ಕರ್ನಾಟಕ

karnataka

ಅ.10ಕ್ಕೆ ಎಲ್ಲ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಮಿಳುನಾಡು - ಕರ್ನಾಟಕ ಗಡಿ ಬಂದ್: ವಾಟಾಳ್ ನಾಗರಾಜ್

By ETV Bharat Karnataka Team

Published : Oct 4, 2023, 7:31 AM IST

ಅಕ್ಟೋಬರ್ 10ಕ್ಕೆ ಬೆಳಗ್ಗೆ 11 ಗಂಟೆಗೆ ಅತ್ತಿಬೆಲೆಯ ತಮಿಳುನಾಡು ಗಡಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

Etv Bharat
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್

ವಿಧಾನಸೌಧದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಅಕ್ಟೋಬರ್ 10 ರಂದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಮತ್ತು ಅತ್ತಿಬೆಲೆ ಬಳಿಯ ತಮಿಳುನಾಡು - ಕರ್ನಾಟಕ ಗಡಿ ಬಂದ್ ಮಾಡಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕ್ಟೋಬರ್ 5ರಂದು ಕೆಆರ್​ಎಸ್​ಗೆ ಮೆರವಣಿಗೆ ನಡೆಸಲಿದ್ದೇವೆ. ಅಕ್ಟೋಬರ್ 10ಕ್ಕೆ ಎಲ್ಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿದ್ದೇವೆ. ಅಂದು ಬೆಳಗ್ಗೆ 11 ಗಂಟೆಗೆ ಅತ್ತಿಬೆಲೆಯ ತಮಿಳುನಾಡು ಗಡಿ ಬಂದ್ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ತಮಿಳುನಾಡಿನವರು ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ, ಇದು ಬಹಳ ನೋವಾಗುತ್ತಿದೆ, ಕೆಆರ್​ಎಸ್​ನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ಜಲಸಂಪನ್ಮೂಲ ಸಚಿವರು ಅಷ್ಟು ಬಂತು, ಇಷ್ಟು ಬಂತು ಅಂತ ಅದೇನೋ ಹೇಳುತ್ತಿದ್ದಾರೆ. ಇದನ್ನು ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೇಶದ ಮೇಲೆ ಯುದ್ಧ ಮಾಡಿದಂತೆ ಆಡ್ತಾರೆ. ಅವರು ಮಾರುವೇಷದಲ್ಲಿ ಬಂದು ಕೆಆರ್​ಎಸ್ ರೌಂಡ್ ಹಾಕಿಕೊಂಡು ಹೋಗಲಿ. ನಮ್ಮನ್ನು ಏನು ಮಾಡಬೇಕು ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದೆ. ಈ ಅರ್ಜಿ ಏನಾಯ್ತು?, ನೀರು ಏನಾಗ್ತಿದೆ ಎಂಬ ಸತ್ಯ ನಮಗೆ ಬೇಕು. ಈ ವಿಚಾರದಲ್ಲಿ ರಾಜಕೀಯ ಬೇಡ, ಅಲ್ಲಿನ ಸಚಿವ ಪಳನಿಸ್ವಾಮಿ ಕೂಡ ಬೀದಿಗೆ ಇಳಿದಿದ್ದಾರೆ. ಇದನ್ನು ಕರ್ನಾಟಕದ ಜನತೆ ಗಂಭೀರವಾಗಿ ಚಿಂತನೆ ಮಾಡಬೇಕು.‌ ಯಾರಿಗೂ ಗಂಭೀರತೆ ಇಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾವು ತಮಿಳುನಾಡಿನ ತಪ್ಪು ನಿರ್ಧಾರ, ಬ್ಲಾಕ್​ಮೇಲ್ ಖಂಡಿಸಿ ಸ್ಟಾಲಿನ್ ಸರ್ಕಾರದ ವಿರುದ್ಧ ಐದನೇ ತಾರೀಖಿನಂದು ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ಬಾರಿ ದೊಡ್ಡ ಮೆರವಣಿಗೆ ಮಾಡುತ್ತೇವೆ. ನಮ್ಮಲ್ಲಿ ನೀರಿಲ್ಲ ಅಂತ ಸ್ಪಷ್ಟವಾಗಿ ಹೇಳುತ್ತೇನೆ. ಕೆಆರ್‌ಎಸ್​ನಲ್ಲಿ ಕನ್ನಡ ಒಕ್ಕೂಟದ ಮೇಳ ಮಾಡುತ್ತೇವೆ. ನೂರಾರು ವಾಹನಗಳಲ್ಲಿ ತೆರಳಿ ಕನ್ನಡ ಒಕ್ಕೂಟ, ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ ಮಾಡಿ ಕರಾಳ ದಿನ ಆಚರಿಸುತ್ತಿದ್ದೇವೆ ಎಂದರು.

