ಕರ್ನಾಟಕ

karnataka

ದೇವರ ಹರಕೆ ತೀರಿಸುವ ಪಣ .. ಧಾರವಾಡದ ಭಕ್ತನಿಂದ ಬರೋಬ್ಬರಿ 300 ಕಿ.ಮೀ ಉರುಳು ಸೇವೆ

By

Published : Jan 22, 2023, 4:27 PM IST

ಹರಕೆ ತೀರಿಸಲು ಪಂಡರಾಪುರದತ್ತ ವ್ಯಕ್ತಿಯ ಪಯಣ - ಬರೋಬ್ಬರಿ 300 ಕಿಲೋಮೀಟರ್ ಉರುಳು ಸೇವೆ - ಇವರ ಭಕ್ತಿಪರಾಕಾಷ್ಠೆಗೆ ನಿಬ್ಬೆರಗಾದ ಜನ

Man from Bagalkot Perform Urulu Seve
ಉರುಳು ಸೇವೆ ಮಾಡುತ್ತಿರುವ ಭಕ್ತ..

300 ಕಿ.ಮೀ ಉರುಳು ಸೇವೆ ಮಾಡುತ್ತಿರುವ ಭಕ್ತ..

ಬಾಗಲಕೋಟೆ:ಐಶಾರಾಮಿ ವಾಹನಗಳಲ್ಲಿ ಕುಳಿತು ಸಂಚರಿಸಲು ಬೇಸರಿಸುವ ಇಂದಿನ ಕಾಲದಲ್ಲಿ ವ್ಯಕ್ತಿಯೊಬ್ಬರು 300 ಕಿ.ಮೀ ಉರುಳು ಸೇವೆ ಮಾಡುವ ಮೂಲಕ ಹರಕೆ ತೀರಿಸಲು ಮುಂದಾಗಿದ್ದಾರೆ. ಇವರ ಭಕ್ತಿಯ ಪರಾಕಾಷ್ಠೆಗೆ ಜನ ನಿಬ್ಬೆರಗಾಗಿದ್ದಾರೆ. ದೇವರ ಹರಕೆ ತೀರಿಸುವುದಕ್ಕೆ ದೇಹ ದಂಡಿಸುವುದು ಸಾಮಾನ್ಯ. ಆದರೆ ಈ ಭಕ್ತ ಹರಕೆ ತೀರಿಸಲು ಬರೋಬ್ಬರಿ 300 ಕಿ. ಮೀಟರ್​​ಗೂ ಅಧಿಕ ದೂರದವರೆಗೆ ಉರುಳು ಸೇವೆ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ನಿವಾಸಿ ಈಶ್ವರ ಯಲ್ಲಪ್ಪ ಅಂಬಣ್ಣವರ( 48 ) ಅವರು ರಸ್ತೆಯ ಮೇಲೆ ಉರುಳು ಸೇವೆ ಮಾಡುತ್ತಾ ಮಹಾರಾಷ್ಟ್ರದ ಫಂಡರಪೂರಕ್ಕೆ ಸಾಗುತ್ತಿದ್ದಾರೆ. ಮೈಯಲ್ಲಿ ಪ್ಲಾಸ್ಟಿಕ್ ಹೊದಿಕೆ. ಕಾಲಿಗೆ ಪ್ಲಾಸ್ಟಿಕ್ ಸುತ್ತಿಕೊಂಡು ರಸ್ತೆಯ ಮೇಲೆ ಉರುಳುತ್ತಾ ದೇವರಿಗೆ ಹರಕೆ ತೀರಿಸಲು ಮುಂದಾಗಿದ್ದಾರೆ.

ಪಂಢರಾಪುರವರೆಗೆ ಉರುಳು ಸೇವೆ:ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದಿಂದ ಆರಂಭವಾದ ಇವರ ಉರುಳು ಸೇವೆ ಅಮ್ಮಿನಭಾವಿ, ಸವದತ್ತಿದಿಂದ ಕೆ.ಚಂದರಗಿ, ಹುಲಕುಂದ, ಯಾದವಾಡ, ಶಿರೋಳ ಸಿದ್ದಪುರ ಮಾರ್ಗವಾಗಿ ಜಮಖಂಡಿ ಪಟ್ಟಣದ ಮೂಲಕ ಕೃಷ್ಣ ನದಿ, ಜಂಬಗಿ, ಸಾವಳಗಿ ಮೂಲಕ ಜತ್ತ, ಶೇಗಾಂವ್​, ಸುನಂದಾ, ಮಾಂಝರಿ, ಕರಡಿ, ಪಾದಗಟ್ಟಿ ಮೂಲಕ ಮಹಾರಾಷ್ಟ್ರದ ಫಂಡರಪೂರ ತಲುಪಲಿದ್ದಾರೆ.

ಗ್ರಾಮದ ದೇವಾಲಯದಲ್ಲಿ ವಾಸ್ತವ್ಯ:ಪ್ರತಿ ನಿತ್ಯ ಸುಮಾರು 8 ರಿಂದ 10 ಕಿ.ಮೀ ಉರುಳು ಸೇವೆ ಮಾಡುತ್ತಾ ಸಂಚರಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಯಾವುದಾದರು ಗ್ರಾಮದ ದೇವಾಲಯದಲ್ಲಿ ವಾಸ್ತವ್ಯ ಹೂಡುತ್ತಾರೆ. ಗ್ರಾಮಸ್ಥರು ಕೊಡುವ ಆಹಾರ, ಹಣ್ಣು-ಹಂಪಲು ತೆಗೆದುಕೊಂಡು ಸಂಚಾರವನ್ನು ಮುಂದುವರಿಸುತ್ತಾರೆ. ಕಳೆದ ಒಂಬತ್ತು ವರ್ಷಗಳಿಂದ ಇವರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ತಮ್ಮ ಹರಕೆ ಪೂರೈಸಿದ್ದಾರೆ.

