ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡುತ್ತಿರುವುದು ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರವು ಜನರಿಗೆ ಸುಳ್ಳು ಭರವಸೆ ನೀಡಿ, ಪೊಳ್ಳು ಘೋಷಣೆ ಮಾಡಿ, ಎಂಟು ಯೋಜನೆಗಳಿಗೆ ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆ ನೀಡಿರುವುದು ಮೋಸದ ಆಟವಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಸದನದಲ್ಲಿ ಸಿದ್ದರಾಮಯ್ಯನವರು ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ಮನ್ನಾ ಮಾಡುವ ಪ್ರಶ್ನೆ ಇಲ್ಲ. ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುತ್ತಿದ್ದೇವೆ. ಬಾಗಲಕೋಟೆ ಜಿಲ್ಲೆಯಲ್ಲಿ 2.58 ಲಕ್ಷ ರೈತರಿಗೆ 950 ಕೋಟಿ ರೂಪಾಯಿ ಹಣ ಡಿಸಿಸಿ ಬ್ಯಾಂಕಿನಿಂದ ಕೊಡುತ್ತಿರುವುದಕ್ಕೆ ಬಡ್ಡಿ ಇಲ್ಲ. ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 3 ಲಕ್ಷ ರೂಪಾಯಿಗಳವರೆಗೆ ಸಾಲ ಕೊಟ್ಟಿದ್ದೇವೆ. ಮುಂದೆ ಐದು ಲಕ್ಷದವರೆಗೆ ಬಡ್ಡಿ ಇಲ್ಲದ ಸಾಲ ಕೊಡುವ ಆಲೋಚನೆಯಿತ್ತು. ಆದರೆ, ಈಗಿನ ಸರ್ಕಾರ ಜನರೊಂದಿಗೆ ಮೋಸದಾಟ ಆಡುತ್ತಿದೆ" ಎಂದು ಆರೋಪಿಸಿದರು.
"2024-25ನೇ ಸಾಲಿನಲ್ಲಿ 5 ಸಾವಿರ ಕೋಟಿ ರೂಪಾಯಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೊಡುವುದಾಗಿ ಹೇಳಿದ್ದಾರೆ. ಈ ವರ್ಷದ ಬಜೆಟ್ನಲ್ಲಿ ಘೋಷಣೆ ಮಾಡಿದ ಹಣ ಬಿಡುಗಡೆ ಮಾಡಿ, ಅಭಿವೃದ್ಧಿ ಮಾಡಿ ಸಾಕು. ಆದರೆ, ಇದುವರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಇದು ಸಿದ್ದರಾಮಯ್ಯನವರ ಸುಳ್ಳು ಭರವಸೆ. ಪ್ರವಾಸ ತಾಣ ಸಹ ಅಭಿವೃದ್ಧಿ ಮಾಡುವುದಾಗಿ ಎಚ್ಕೆ ಪಾಟೀಲ್ ಹೇಳಿದ್ದಾರೆ. ಆದರೆ, ಅವರು ಕೂಡ ಸಿದ್ದರಾಮಯ್ಯನವರಂತೆಯೇ ಸುಳ್ಳು ಹೇಳಲು ಕಲಿತಿದ್ದಾರೆ" ಎಂದು ಕಿಡಿಕಾರಿದರು.
"ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಯೋಜನೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳು ಮಾಡುತ್ತೇವೆ ಎಂದಿದ್ದಾರೆ. ಆದರೆ ಕೈಗಾರಿಕೆಗೆ ಹತ್ತರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆ ಮುಚ್ಚುತ್ತಿದೆ. ಜನರು ಬೇರೆ ಕೆಲಸಕ್ಕಾಗಿ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಮೂಗಿನ ಮೇಲೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಕೃಷ್ಣ ಮೇಲ್ದಂಡೆ ಯೋಜನೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿವಾದ ಇದ್ದು, ಡಿಸೆಂಬರ್ 4ರಂದು ಅಂತಿಮ ತೀರ್ಪು ಬರುತ್ತಿತ್ತು. ಆದರೆ, ತೀರ್ಪು ನೀಡುವ ದಿನ ಮುಂದೂಡಲಾಗಿದೆ. ರಾಜ್ಯ ಸರ್ಕಾರ, ಸುಪ್ರಿಂ ಕೋರ್ಟ್ಗೆ ತೀರ್ಪು ಇರುವಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ, ಚರ್ಚೆ ಮಾಡುವುದಿಲ್ಲ. ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರಲಿದ್ದು, ನಮ್ಮ ಪರವಾಗಿ ಆಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ, ಗೋವಿಂದ ಕಾರಜೋಳ ಹಾಗೂ ಸಂಸದ ಪಿ.ಸಿ ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ವಂಟಮೂರಿನ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಕೃತ್ಯವನ್ನು ಖಂಡಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಜಿಲ್ಲೆಯಲ್ಲಿ ಇಂತಹ ಅವಮಾನೀಯ ಘಟನೆ ನಡೆದಿರುವುದು ಖಂಡಿಯವಾಗಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಬೆಳಗಾವಿ ಮಹಿಳಾ ವಿವಸ್ತ್ರ ಘಟನೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