಯ ಇಲಾಖೆ ಪ್ರಮಾಣ ಪತ್ರಕ್ಕೆ ಹೈಕೋರ್ಟ್​ ಅಸಮಾಧಾನ

Last Updated : Mar 9, 2023, 9:26 PM IST

ABOUT THE AUTHOR

...view details