ರಾಂಚಿ:ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇದೀಗ ಹೊಸ ಉದ್ಯೋಗಕ್ಕೆ ಕೈಹಾಕಿದ್ದು, ರಾಂಚಿಯಲ್ಲಿ ಈ ಕೆಲಸ ಮಾಡಲು ಈಗಾಗಲೇ ಸಜ್ಜಾಗಿದ್ದಾರೆ.
ರಾಂಚಿಯ ಫಾರ್ಮ್ ಹೌಸ್ನಲ್ಲಿ ಇದೀಗ ಮಹೇಂದ್ರ ಸಿಂಗ್ ಧೋನಿ ಮಧ್ಯಪ್ರದೇಶದ ಕಡಕ್ನಾಥ್ ತಳಿಯ ಕೋಳಿ ಸಾಕಣೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಎರಡು ಸಾವಿರ ಮರಿ ಆರ್ಡರ್ ಮಾಡಿದ್ದಾರೆ. ಕಡಕ್ನಾಥ್ ಕಪ್ಪು ಬಣ್ಣದ ಕೋಳಿಯಾಗಿದ್ದು, ಔಷಧೀಯ ಗುಣ ಹೊಂದಿರುವ ಈ ಕೋಳಿಯಲ್ಲಿ ಪ್ರೋಟಿನ್ ಅಂಶಗಳು ಹೆಚ್ಚಾಗಿರುತ್ತವೆ.
ಈಗಾಗಲೇ ತಮ್ಮ ಬಿಡುವಿನ ಸಮಯದಲ್ಲಿ ಕೃಷಿ ಕೆಲಸದಲ್ಲಿ ಬ್ಯುಸಿಯಾಗಿರುವ ಧೋನಿ ಸದ್ಯ ರಾಂಚಿಯಲ್ಲಿರುವ ಫಾರ್ಮ್ ಹೌಸ್ನಲ್ಲಿ ಕೋಳಿ ಸಾಕಾಣಿಕೆ ಮಾಡಲಿದ್ದಾರೆ. ಫಾರ್ಮ್ ಹೌಸ್ನಲ್ಲಿ ಕಲ್ಲಂಗಡಿ ಜತೆಗೆ ಈಗಾಗಲೇ ಅನೇಕ ಹಣ್ಣು, ತರಕಾರಿ ಬೆಳೆಯಲಾಗುತ್ತಿದ್ದು, ಅದರ ಜತೆಗೆ ಈ ಕೋಳಿ ಸಾಕಣೆ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್ 15ರೊಳಗೆ ಕೋಳಿ ಮರಿಗಳು ಇಲ್ಲಿಗೆ ಆಗಮಿಸಲಿವೆ ಎಂದು ತಿಳಿದು ಬಂದಿದೆ. ದುಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆಸಿರುವ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಿಲ್ಲ.