ಕರ್ನಾಟಕ

karnataka

RCB vs KKR Eliminator: ಆರ್​​ಸಿಬಿಗೆ ಕೋಲ್ಕತ್ತಾ ಸವಾಲು, ಇಂದಿನ ಪಂದ್ಯ ಗೆಲ್ಲೋದ್ಯಾರು?

By

Published : Oct 11, 2021, 11:14 AM IST

Updated : Oct 11, 2021, 2:24 PM IST

clash-of-two-captains-kohlis-rcb-faces-morgans-kkr-in-ipl-eliminator

ಇಂದು ಯುಎಇನ ಶಾರ್ಜಾ ಮೈದಾನದಲ್ಲಿ ಕೆಕೆಆರ್​​ ಮತ್ತು ಆರ್​ಸಿಬಿ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲದಿಂದ ಕೂಡಿವೆ. ಉಭಯ ತಂಡದಲ್ಲೂ ಅಚ್ಚರಿ ಪ್ರದರ್ಶನ ನೀಡಬಲ್ಲ ಆಟಗಾರರಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಶಾರ್ಜಾ (ದುಬೈ): ಐಪಿಎಲ್​ ಸೀಸನ್ 14ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧ ಇಂದು ಸಂಜೆ ಕಣಕ್ಕಿಳಿಯಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಜಯಗಳಿಸುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿರ್ಣಾಯಕ ಪಂದ್ಯವಾಡಲಿದೆ. ಆ ಬಳಿಕ ಫೈನಲ್​ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ.

ಕೊಹ್ಲಿ ನಾಯಕತ್ವದಲ್ಲಿ ಕೊನೆಯ ಐಪಿಎಲ್​ ಟೂರ್ನಿ ಇದಾಗಿದ್ದು, ನಿರೀಕ್ಷೆಯಂತೆ ಪ್ರಶಸ್ತಿ ಗೆಲ್ಲುವ ತಂಡಗಳ ಸಾಲಿನಲ್ಲಿ ಆರ್​ಸಿಬಿ ಸಹ ಮುಂಚೂಣಿಯಲ್ಲಿದೆ. ಆದರೆ 2 ಬಾರಿ ಐಪಿಎಲ್​ ಟೈಟಲ್ ಗೆದ್ದಿರುವ ಕೆಕೆಆರ್ ಈ ಬಾರಿಯೂ ಫೈನಲ್ ಪ್ರವೇಶಿಸಿ ಮೂರನೇ ಬಾರಿ ಪ್ರಶಸ್ತಿ ಪಡೆಯುವ ಹಂಬಲದಲ್ಲಿದೆ.

ಆದರೆ, ಕೋಲ್ಕತ್ತಾ ತಂಡ ಗೌತಮ್ ಗಂಭೀರ್ ನಿರ್ಗಮನದ ಬಳಿಕ ಮಂಕಾಗಿದೆ. ನಾಯಕ ಇಯಾನ್ ಮಾರ್ಗನ್ ಕಳಪೆ ಫಾರ್ಮ್​​ನಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ. ಬೌಲಿಂಗ್ ವಿಭಾಗ ಉತ್ತಮವಾಗಿದ್ದು, ಆರಂಭಿಕರ ಹೊಡಿಬಡಿ ಆಟದಿಂದಾಗಿ ಕೋಲ್ಕತ್ತಾ ಪ್ಲೇ ಆಫ್ ತಲುಪಿದೆ.

ಟೂರ್ನಿಯಲ್ಲಿ ಸಮಬಲ:

ಕಳೆದೆರಡು ವರ್ಷದ 28 ಪಂದ್ಯಗಳಲ್ಲಿ ಕೆಕೆಆರ್ 15 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ. ಈ ವರ್ಷವೂ ಅಂಕಪಟ್ಟಿಯಲ್ಲಿ ಒಟ್ಟು 14 ಪಂದ್ಯದಲ್ಲಿ 7ರಲ್ಲಿ ಗೆಲುವು ಸಾಧಿಸಿ ಉಳಿದ 7 ಪಂದ್ಯ ಕೈಚೆಲ್ಲಿದೆ. ಈ ಮೂಲಕ 14 ಅಂಕಗಳಿಸಿ 4ನೇ ಸ್ಥಾನದಲ್ಲಿದೆ.

ಕೋಲ್ಕತ್ತಾ ತಂಡಕ್ಕೆ ಹೊಲಿಸಿದರೆ ಈ ವರ್ಷ ಆರ್​​​ಸಿಬಿ ಉತ್ತಮ ಲಯದಲ್ಲಿದೆ. ಆಡಿದ 14 ಪಂದ್ಯದಲ್ಲಿ 9 ಪಂದ್ಯ ಗೆದ್ದು, 5 ಪಂದ್ಯದಲ್ಲಿ ಸೋತಿದೆ. ಈ ಮೂಲಕ ಒಟ್ಟು 18 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ಆದರೆ ಟೂರ್ನಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳು ತಲಾ ಒಂದೊಂದು ಬಾರಿ ಗೆಲುವು ಕಂಡು ಸಮಬಲ ಸಾಧಿಸಿವೆ.

