ಕರ್ನಾಟಕ

karnataka

ಶಾರ್ಜಾ ಮೈದಾನದ ಸ್ಟ್ಯಾಂಡ್​ಗೆ ಸಚಿನ್​ ತೆಂಡೂಲ್ಕರ್​ ಹೆಸರು: ಬರ್ತ್​ಡೇಗೆ ವಿಶೇಷ ಗಿಫ್ಟ್​

By

Published : Apr 25, 2023, 1:47 PM IST

ದುಬೈನ ಶಾರ್ಜಾ ಕ್ರಿಕೆಟ್​ ಸ್ಟೇಡಿಯಂನ ಸ್ಟ್ಯಾಂಡ್​ಗೆ ಸಚಿನ್​ ತೆಂಡೂಲ್ಕರ್​ ಹೆಸರಿಡಲಾಗಿದೆ. ಈ ಮೂಲಕ 50 ನೇ ಜನ್ಮದಿನದ ಸಂಭ್ರಮದಲ್ಲಿರುವ ಮಾಸ್ಟರ್​ ಬ್ಲಾಸ್ಟರ್​ಗೆ ವಿಶೇಷ ಗೌರವ ನೀಡಿದೆ.

ಶಾರ್ಜಾ ಮೈದಾನದ ಸ್ಟ್ಯಾಂಡ್​ಗೆ ಸಚಿನ್​ ತೆಂಡೂಲ್ಕರ್​ ಹೆಸರು
ಶಾರ್ಜಾ ಮೈದಾನದ ಸ್ಟ್ಯಾಂಡ್​ಗೆ ಸಚಿನ್​ ತೆಂಡೂಲ್ಕರ್​ ಹೆಸರು

ಶಾರ್ಜಾ:ದುಬೈನ ಶಾರ್ಜಾ ಕ್ರಿಕೆಟ್​ ಸಂಸ್ಥೆ ಕ್ರಿಕೆಟ್​​ ದೇವರು ಎಂದೇ ಖ್ಯಾತಿಯಾದ, ಭಾರತ ಕ್ರಿಕೆಟ್​ ದಂತಕಥೆ ಸಚಿನ್​ ತೆಂಡೂಲ್ಕರ್​ ಅವರ 50 ನೇ ಜನ್ಮದಿನ ಸಂಭ್ರಮಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಶಾರ್ಜಾ ಮೈದಾನದ ವೆಸ್ಟ್​​ ಸ್ಟ್ಯಾಂಡ್​ಗೆ ಮಾಸ್ಟರ್​ ಬ್ಲಾಸ್ಟರ್​ ಹೆಸರಿಟ್ಟಿದೆ. ಈ ಸ್ಟ್ಯಾಂಡ್​ ಇನ್ನು ಮುಂದೆ ಸಚಿನ್​ ತೆಂಡೂಲ್ಕರ್​ ಸ್ಟ್ಯಾಂಡ್​ ಎಂದೇ ಹೆಸರಾಗಲಿದೆ.

ಭಾರತೀಯ ಕ್ರಿಕೆಟ್ ದಂತಕಥೆಯ ಜನ್ಮದಿನದ ಅಂಗವಾಗಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನ ವೆಸ್ಟ್ ಸ್ಟ್ಯಾಂಡ್​ಗೆ 'ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್' ಎಂದು ಮರುನಾಮಕರಣ ಮಾಡಲಾಯಿತು. ಜನ್ಮದಿನ ಮಾತ್ರವಲ್ಲದೇ, 1998 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಬ್ಯಾಕ್​ ಟು ಬ್ಯಾಕ್​ ಶತಕಗಳನ್ನು ಬಾರಿಸಿ ರಂಜಿಸಿದ್ದರು. ಇದಕ್ಕೀಗ 25 ವರ್ಷ ತುಂಬಿದ್ದು, ಇದರ ಸ್ಮರಣಾರ್ಥ ಕಾರ್ಯಕ್ರಮ ನಡೆಸಲಾಗಿದೆ.

ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಕೋಕಾ-ಕೋಲಾ ಕಪ್‌ ತ್ರಿಕೋನ ಸರಣಿಯಲ್ಲಿ ಸಚಿನ್ ಈ ಮೈದಾನದಲ್ಲಿ ಲೀಗ್​ ಪಂದ್ಯದಲ್ಲಿ 143 ರನ್, ಎರಡು ದಿನಗಳ ನಂತರ ನಡೆದ ಫೈನಲ್‌ನಲ್ಲಿ 134 ರನ್ ಚಚ್ಚಿದ್ದರು. ಶತಕಗಳ ಶತಕದ ಸರದಾರನಾಗಿರುವ ಸಚಿನ್ ಏಕದಿನ ಮಾದರಿಯಲ್ಲೇ 49 ಶತಕಗಳನ್ನು ಗಳಿಸಿದ್ದಾರೆ. ಈವರೆಗೆಗೂ ಅವರು ವಿಶ್ವದ 34 ಕ್ರೀಡಾಂಗಣಗಳಲ್ಲಿ ಆಡಿದ್ದಾರೆ. ಶಾರ್ಜಾ ಕ್ರಿಕೆಟ್ ಮೈದಾನವೊಂದರಲ್ಲೇ 7 ಶತಕಗಳನ್ನು ಬಾರಿಸಿದ್ದಾರೆ. ಇದು ಅಭಿಮಾನಿಗಳ ನೆನಪಲ್ಲಿ ಅಚ್ಚಳಿಯಾಗಿ ಉಳಿದಿದೆ.

