ETV Bharat / state

100 ಕರ್ನಾಟಕ ಸಾರಿಗೆ ಹಾಗೂ 40 ನಾನ್​ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್​​​​ಗಳಿಗೆ ಸಿಎಂ, ಡಿಸಿಎಂ ಚಾಲನೆ

author img

By ETV Bharat Karnataka Team

Published : Oct 7, 2023, 1:13 PM IST

Updated : Oct 7, 2023, 2:08 PM IST

ಇಂದು ಪಲ್ಲಕ್ಕಿ ಹಾಗೂ 100 ಸಾಮಾನ್ಯ ಕೆಎಸ್​ಆರ್​​ಟಿಸಿ ಬಸ್​ಗಳಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು.

ಪಲ್ಲಕ್ಕಿಗೆ ಚಾಲನೆ
ಪಲ್ಲಕ್ಕಿಗೆ ಚಾಲನೆ

ಸಿಎಂ,ಡಿಸಿಎಂರಿಂದ ನೂತನ ಬಸ್​​ಗಳಿಗೆ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್ ಬಳಿ ಇಂದು ಆಯೋಜಿಸಿದ್ದ 100 ನೂತನ ಕರ್ನಾಟಕ ಸಾರಿಗೆ ಹಾಗೂ 40 ಹವಾನಿಯಂತ್ರಣ ರಹಿತ ಸ್ಲೀಪರ್ ಪಲ್ಲಕ್ಕಿ ಬಸ್​​​ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಲೋಕಾರ್ಪಣೆಗೊಳಿಸಿದರು.

ಇದೇ ವೇಳೆ ಪಾಯಿಂಟ್​ ಟು ಪಾಯಿಂಟ್ ಕಾರ್ಯಾಚರಣೆಗೆ ನೂತನ ಮಾದರಿಯ ಮೇಲ್ದರ್ಜೆಗೇರಿಸಿದ ಕರ್ನಾಟಕ ಸಾರಿಗೆ ಬಸ್​​​ಗಳಿಗೂ ಸಿಎಂ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಇಂದು ನಾವು ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಗ್ಯಾರಂಟಿ ಯೋಜನೆ ಘೋಷಿಸಿದಾಗ ಅನೇಕರು ನಮ್ಮನ್ನು ಟೀಕಿಸಿದರು. ಬೇರೆ ರಾಜ್ಯದ ಮುಖ್ಯಮಂತ್ರಿಗಳು, “ನಿಮ್ಮಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ” ಎಂದು ನನ್ನನ್ನು ಕೇಳಿದ್ದರು.

ಹೆಣ್ಣು ಕುಟುಂಬದ ಕಣ್ಣು, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಿ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲು ಜಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆಯಲ್ಲಿ ಈವರೆಗೂ ಸುಮಾರು 70.73 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದು ಹೇಳಿದರು.

ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಈ ಮೊತ್ತ ನೀಡಬೇಕಾಗಿದ್ದು. ಸರ್ಕಾರದ ಮೇಲೆ ಹೊರೆ ಇದೆ. ಕಳೆದ ಏಳೆಂಟು ವರ್ಷಗಳಿಂದ ರಾಜ್ಯದ ಬಸ್​ ದರದಲ್ಲಿ ಏರಿಕೆ ಮಾಡಿಲ್ಲ. ಸಾರಿಗೆ ಸಂಸ್ಥೆಗಳನ್ನು ವೃತ್ತಿಪರತೆಯಲ್ಲಿ ಮುನ್ನಡೆಸಲು ಬದ್ಧತೆ ಇಲ್ಲದ ಕಾರಣ ಸಂಸ್ಥೆ ಸೋರಗುವಂತಾಗಿದೆ. ಸರ್ಕಾರಿ ಸಂಸ್ಥೆಯಾಗಿ ಲಾಭ ಮಾಡುವುದರ ಜತೆಗೆ, ಜನರಿಗೂ ಅನುಕೂಲ ಮಾಡಿಕೊಡಬೇಕು. ಈ ಸಂಸ್ಥೆಯ ಕಾರ್ಮಿಕರ ಹಿತವನ್ನು ನಾವು ಕಾಯಬೇಕು. ಹೀಗಾಗಿ ಸಂಸ್ಥೆ ಲಾಭ ಕಾಣುವುದು ಮುಖ್ಯ. ಕಾರ್ಮಿಕರ ಹಿತ ಕಾಯಲು ಅಪಘಾತದಲ್ಲಿ ಮೃತಪಟ್ಟ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ.ವರೆಗೂ ವಿಮಾ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇತರ ರಾಜ್ಯದ ಇತರ ಸಾರಿಗೆ ಸಂಸ್ಥೆಗಳಿಗೂ ಇದನ್ನು ವಿಸ್ತರಿಸಿ, ಎಲ್ಲ ಸಂಸ್ಥೆಗಳನ್ನು ಸಮಾನವಾಗಿ ನೋಡುವ ಕೆಲಸ ಮಾಡುತ್ತೇವೆ ಎಂದರು.