ಕೋಲ್ಕತ್ತಾ(KKR) ತಂಡದ ಲೂಕಿ ಫರ್ಗ್ಯೂಸನ್, ವೆಂಕಟೇಶ್ ಐಯ್ಯರ್​, ಶುಭಮನ್​ ಗಿಲ್, ಶಿವಂ ಮಾವಿ (ಕ್ರಮವಾಗಿ)

ಕೋಲ್ಕತ್ತಾ ತಂಡಕ್ಕೆ ಆರಂಭಿಕ ವೆಂಕಟೇಶ್ ಐಯ್ಯರ್​, ಶುಭಮನ್ ಗಿಲ್, ನಿತೀಶ್ ರಾಣಾ ಮತ್ತು ತ್ರಿಪಾಠಿ ಬ್ಯಾಟಿಂಗ್ ಬಲವಿದೆ. ಬೌಲಿಂಗ್ ವಿಭಾಗದಲ್ಲಿ ಶಿವಂ ಮಾವಿ, ಸುನೀಲ್ ನರೈನ್, ವರುಣ್ ಚಕ್ರವರ್ತಿ ಅತ್ಯುತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ತಂಡದಲ್ಲಿ ಐಯ್ಯರ್ ಹಾಗೂ ಗಿಲ್ ಕೀ ಪ್ಲೇಯರ್ಸ್ ಎನಿಸಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್ ಅಬ್ಬರ:

ಇತ್ತ ಆರ್​ಸಿಬಿ ಅಂಗಳದಲ್ಲಿ ಆರಂಭಿಕ ದೇವ್​ದತ್ ಪಡಿಕ್ಕಲ್ ಹಾಗೂ ನಾಯಕ ಕೊಹ್ಲಿ ಫಾರ್ಮ್​ನಲ್ಲಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಕೆ.ಎಸ್​​​.ಭರತ್ ಬಿರುಸಿನ ಆಟ ಪ್ರದರ್ಶಿಸಬಲ್ಲರು. ಎಬಿ ಡಿ ವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಎಂತಹ ಪರಿಸ್ಥಿತಿಯಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು. ಈಗಾಗಲೇ 4 ಅರ್ಧಶತಕ ಗಳಿಸಿರುವ ಮ್ಯಾಕ್ಸ್​ವೆಲ್ ಆರ್​​ಸಿಬಿಯ ಕೀ ಪ್ಲೇಯರ್​ ಆಗಿದ್ದಾರೆ. ಬರೀ ಬ್ಯಾಟಿಂಗ್​​​ನಲ್ಲಷ್ಟೇ ಅಲ್ಲ ಬೌಲಿಂಗ್​​​​ನಲ್ಲೂ ಮ್ಯಾಕ್ಸಿ ನೆರವಾಗುತ್ತಿದ್ದಾರೆ.

ಆರ್‌ಸಿಬಿ ಬ್ಯಾಟರ್‌ ಗ್ಲೆನ್ ಮ್ಯಾಕ್ಸ್​ವೆಲ್​

ಬೌಲಿಂಗ್ ವಿಭಾಗದಲ್ಲಿ ಆರ್​​ಸಿಬಿ ಕೊನೆಯ 5 ಓವರ್​ನಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕುವ ಮೂಲಕ ರನ್ ಹರಿವಿಗೆ ಕಡಿವಾಣ ಹಾಕುತ್ತಿದೆ. ಆದರೆ ಬ್ಯಾಟಿಂಗ್ ಪವರ್ ಪ್ಲೇನಲ್ಲಿ ಎದುರಾಳಿ ತಂಡ ಆರ್​ಸಿಬಿ ಬೌಲರ್​​​ಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯಲು ಬೌಲರ್​ಗಳು ವಿಫಲವಾಗುತ್ತಿರುವುದು ತಂಡಕ್ಕೆ ಹಿನ್ನಡೆಯೆಂದೇ ಹೇಳಬೇಕು.

ಆರ್‌ಸಿಬಿ ಬ್ಯಾಟರ್‌ ಎಬಿ ಡಿ ವಿಲಿಯರ್ಸ್​

ಆರ್​ಸಿಬಿ ಬೌಲಿಂಗ್ ಟ್ರಂಪ್​​ಕಾರ್ಡ್‌​ ಹರ್ಷಲ್ ಪಟೇಲ್ 30 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಜತೆಗೆ ಯಜುವೇಂದ್ರ ಚಾಹಲ್ ಫಾರ್ಮ್​ನಲ್ಲಿದ್ದರೆ, ಮೊಹಮ್ಮದ್ ಸಿರಾಜ್ ಎಕಾನಮಿ ಕಾಪಾಡಿಕೊಂಡಿದ್ದಾರೆ.

ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್

ಸಂಭಾವ್ಯ ತಂಡಗಳು ಇಂತಿವೆ..

ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB):ವಿರಾಟ್ ಕೊಹ್ಲಿ (ನಾ), ದೇವ್​​ದತ್ ಪಡಿಕ್ಕಲ್​, ಕೆ.ಎಸ್.ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್, ಎಬಿ ಡಿ ವಿಲಿಯರ್ಸ್, ಮೊಹಮ್ಮದ್ ಶಹಬಾಜ್ ಅಹಮ್ಮದ್​ ಸಿರಾಜ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್ ಹಾಗು ಯುಜುವೇಂದ್ರ ಚಹಲ್.

ಕೋಲ್ಕತ್ತಾ ನೈಟ್​ ರೈಡರ್ಸ್​(KKR):ಇಯಾನ್ ಮಾರ್ಗನ್ (ನಾ), ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಎಂ.ಪ್ರಸಿದ್ ಕೃಷ್ಣ, ಶಿವಂ ದುಬೆ, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಶಕೀಬ್ ಅಲ್ ಹಸನ್ ಹಾಗು ಸುನಿಲ್ ನರೈನ್.

Last Updated :Oct 11, 2021, 2:24 PM IST

ABOUT THE AUTHOR

...view details