ಕರ್ನಾಟಕ

karnataka

ಬಿಸಿಸಿಐ ಸ್ಥಾನವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ

By

Published : Jun 16, 2023, 8:18 AM IST

Updated : Jun 16, 2023, 9:47 AM IST

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಥಾನದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಮಾತನಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ

ಹೈದರಾಬಾದ್:ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸ್ಥಾನವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಡಳಿತ ಸಮಿತಿಯ ಅಧ್ಯಕ್ಷ ನಜಮ್ ಸೇಥಿ ಹೇಳಿದ್ದಾರೆ. ಗುರುವಾರ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) 2023ರ ಏಷ್ಯಾಕಪ್​ ಅನ್ನು ಹೈಬ್ರೀಡ್​ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದ ನಂತರ ನಜಮ್ ಸೇಥಿ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ನಜಮ್ ಸೇಥಿ, ' 15 ವರ್ಷಗಳ ನಂತರ ನಮ್ಮ ಪಾಕಿಸ್ತಾನಕ್ಕೆ ಏಷ್ಯಾಕಪ್ ಟೂರ್ನಿಯ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ನಮ್ಮ ಹೈಬ್ರಿಡ್ ಮಾದರಿಯನ್ನು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್ ಒಪ್ಪಿಕೊಂಡಿರುವುದು ಕೂಡ ಸಂತೋಷವಾಗಿದೆ. ಕಾರಣ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ನಿರಾಕರಿಸಿದ ಹಿನ್ನೆಲೆ ಹೈಬ್ರಿಡ್​ ಮಾದರಿ ಅಗತ್ಯವಾಗಿತ್ತು. ಹಾಗೇ ಏಷ್ಯಾದ ದೇಶಗಳಿಗೆ ಅವಕಾಶಗಳು ಮತ್ತು ವೇದಿಕೆ ನೀಡುವುದು ನಮ್ಮ ಗುರಿಯಾಗಿದೆ. ಈ ಮೂಲಕ ನಾವು ಒಟ್ಟಾಗಿ ಇತರ ದೇಶಗಳ ಪರಸ್ಪರರ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ' ಎಂದಿದ್ದಾರೆ.

’’ನಮ್ಮ ದೇಶದಲ್ಲಿ ಭಾರತ, ಪಾಕಿಸ್ತಾನ ಪಂದ್ಯ ನೋಡಲು ಕ್ರಿಕೆಟ್​ ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ, ಬಿಸಿಸಿಐನ ನಿಲುವು ನಮಗೆ ಅರ್ಥವಾಗಿದೆ. ಪಿಸಿಬಿಯಂತೆ ಬಿಸಿಸಿಐ ಕೂಡ ಗಡಿ ದಾಟಲು ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ ನಂತರ ಏಷ್ಯಾಕಪ್​ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸ ಬೇಕಾಗಿ ಬಂತು. ಹಾಗಾಗಿ ಹೈಬ್ರಿಡ್ ಮಾದರಿಯು ಉತ್ತಮ ಪರಿಹಾರವಾಗಿದೆ ಹಾಗೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ಬಲಪಡಿಸಿದ ಜೈ ಶಾ ಅವರ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ' ಎಂದು ನಜಮ್​ ಸೇಥಿ ಹೇಳಿದ್ದಾರೆ.

ಏಷ್ಯಾಕಪ್​ ಟೂರ್ನಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳದ ತಂಡಗಳ ನಡುವೆ ಒಟ್ಟು 13 ಏಕದಿನ ಪಂದ್ಯಗಳು ನಡೆಯಲಿವೆ. 13 ಪಂದ್ಯಗಳು ಪೈಕಿ, 4 ಪಂದ್ಯಗಳು ಪಾಕಿಸ್ತಾನದಲ್ಲಿ, ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಟೂರ್ನಿಯು ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಗಳು ನಡೆಯುವ ಸ್ಥಳಗಳು ಮತ್ತು ದಿನಾಂಕಗಳನ್ನು ಎಸಿಸಿ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:Asia Cup 2023: ಆಗಸ್ಟ್ 31ರಿಂದ ಹೈಬ್ರಿಡ್ ಮಾದರಿ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ; ಪಾಕ್​ನಲ್ಲಿ 4, ಲಂಕಾದಲ್ಲಿ 9 ಪಂದ್ಯ

Last Updated : Jun 16, 2023, 9:47 AM IST

ABOUT THE AUTHOR

...view details