ಒಂದು ತಿಂಗಳು ಸಾಗಲಿರುವ ಉರುಳು ಸೇವೆ:ಈಗ ಮೂರು ವರ್ಷಗಳ ಕಾಲ ಹೀಗೆ ಉರುಳು ಸೇವೆ ಮಾಡುತ್ತ ಹೋಗುತ್ತಿದ್ದಾರೆ. ಉರುಳು ಸೇವೆ ಮಾಡಿದರೆ ದೇವರು ಎಲ್ಲಾ ಕಷ್ಟ ಕಾರ್ಪಣ್ಯ ದೂರು ಮಾಡುತ್ತಾನೆ ಎಂಬುದು ಈಶ್ವರ ಯಲ್ಲಪ್ಪ ಅಂಬಣ್ಣವರ ಅವರ ನಂಬಿಕೆ. ಜನವರಿ 14ರಂದು ಪ್ರಾರಂಭವಾದ ಈ ಉರುಳು ಸೇವೆ ಒಂದು ತಿಂಗಳ ಕಾಲ ಹೀಗೆ ಸಾಗುತ್ತದೆ. ಈಗ ಜಮಖಂಡಿ ಪಟ್ಟಣದ ಸಮೀಪ ಬಂದಿದ್ದಾರೆ. ಕೃಷ್ಣ ನದಿಯ ಮೂಲಕ ಸಾವಳಗಿಯಿಂದ ಮಹಾರಾಷ್ಟ್ರದ ಗಡಿಗೆ ಹೋಗಿ ಪಂಢರಾಪುರ ತಲುಪುತ್ತಾರೆ.

ಸಂಬಂಧಿಕರು ಸಾಥ್​​:ಇವರ ಹಿಂದೆ ಸೈಕಲ್​ನ​​ಲ್ಲಿ ಬಟ್ಟೆ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಈಶ್ವರ ಅವರ ಮಾವ ಉರುಳು ಸೇವೆಗೆ ಸಹಾಯ ಮಾಡುತ್ತಿದ್ದಾರೆ. ಆಧುನಿಕ ಯುಗದಲ್ಲಿಯೂ ಇಂತಹ ಸಂಪ್ರದಾಯಿಕ ಪದ್ಧತಿ, ದೈವಿಕ ನಂಬಿಕೆ ಜೀವಂತ ಆಗಿದೆ. ದೇಹ ದಂಡನೆ ಮಾಡಿಕೊಳ್ಳುವ ಮೂಲಕ ಭಕ್ತಿಯಲ್ಲಿ ದೇವರನ್ನು ಕಾಣುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ವಿಠ್ಠಲ ದರ್ಶನಕ್ಕೆ ಉರುಳು ಸೇವೆ:ಇತ್ತೀಚೆಗೆ ಭಕ್ತನೊಬ್ಬ ಮಹಾರಾಷ್ಟ್ರ ಪಂಢರಾಪುರದ ವಿಠ್ಠಲ ದರ್ಶನಕ್ಕೆ ಉರುಳು ಸೇವೆ ಸಲ್ಲಿಸುತ್ತ ಸಾಗಿಸುತ್ತಿದ್ದರು. ಇವರ ಕಾರ್ಯಕ್ಕೆ ಹಲವರು ಸಾಥ್​ ನೀಡುತ್ತಿದ್ದರು. ಉರುಳು ಸೇವೆ ಮಾಡುತ್ತಿರುವ ಭಕ್ತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇವನೂರಿನ ಗ್ರಾಮದ ಶಹಾಜಿ ಜಾಧವ್. ಇವರು ವಿಠ್ಠಲನ ಅಪ್ಪಟ ಭಕ್ತರಾಗಿದ್ದು, ಅನೇಕ ವರ್ಷಗಳಿಂದ ಪರಮ ಪವಿತ್ರ ವಾರಕರಿ ಸಂಪ್ರದಾಯದೊಂದಿಗೆ ಮುನ್ನಡೆಯುತ್ತಿದ್ದಾರೆ.

4 ಕಿ.ಮೀ ಸಂಚಾರ: ಅಥಣಿ ತಾಲೂಕಿನ ಸಪ್ತಸಾಗರದಿಂದ ಮಹಾರಾಷ್ಟ್ರದ ಪಂಢರಾಪುರದವರೆಗೆ ಉರುಳು ಸೇವೆ ಸಲ್ಲಿಸುತ್ತ ನಿತ್ಯ ನಾಲ್ಕು ಕಿ. ಮೀ ಉರುಳು ಸೇವೆ ಸಲ್ಲಿಸುತ್ತ ಒಂದು ತಿಂಗಳವರೆಗೆ ಬಿಡುವಿಲ್ಲದೇ ಪ್ರಯಾಣ ಬೆಳೆಸಿದ್ದಾರೆ. ಸುಮಾರು 220 ಕಿಲೋಮೀಟರ್ ದೂರದವರೆಗೆ ಊರು ಸೇವೆ ಮಾಡುತ್ತ ಲೋಕ ಕಲ್ಯಾಣಕ್ಕಾಗಿ ಭಕ್ತಿಯ ಪರಾಕಾಷ್ಠೆ ಮೆರೆಯುತಿದ್ದಾರೆ.

ಇದನ್ನೂ ಓದಿ:ಪಂಡರಾಪುರವರೆಗೆ ಉರುಳುಸೇವೆ ಕೈಗೊಂಡ ಭಕ್ತ: ತನು ಮನವೆಲ್ಲಾ ವಿಠ್ಠಲನ ನಾಮ

ABOUT THE AUTHOR

...view details