ಸಂಸದರು ಈಗಲಾದರೂ ಧೈರ್ಯ ಮಾಡಿ ರಾಜೀನಾಮೆ ಕೊಡಿ. ಇನ್ನು ಆರು ತಿಂಗಳಲ್ಲಿ ಚುನಾವಣೆ ಬರುತ್ತದೆ, ರಾಜೀನಾಮೆ ಕೊಟ್ಟರೆ ಶಕ್ತಿ, ಗೌರವ ಬರುತ್ತದೆ. ಮೋದಿಯವರು ಎರಡೂ ರಾಜ್ಯದವರನ್ನು ಕರೆಯಿಸಿ ಮಾತನಾಡಲಿ. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ. ಎರಡೂ ಕಡೆಯ ಸಿಎಂ ಕರೆಯಿಸಿ ಮಾತನಾಡಿ. ಹಿಂದೆಲ್ಲ ಪ್ರಧಾನಿಗಳು ಸಮಸ್ಯೆ ಬಗೆಹರಿಸಿದ್ದಾರೆ. ಈಗ ಸಂಕಷ್ಟ ಸೂತ್ರದ ಬಗ್ಗೆ ತೀರ್ಮಾನ ಆಗಬೇಕು ಎಂದು ಒತ್ತಾಯಿಸಿದರು.

ನಾರಾಯಣ ಗೌಡ ನಾನು ಸ್ನೇಹಿತರು, ನಾವು ಯಾಕೆ ಕಿತ್ತಾಡಬೇಕು?. ಸ್ಟಾಲಿನ್ ವಿರುದ್ಧ ಹೋರಾಟ ಮಾಡೋದು. ಸಿನಿಮಾದವರು ಅವರಿಚ್ಚೆಯಂತೆ ಮನ ಬಂದಂತೆ ಮಾತನಾಡ್ತಾರೆ. ವೀರಪ್ಪ ಮೊಯ್ಲಿ ಅವರಿಗೂ ತೊಂದರೆ ಆಗಿದೆ, ಇಬ್ಬರು ಕುಳಿತು ಮಾತನಾಡಿ ಅಂತಾರೆ. ಎಲ್ಲಿ ಕೂತ್ಕೊಂಡು ಮಾತನಾಡಬೇಕು, ಅವರ ಮನೆಯಲ್ಲಾ?, ಚಿಕ್ಕಬಳ್ಳಾಪುರದಲ್ಲಾ?, ದೊಡ್ಡಬಳ್ಳಾಪುರದಲ್ಲಾ?. ಸಿನಿಮಾದವರು ಸ್ಪಷ್ಟ ಮಾತುಗಳನ್ನಾಡುತ್ತಿಲ್ಲ, ಸುಮ್ನೆ ನಾವಿದ್ದೀವಿ ಅಂತಾರೆ. ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ಆ.29 ರ ಬಂದ್ ಉತ್ತರ ಕೊಟ್ಟಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಮಂಡ್ಯದಲ್ಲಿ ಕಾವೇರಿ ಕಿಚ್ಚು: ಸರ್ಕಾರದ ವಿರುದ್ದ ಚಡ್ಡಿ, ಮದ್ಯ ಬಾಟಲ್‌ಗಳೊಂದಿಗೆ ಪ್ರತಿಭಟನೆ

ABOUT THE AUTHOR

...view details