ಕರ್ನಾಟಕ

karnataka

ಭರತ್, ನೀರಜ್ ಅಬ್ಬರ: ತೆಲುಗು ಟೈಟಾನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಬೃಹತ್​ ಗೆಲುವು

By

Published : Nov 16, 2022, 7:35 AM IST

ವಿವೋ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡವು ಅಮೋಘ ಆಟ ಮುಂದುವರೆಸಿದ್ದು, ತೆಲುಗು ಟೈಟಾನ್ಸ್‌ರನ್ನು 49-38ರ ಅಂತರದಿಂದ ಮಣಿಸಿದೆ.

Pro Kabaddi League: Bengaluru Bulls won against Telugu Titans
ಭರತ್, ನೀರಜ್ ಅಬ್ಬರ: ತೆಲುಗು ಟೈಟಾನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಬೃಹತ್​ ಗೆಲುವು

ಪುಣೆ:ಭರತ್ ಮತ್ತು ನೀರಜ್ ನರ್ವಾಲ್ ಆರ್ಭಟದ ಆಟದಿಂದ ವಿವೋ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟಾನ್ಸ್‌ರನ್ನು 49-38ರ ಅಂತರದಿಂದ ಬಗ್ಗುಬಡಿಯಿತು. ಆರಂಭದಲ್ಲಿ ನಿಧಾನಗತಿಯಲ್ಲಿದ್ದ ಬುಲ್ಸ್ ಆಟಗಾರರು ಬಳಿಕ ಅಬ್ಬರದ ಪ್ರದರ್ಶನ ತೋರಿದರು.

ಒಂದೆಡೆ ನೀರಜ್ ನರ್ವಾಲ್ ಬುಲ್ಸ್ ತಂಡದ ಗೆಲುವಿಗೆ ಪ್ರಮುಖವಾಗಿ ಶ್ರಮಿಸಿದರೆ, ಬೆಂಗಳೂರು ತಂಡದ ಸಾಂಪ್ರದಾಯಿಕ ಎದುರಾಳಿ ಸಿದ್ಧಾರ್ಥ್ ದೇಸಾಯಿ ಅವರು ಟೈಟಾನ್ಸ್‌ಗೆ ಉತ್ತಮ ಆರಂಭ ನೀಡಿದರು. ಟೈಟಾನ್ಸ್‌ನ ಸ್ಕೋರ್ ಶೀಟ್‌ನಲ್ಲಿ ಸುರ್ಜೀತ್ ಸಿಂಗ್​ಗೂ ಮುನ್ನ ದೇಸಾಯಿ ದೇಸಾಯಿ ಮೊದಲ ಐದು ಅಂಕ ಕಬಳಿಸಿ ಮೇಲುಗೈ ಒದಗಿಸಿದ್ದರು.

ಆರಂಭಿಕ ಆಟದಲ್ಲಿ ಟೈಟಾನ್ಸ್ ತಂಡವು ಬುಲ್ಸ್​ಗಿಂತ ಮುನ್ನಡೆಯಲ್ಲಿತ್ತು. ಆದರೆ ಕಮ್​ಬ್ಯಾಕ್​ ಮಾಡಿದ ಬುಲ್ಸ್‌ ತಂಡವು ಭರತ್‌ ಮತ್ತು ವಿಕಾಶ್‌ ಕಂಡೋಲ ಅವರು ಭರ್ಜರಿ ಪ್ರದರ್ಶನದ ಮೂಲಕ ಹತ್ತು ನಿಮಿಷಗಳ ಅಂತರದಲ್ಲೇ ಮುನ್ನಡೆ ಸಾಧಿಸಿತು.

