ಕರ್ನಾಟಕ

karnataka

ಕರ್ನಾಟಕದ 291 ಗ್ರಾಮಗಳಿಗೆ ಇನ್ನೂ ಸರ್ಕಾರಿ ಬಸ್ ಸೌಲಭ್ಯವೇ ಇಲ್ಲ

By ETV Bharat Karnataka Team

Published : Oct 15, 2023, 3:22 PM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿ ಒಟ್ಟು 21,670 ಗ್ರಾಮಗಳು. ಬಹುತೇಕ ಎಲ್ಲ ಗ್ರಾಮಗಳಿಗೂ ನಿಗಮದ ಸಾರಿಗೆ ಬಸ್​ಗಳ ಸೌಲಭ್ಯವಿದೆ. ಬಸ್​ ಸಂಪರ್ಕವಿಲ್ಲದ ಗ್ರಾಮಗಳಿಗೆ ಹಂತಹಂತವಾಗಿ ಸಾರಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ksrtc
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ

ಬೆಂಗಳೂರು:ರಾಜ್ಯದ ರಸ್ತೆ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿ ಕೆಎಸ್ಆರ್​ಟಿಸಿಯ ನಾಲ್ಕು ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಈ ನಿಗಮಗಳು 31,563 ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಿವೆ. ಆದರೆ ಇನ್ನೂ 291 ಗ್ರಾಮಗಳಿಗೆ ಬಸ್ ಸಂಚಾರದ ಸಂಪರ್ಕವೇ ಇಲ್ಲ. 766 ಗ್ರಾಮಗಳ ಸಮೀಪಕ್ಕೆ ಮಾತ್ರ ಸಾರಿಗೆ ಬಸ್​ಗಳು ತೆರಳುತ್ತಿವೆ. ಈ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಲು ಮೂಲಸೌಕರ್ಯ ಕೊರತೆ ಅಡ್ಡಿಯಾಗಿದೆ. ಹೀಗಾಗಿ ಭವಿಷ್ಯದಲ್ಲಿ ಇಂಥ ಗ್ರಾಮಗಳಿಗೂ ಸಾರಿಗೆ ಸೇವೆ ನೀಡಲು ಸಾರಿಗೆ ನಿಗಮಗಳು ಚಿಂತಿಸಿವೆ.

"ರಾಜ್ಯದ 291 ಗ್ರಾಮಗಳಿಗೆ ಮಾತ್ರ ಬಸ್​ಗಳು ಸೇವೆ ಒದಗಿಸಿಲ್ಲ. ಭಾರಿ ವಾಹನಗಳು ಚಲಿಸಲು ಅನುಕೂಲವಾಗುವ ರಸ್ತೆ ಸೌಲಭ್ಯವಿಲ್ಲ. ಹೀಗಾಗಿ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ. ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ಬೇಡಿಕೆಗೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸಿ, ನಂತರ ಮಾರ್ಗದ ಸಮೀಕ್ಷೆ ಪರಿಶೀಲಿಸಿ ಹಂತಹಂತವಾಗಿ ಸಾರಿಗೆ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

"ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 4,610 ಗ್ರಾಮಗಳಲ್ಲಿ 4,565 ಗ್ರಾಮಗಳಿಗೆ ಸಾರಿಗೆ ಬಸ್ ಸೌಕರ್ಯವಿದೆ. ಉಳಿದ 45 ಗ್ರಾಮಗಳಿಗೆ ವಾಹನ ಸಂಚಾರ ಯೋಗ್ಯ ರಸ್ತೆ ಇಲ್ಲದಿರುವುದರಿಂದ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ. ಹಂತಹಂತವಾಗಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

"ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಒಟ್ಟು 5,283 ಗ್ರಾಮಗಳಿವೆ. ಅವುಗಳಲ್ಲಿ 5,241 ಗ್ರಾಮಗಳಿಗೆ ಸಾರಿಗೆ ಸೌಲಭ್ಯವಿದೆ. ಉಳಿದ 42 ಗ್ರಾಮಗಳಿಗೆ ಭಾರಿ ವಾಹನಗಳ ಕಾರ್ಯಾಚರಣೆಗೆ ಯೋಗ್ಯ ರಸ್ತೆ ಇಲ್ಲ. ಮುಖ್ಯ ರಸ್ತೆಯವರೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈ 42 ಗ್ರಾಮಗಳಿಗೆ ರಸ್ತೆ ದುರಸ್ತಿಗೊಳಿಸಿದ ನಂತರ ಸಾರಿಗೆ ಸಂಚಾರದ ಸೌಲಭ್ಯ ಕಲ್ಪಿಸಲಾಗುತ್ತದೆ" ಎಂದರು.

"ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಭಾರಿ ವಾಹನಗಳು ಸಂಚರಿಸಲು ಆಚರಣೆಗೆ ಯೋಗ್ಯ ರಸ್ತೆಗಳಿರುವ ಎಲ್ಲ ಪ್ರದೇಶಗಳಿಗೂ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಯಾವುದೇ ಗ್ರಾಮವೂ ಸಾರಿಗೆ ಸೌಲಭ್ಯದಿಂದ ವಂಚಿತವಾಗಿಲ್ಲ" ಎಂದು ಸಚಿವ ರಾಮಲಿಂಗಾರಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:100 ಕರ್ನಾಟಕ ಸಾರಿಗೆ ಹಾಗೂ 40 ನಾನ್​ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್​​​​ಗಳಿಗೆ ಸಿಎಂ, ಡಿಸಿಎಂ ಚಾಲನೆ

ABOUT THE AUTHOR

...view details