ಇನ್ನು ಸ್ಟ್ಯಾಂಡ್​ಗೆ ತಮ್ಮ ಹೆಸರಿಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿನ್, "ಈ ಕ್ಷಣ ನಾನು ಅಲ್ಲಿರಲು ಬಯಸುವೆ. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿರುವ ಕಾರಣ ಸಾಧ್ಯವಾಗುತ್ತಿಲ್ಲ. ಶಾರ್ಜಾದಲ್ಲಿ ಆಡುವುದು ಯಾವಾಗಲೂ ಉತ್ತಮ ಅನುಭವ ನೀಡುತ್ತದೆ. ರೋಮಾಂಚಕ ವಾತಾವರಣವಿರುವ ಅಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಬೆಂಬಲವಿರುತ್ತದೆ."

"ಶಾರ್ಜಾ ಮೈದಾನ ವಿಶ್ವದ ಕ್ರಿಕೆಟ್​ ಅಭಿಮಾನಿಗಳು ಮತ್ತು ಭಾರತೀಯ ಕ್ರೀಡಾ ಪ್ರೇಮಿಗಳಿಗೆ ವಿಶೇಷ ತಾಣವಾಗಿದೆ. ಇದು ನನಗೆ ಹಲವು ವಿಶೇಷ ಕ್ಷಣಗಳನ್ನು ಕಟ್ಟಿಕೊಟ್ಟಿದೆ. ತ್ರಿಕೋನ ಸರಣಿಯಲ್ಲಿನ ಶತಕಗಳಿಗೆ 25 ವಸಂತ ತುಂಬಿದೆ. ಅಲ್ಲದೇ, ನನ್ನ 50 ನೇ ಹುಟ್ಟುಹಬ್ಬ. ಇದು ಡಬಲ್​ ಧಮಾಕಾ. ಈ ದಿನವನ್ನು ವಿಶೇಷವಾಗಿಸಿದ್ದಕ್ಕೆ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು" ಎಂದಿದ್ದಾರೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಅತಿ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ (244) ಗಿನ್ನೆಸ್ ದಾಖಲೆಯನ್ನು ಹೊಂದಿದೆ. ಈ ಮೈದಾನ ಕ್ರಿಕೆಟ್ ಇತಿಹಾಸದ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಡೆಸರ್ಟ್ ಸ್ಟ್ರೋಮ್ ವಾರ್ಷಿಕೋತ್ಸವ, ಕ್ರಿಕೆಟ್​ಗೆ ಸಚಿನ್‌ ನೀಡಿದ ಕೊಡುಗೆಗಳಿಗೆ ಕೃತಜ್ಞತೆ ಹೇಳಲು ಇದೊಂದು ಸಣ್ಣ ಪ್ರಯತ್ನ ಎಂದು ಶಾರ್ಜಾ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ ಹೇಳಿದ್ದಾರೆ.

ಸಿಡ್ನಿ ಗೇಟ್​​ಗೆ ಸಚಿನ್​ ನಾಮ:ಮಾಸ್ಟರ್​ ಬ್ಲಾಸ್ಟರ್​ಗೆ ಜನ್ಮದಿನಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್​ ಸಂಸ್ಥೆ ಕೂಡ ವಿಶೇಷ ಗೌರವ ಸಲ್ಲಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದ ಗೇಟ್​ಗೆ ಕ್ರಿಕೆಟ್​ ದಂತಕಥೆಯ ಹೆಸರಿಟ್ಟಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 50ನೇ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದೆ. ಇದರ ಜೊತೆಗೆ ವೆಸ್ಟ್​ಇಂಡೀಸ್​ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರನ್ನೂ ಗೇಟ್​ಗೆ ನಾಮಕರಣ ಮಾಡಿ ಅನಾವರಣಗೊಳಿಸಿದೆ. ಇನ್ನು ಮುಂದೆ ಸಿಡ್ನಿ ಕ್ರೀಡಾಂಗಣದ ಗೇಟ್​ಗೆ ಲಾರಾ - ತೆಂಡೂಲ್ಕರ್ ಗೇಟ್ಸ್ ಎಂದು ಕರೆಯಲಾಗುತ್ತದೆ. ಲಾರಾ ಮತ್ತು ಸಚಿನ್​ರ ದಾಖಲೆಗಳುಳ್ಳ ಫಲಕವನ್ನು ಇಲ್ಲಿ ಹಾಕಲಾಗಿದೆ.

ಓದಿ:ಸಿಡ್ನಿ ಮೈದಾನದ ಗೇಟ್​ಗೆ ಸಚಿನ್​ ​ಹೆಸರು: ಕ್ರಿಕೆಟ್​ ಆಸ್ಟ್ರೇಲಿಯಾದಿಂದ ವಿಶೇಷ ಗೌರವ

ABOUT THE AUTHOR

...view details