ಮೈಸೂರಿಗೆ ಪಲ್ಲಕ್ಕಿಯಲ್ಲಿ ತೆರಳುವಂತೆ ಡಿಕೆಶಿ ಪತ್ನಿಗೆ ಸೂಚನೆ : "ಇಂದು ಬೆಳಗ್ಗೆ ಈ ಕಾರ್ಯಕ್ರಮಕ್ಕೆ ಬರುವ ಮುನ್ನ ನನ್ನ ಪತ್ನಿಗೂ ಈ ಬಸ್ ವಿಚಾರ ತಿಳಿಸಿ ಮೈಸೂರಿಗೆ ಹೋಗುವಾಗ ಈ ಬಸ್​ನಲ್ಲಿ ಪ್ರಯಾಣ ಮಾಡಿ ನೋಡು ಎಂದು ಹೇಳಿ ಬಂದಿದ್ದೇನೆ. ಈ ಹಿಂದೆ ಪಲ್ಲಕ್ಕಿಯನ್ನು ರಾಜ ಮಹಾರಾಜರನ್ನು ಹೊರಲು ಬಳಸಲಾಗುತ್ತಿತ್ತು, ಈಗ ನಮ್ಮ ಮಹಿಳೆಯರು ಹಾಗೂ ಪ್ರಯಾಣಿಕರನ್ನು ಈ ಪಲ್ಲಕ್ಕಿ ಹೊರಲಿದೆ. ಈ ಬಸ್​ಗೆ ಪಲ್ಲಕ್ಕಿ ಎಂದು ಅತ್ಯುತ್ತಮ ಹೆಸರಿಟ್ಟವರಿಗೆ ಪ್ರಮಾಣಪತ್ರ ನೀಡಿ ಗೌರವಿಸಬೇಕು" ಎಂದು ಡಿಸಿಎಂ ನುಡಿದರು.

ನಾನು ದೆಹಲಿ ಸೇರಿದಂತೆ ಬೇರೆ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗೆ ಭೇಟಿ ನೀಡಿದಾಗ ಅವರು ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್​ಗಳ ಫೋಟೋಗಳನ್ನೇ ಅವರು ಬಳಸುತ್ತಾರೆ. ನಮ್ಮ ಸಾರಿಗೆ ಸಂಸ್ಥೆಗಳು ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿರುವ ಸಾರಿಗೆ ಸಂಸ್ಥೆಗಳಾಗಿವೆ. ಹೀಗಾಗಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಅಭಿನಂದನೆಗಳು ಎಂದರು. ಬಳಿಕ ಡಿವಿಜಿ ಅವರು ಒಂದು ಮಾತು ಹೇಳಿದ್ದಾರೆ ಎಂದು

ನಗುವು ಸಹಜ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ॥
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ಎಂದರು.

ರಾಜ್ಯದ ಮಹಿಳೆಯರು ತಮ್ಮ ಕುಟುಂಬದವರನ್ನು ಬಸ್​ನಲ್ಲಿ ಕರೆದುಕೊಂಡು ಪ್ರಯಾಣ ಮಾಡಲಿ. ಇಂದು 100 ಕೆಎಸ್ಆರ್​ಟಿಸಿ ಬಸ್ ಹಾಗೂ 40 ಎಸಿ ರಹಿತ ಸ್ಲೀಪರ್​ ಬಸ್​ಗಳನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ಈ ಪಲ್ಲಕ್ಕಿ ಬಸ್​ ನಮ್ಮ ಇತಿಹಾಸ ಪುಟಕ್ಕೆ ಸೇರಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅವರ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಕೆ.ಹೆಚ್. ಮುನಿಯಪ್ಪ, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್, ಶಾಸಕ ಪೊನ್ನಣ್ಣ, ಮಾಜಿ ಸಚಿವ ಎಚ್ ಎಂ ರೇವಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪ್ರಯಾಣಿಕರನ್ನು 'ಪಲ್ಲಕ್ಕಿ'ಯಲ್ಲಿ ಹೊತ್ತು ತಿರುಗಲಿದೆ ಕೆಎಸ್​ಆರ್​ಟಿಸಿ: ರಸ್ತೆಗಿಳಿಯುತ್ತಿವೆ 40 ನಾನ್ ಎಸಿ ಸ್ಲೀಪರ್, 100 ಸಾಮಾನ್ಯ ಬಸ್​ಗಳು

Last Updated : Oct 7, 2023, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.