ಕರ್ನಾಟಕ

karnataka

ಗಾಯಕ್ವಾಡ್ ಶತಕ ವ್ಯರ್ಥ; ಮ್ಯಾಕ್ಸ್‌ವೆಲ್ ಆಟಕ್ಕೆ ಒಲಿದ ಗೆಲುವು: ಆಸೀಸ್​ಗೆ ಸರಣಿ ಆಸೆ ಜೀವಂತ

By ETV Bharat Karnataka Team

Published : Nov 28, 2023, 7:09 PM IST

Updated : Nov 28, 2023, 11:07 PM IST

India vs Australia - 3rd T20I: ಅಸ್ಸೋಂನ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಗೆಲುವು ದಾಖಲಿಸಿದೆ.

Etv Bharat
Etv Bharat

ಗುವಾಹಟಿ (ಅಸ್ಸೋಂ):ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಗೆಲುವು ಸಾಧಿಸಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಮೂರನೇ ಪಂದ್ಯ ಸೋಲು ಕಂಡಿದೆ. ಈ ಮೂಲಕ 2-1ರಿಂದ ಕಾಂಗರೂ ಪಡೆ ಸರಣಿಯ ಆಸೆ ಜೀವಂತ ಇರಿಸಿಕೊಂಡಿದೆ.

ಅಸ್ಸೋಂನ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ರಂಭಿಕ ರುತುರಾಜ್ ಗಾಯಕ್ವಾಡ್ ಅಜೇಯ ಸ್ಫೋಟಕ ಶತಕ (123 ರನ್​)ದ ನೆರವಿನೊಂದಿಗೆ 20 ಓವರ್​ಗಳಲ್ಲಿ ಮೂರು ವಿಕೆಟ್​ ನಷ್ಟಕ್ಕೆ 222 ರನ್​ಗಳನ್ನು​ ಕಲೆ ಹಾಕಿತ್ತು. 223 ರನ್​ಗಳ ಬೃಹತ್​ ಟಾರ್ಗೆಟ್​ ಬೆನ್ನಟ್ಟಿದ್ದ ಆಸೀಸ್​ ತಂಡ 6.2 ಓವರ್​ಗಳಲ್ಲಿ 68 ರನ್​ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆರನ್ ಹಾರ್ಡಿ 16 ರನ್, ಟ್ರಾವಿಸ್ ಹೆಡ್ 35 ರನ್​ ಹಾಗೂ ಜೋಶ್ ಇಂಗ್ಲಿಸ್ 10 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ, ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್‌ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ ಮಾರ್ಕಸ್ ಸ್ಟೊಯಿನಿಸ್ 17 ರನ್​, ಟಿಮ್ ಡೇವಿಡ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಆದರೆ, ಹೊಡಿಬಡಿ ಆಟಕ್ಕೆ ಮುಂದಾದ ಮ್ಯಾಕ್ಸ್‌ವೆಲ್‌ ಕೇವಲ 48 ಎಸೆತಗಳಲ್ಲಿ 104 ಬಾರಿಸಿ ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಿಸಿದರು. ಅವರ ಅಜಯೇ ಸ್ಪೋಟಕ ಬ್ಯಾಟಿಂಗ್​ನಲ್ಲಿ ತಲಾ ಎಂಟು ಸಿಕ್ಸರ್​ಗಳು ಹಾಗೂ ಬೌಂಡರಿಗಳು ಒಳಗೊಂಡಿದ್ದವು. ನಾಯಕ ಮ್ಯಾಥ್ಯೂ ವೇಡ್ ಅಜೇಯ 21 ರನ್​ ಕಲೆ ಹಾಕಿದರು. ಭಾರತದ ಪರ ರವಿ ಬಿಷ್ಣೋಯ್ 2 ವಿಕೆಟ್​, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್​ ಪಡೆದರು.

ಗಾಯಕ್ವಾಡ್ ಶತಕ ವ್ಯರ್ಥ:ಇದಕ್ಕೂ ಮುನ್ನ ಭಾರತಬ್ಯಾಟಿಂಗ್ ಮಾಡಿ ಆರಂಭಿಕ ಆಘಾತ ಅನುಭವಿಸಿತ್ತು. ಯಶಸ್ವಿ ಜೈಸ್ವಾಲ್ ಕೇವಲ 6 ರನ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಇಶಾನ್ ಕಿಶನ್ ಶೂನ್ಯಕ್ಕೆ ಪೆವಿಲಿಯನ್​ ಸೇರಿದರು. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಆರಂಭಿಕ ರುತುರಾಜ್ ಗಾಯಕ್ವಾಡ್​ ಜೊತೆಗೂಡಿದರು. ಸೂರ್ಯ 29 ಎಸೆತಗಳಲ್ಲಿ ಎರಡು ಸಿಕ್ಸರ್​, ಐದು ಬೌಂಡರಿಗಳೊಂದಿಗೆ 39 ರನ್​ ಬಾರಿಸಿದರು. ನಾಯಕ ಸೂರ್ಯ ನಿರ್ಗಮಿಸುವ ಮೊದಲು ಈ ಜೋಡಿ 57 ರನ್‌ಗಳನ್ನು ಪೇರಿಸಿತು. ಮತ್ತೊಂದೆಡೆ, ಗಾಯಕ್ವಾಡ್​ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.