ಪಂದ್ಯದಲ್ಲಿ ರೈಡರ್‌ಗಳ ಆರ್ಭಟಕ್ಕೆ ಡಿಫೆಂಡರ್​ಗಳು ಮಂಕಾದರು. ಇದರಿಂದ ರೋಚಕ ಹಣಾಹಣಿ ಏರ್ಪಟ್ಟಿದ್ದು, ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಮೊದಲಾರ್ಧದ ಅಂತ್ಯಕ್ಕೂ ಮುನ್ನ ಟೈಟಾನ್ಸ್‌ನ ಸಿದ್ಧಾರ್ಥ್ ಸೂಪರ್ 10 ಪಡೆದರೆ, ಬುಲ್ಸ್​ ತಂಡಕ್ಕೆ ಭರತ್ ಬೆನ್ನೆಲುಬಾಗಿದ್ದರು. ಬುಲ್ಸ್ ವಿರುದ್ಧ ಟೈಟಾನ್ಸ್ ಒಂದು ಪಾಯಿಂಟ್‌ ಮುನ್ನಡೆಯೊಂದಿಗೆ ಮೊದಲಾರ್ಧ ಕೊನೆಗೊಂಡಿತು.

ನಿಧಾನಗತಿಯ ಆರಂಭದ ಬಳಿಕ ಬುಲ್ಸ್‌ನ ಡಿಫೆನ್ಸ್​ಗೆ ಮೋನು ಗೋಯಾಟ್​ರನ್ನು ಟ್ಯಾಕಲ್​ ಮಾಡಿದ ಬಳಿಕ ಮರುಜೀವ ಬಂದಿತು. ಆದರೆ, ಬಳಿಕ ಬುಲ್ಸ್​ನ ವಿಕಾಶ್ ಕಂಡೋಲಾ ಅವರನ್ನು ಟೈಟಾನ್ಸ್ ಡಿಫೆಂಡರ್‌ಗಳು ಹಿಮ್ಮೆಟ್ಟಿಸುವ ಮೂಲಕ ತಿರುಗೇಟು ನೀಡಿದರು. ನಂತರ ಬೆಂಗಳೂರು ತಂಡ ಭರತ್ ಅವರ ಸೂಪರ್​-10 ಹಾಗೂ ಆಲೌಟ್‌ನೊಂದಿಗೆ ಭಾರಿ ಮುನ್ನಡೆ ಪಡೆಯಿತು. ಟೈಟಾನ್ಸ್​ನ ಪ್ರಮುಖ ರೈಡರ್ ದೇಸಾಯಿ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಬುಲ್ಸ್ ಕೇವಲ 10 ನಿಮಿಷಗಳ ಅಂತರದಲ್ಲೇ 9 ಅಂಕಗಳ ಮುನ್ನಡೆ ಪಡೆಯಿತು.

ಆರಂಭಿಕ ಹಿನ್ನಡೆ ನಡುವೆಯೂ ಪಂದ್ಯದಲ್ಲಿ ಹಿಡಿತ ಮುಂದುವರೆಸಿದ ಬುಲ್ಸ್​, ಟೈಟಾನ್ಸ್ ತಂಡ ಪ್ರಬಲ ಪೈಪೋಟಿ ನಡುವೆಯೂ ಅಂತಿಮ ಹಂತದಲ್ಲಿ ಭರ್ಜರಿ ಆಟದ ಮೂಲಕ 49-38ರ ಅಂತರದಿಂದ ಗೆಲುವಿನ ಕೇಕೆ ಹಾಕಿತು. ಅಲ್ಲದೆ, ಪಾಯಿಂಟ್ಸ್​ ಪಟ್ಟಿಯಲ್ಲಿ 51 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. 49 ಅಂಕ ಹೊಂದಿರುವ ಪುಣೆರಿ ಪಲ್ಟಾನ್​ ದ್ವಿತೀಯ ಸ್ಥಾನದಲ್ಲಿದೆ.

ಜೈಪುರ ಪಿಂಕ್ ಪ್ಯಾಂಥರ್ಸ್ - ಯು ಮುಂಬಾ ಹಣಾಹಣಿ

ಪ್ಯಾಂಥರ್ಸ್ ಅಬ್ಬರಕ್ಕೆ ಬೆಚ್ಚಿದ ಯು ಮುಂಬಾ:ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಯು ಮುಂಬಾವನ್ನು 32-22 ಅಂತರದಿಂದ ಸೋಲಿಸಿತು. ಅರ್ಜುನ್ ದೇಶ್ವಾಲ್ 13 ಅಂಕ ಗಳಿಸುವ ಮೂಲಕ ಮತ್ತೊಮ್ಮೆ ಜೈಪುರ ತಂಡಕ್ಕೆ ಸ್ಟಾರ್ ಆಗಿ ಹೊರಹೊಮ್ಮಿದರು.