ಸೊಗಸಾದ ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿದ ನಂತರ ಸ್ಫೋಟಕ ಆಟ ಪ್ರದರ್ಶಿಸಿದರು. 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಗಾಯಕ್ವಾಡ್​, ನಂತರದ ಅರ್ಧಶತಕ ಬಾರಿಸಲು ಕೇವಲ 18 ಎಸತೆಗಳನ್ನು ತೆಗೆದುಕೊಂಡರು. ಇದರೊಂದಿಗೆ 51 ಬಾಲ್​ಗಳಲ್ಲಿ ಟಿ-20 ಪಂದ್ಯದಲ್ಲಿ ರುತುರಾಜ್ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್​ ಬೀಸಿದ ಅವರು, ಅಂತಿಮವಾಗಿ ಕೇವಲ 57 ಎಸೆತಗಳಲ್ಲಿ ಅಜೇಯ 123 ರನ್​ ಚಚ್ಚಿದರು.

ಮತ್ತೊಂದೆಡೆ, 24 ಬಾಲ್​ಗಳಲ್ಲಿ 31 ರನ್​ ಕಲೆ ಹಾಕಿ ತಿಲಕ್​ ವರ್ಮಾ ಕೂಡ ಉತ್ತಮ ಸಾಥ್​ ನೀಡಿದರು. ಕೊನೆಯ ಓವರ್​ಗಳಲ್ಲಿ ಗಾಯಕ್ವಾಡ್ ಹಾಗೂ ತಿಲಕ್ ಜೋಡಿ 59 ಎಸೆತಗಳಲ್ಲಿ 141 ರನ್​ಗಳನ್ನು ಪೇರಿಸಿತು. ಆಸೀಸ್​ನ ಆರನ್ ಹಾರ್ಡಿ 18ನೇ ಓವರ್‌ನಲ್ಲಿ 25 ರನ್‌ಗಳು ಹಾಗೂ ಮ್ಯಾಕ್ಸ್‌ವೆಲ್ ಅಂತಿಮ ಓವರ್‌ನಲ್ಲಿ 30 ರನ್‌ಗಳನ್ನು ಬಿಟ್ಟುಕೊಟ್ಟರು. ಜೇಸನ್ ಬೆಹ್ರೆಂಡಾರ್ಫ್, ಕೇನ್ ರಿಚರ್ಡ್ಸನ್, ಆರನ್ ಹಾರ್ಡಿ ತಲಾ ವಿಕೆಟ್​ ಪಡೆದರು.

ಎರಡನೇ ಗರಿಷ್ಠ ಬಾರಿಸಿದ ಆಟಗಾರ:ಟಿ-20 ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಎರಡನೇ ಅತಿಹೆಚ್ಚು ಬಾರಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರವಾದರು. ಇದೇ ವರ್ಷ ನ್ಯೂಜಿಲೆಂಡ್​ ವಿರುದ್ಧ ಶುಭಮನ್ ಗಿಲ್ 126 ರನ್​ ಬಾರಿಸಿದ್ದು ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಆಗ ರುತುರಾಜ್ ಗಾಯಕ್ವಾಡ್ 123 ರನ್​​ ಬಾರಿಸಿದ್ದಾರೆ. ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ಗರಿಷ್ಠ 122 ಕಲೆ ಹಾಕಿದ ಮೂರನೇ ಆಟಗಾರನ ಸ್ಥಾಪದಲ್ಲಿದ್ದಾರೆ. ಗಾಯಕ್ವಾಡ್ ಇಂದಿನ ಪಂದ್ಯದಲ್ಲಿ ಮೊದಲ 22 ಎಸೆತಗಳಲ್ಲಿ 22 ರನ್ ಗಳಿಸಿದ್ದರು. ನಂತರದ 35 ಎಸೆತಗಳಲ್ಲಿ 288.57 ಸರಾಸರಿಯಲ್ಲಿ 101 ರನ್ ಕಲೆ ಹಾಕಿ ಮಿಂಚಿದರು.

ಇದನ್ನೂ ಓದಿ:ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಖೋ ಖೋ ಆಟಗಾರರೆಂದ ಇಶಾನ್​ ಕಿಶನ್!: ವಿಡಿಯೋ ಹಂಚಿಕೊಂಡ ಬಿಸಿಸಿಐ

Last Updated :Nov 28, 2023, 11:07 PM IST

ABOUT THE AUTHOR

...view details