ಪಂದ್ಯದ 5ನೇ ನಿಮಿಷದಲ್ಲೇ ಯು ಮುಂಬಾವನ್ನು ಆಲೌಟ್​ ಮಾಡುವ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ 9-2ರಲ್ಲಿ ಬೃಹತ್ ಮುನ್ನಡೆ ಸಾಧಿಸಿತು. ನಂತರ, ಅರ್ಜುನ್ ದೇಶ್ವಾಲ್ ಸೂಪರ್ ರೈಡ್, ಜೊತೆಗೆ ಮೋಹಿತ್, ಶಿವಾಂಶ್ ಠಾಕೂರ್ ಮತ್ತು ಹರೇಂದ್ರ ಕುಮಾರ್ ಅವರನ್ನು ಕ್ಯಾಚ್ ಔಟ್ ಮಾಡುವ ಮೂಲಕ ಪಿಂಕ್ ಪ್ಯಾಂಥರ್ಸ್ 11ನೇ ನಿಮಿಷದಲ್ಲಿ 14-6ರಲ್ಲಿ ಶರವೇಗದ ಮುನ್ನಡೆ ಗಳಿಸಿತು.

ಮುಂಬೈ ತಂಡ ಮೊದಲಾರ್ಧಕ್ಕೂ ಮುನ್ನ ಸೂಪರ್ ಟ್ಯಾಕಲ್ ಪಡೆದರೂ ಸಹ ಪ್ಯಾಂಥರ್ಸ್ 19-11ರಲ್ಲಿ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಯು ಮುಂಬಾ ಹೆಚ್ಚು ದೃಢ ಆಟ ಪ್ರದರ್ಶಿಸಿತು. ಹರೇಂದ್ರ ಕುಮಾರ್ ಮತ್ತು ಕಿರಣ್ ಮಗರ್ ಟ್ಯಾಕಲ್ ಪಾಯಿಂಟ್‌ ಪಡೆದು ಉಭಯ ತಂಡಗಳ ನಡುವಿನ ಅಂತರ ತಗ್ಗಿಸಿದರು.

ಮುಂಬಾ ತಂಡ 32ನೇ ನಿಮಿಷದಲ್ಲಿ ರಾಹುಲ್ ಚೌಧರಿ ಅವರನ್ನು ಟ್ಯಾಕಲ್ ಮಾಡಿ 19-23ರಲ್ಲಿ ಜೈಪುರದ ಸ್ಕೋರ್‌ಗೆ ಇನ್ನಷ್ಟು ಸಮೀಪ ಬಂದಿತು. ಆದರೆ, ಪ್ಯಾಂಥರ್ಸ್ 35ನೇ ನಿಮಿಷದಲ್ಲಿ ಆಶಿಶ್ ಅವರನ್ನು ಟ್ಯಾಕಲ್ ಮಾಡಿ 25-20ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಬಳಿಕ ಜೈಪುರ ತಂಡ ಅಬ್ಬರದ ಸವಾರಿ ಮಾಡಿತಲ್ಲದೆ, ಪಂದ್ಯದ ಅಂತಿಮ ನಿಮಿಷದಲ್ಲಿ ಆಲೌಟ್ ಮಾಡಿ 31-20ರ ಬೃಹತ್ ಮುನ್ನಡೆ ಸಾಧಿಸಿತು. ಬಳಿಕ ಯು ಮುಂಬಾ ಸೋಲಿನತ್ತ ಮುಖಮಾಡಿತು.

ಇದನ್ನೂ ಓದಿ:ಭಾರತ ತಂಡಕ್ಕೆ ಮಹೇಂದ್ರ ಸಿಂಗ್​​ ಧೋನಿ ವಾಪಸ್​.. ಬಿಸಿಸಿಐನಿಂದ ಮಾಂತ್ರಿಕನಿಗೆ ದೊಡ್ಡ ಹೊಣೆ

ABOUT THE AUTHOR

...view details