ಕರ್ನಾಟಕ

karnataka

ದಕ್ಷಿಣ ಆಫ್ರಿಕಾ ಪ್ರವಾಸದಿಂದ ಸ್ಮಿತ್​, ಸ್ಟಾರ್ಕ್​ ಔಟ್‌; ಏಕದಿನ ವಿಶ್ವಕಪ್‌ಗೆ ಆಸೀಸ್ ಭರ್ಜರಿ ತಯಾರಿ

By

Published : Aug 18, 2023, 5:53 PM IST

Australia team south Africa tour: ಏಕದಿನ ವಿಶ್ವಕಪ್​ಗೆ ಮುಂಚಿತವಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಆಸ್ಟ್ರೇಲಿಯಾ ತಂಡದಿಂದ ಸ್ಮಿತ್​ ಮತ್ತು ಸ್ಟಾರ್ಕ್​ ಅವರನ್ನು ಕೈ ಬಿಡಲಾಗಿದೆ.

Steve Smith, Mitchell Starc
Steve Smith, Mitchell Starc

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20, ಏಕದಿನ ಸರಣಿಯಿಂದ ಅನುಭವಿ ಆಟಗಾರರಾದ ಸ್ಟೀವ್​ ಸ್ಮಿತ್​ ಮತ್ತು ಮಿಚೆಲ್​ ಸ್ಟಾರ್ಕ್ ಅವರನ್ನು ಕೈಬಿಡಲಾಗಿದೆ. ಇಬ್ಬರು ಆಟಗಾರರು ವಿಶ್ವಕಪ್​ಗೂ ಮುನ್ನ ತಂಡ ಸೇರುತ್ತಾರೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

ಮಹತ್ವದ ಕಪ್​ ಆಡುವ ಮುನ್ನ ಇಬ್ಬರು ಅನುಭವಿಗಳು ಸಂಪೂರ್ಣ ಫಿಟ್​ ಆಗಿರಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಕ್ರಿಕೆಟ್ ಮಂಡಳಿ ಬಂದಿದೆ. ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮತ್ತು ಆ್ಯಶಸ್​ ಸರಣಿ ಆಡಿದೆ. ಸುಮಾರು ಎರಡು ತಿಂಗಳ ಕಾಲ ಆಸಿಸ್​ ಆಟಗಾರರು ಆರು ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಕೊನೆಯ ಆ್ಯಶಸ್​ ಪಂದ್ಯದ ವೇಳೆ ಸ್ಟೀವ್​ ಸ್ಮಿತ್​ ಅವರ ಎಡಗೈ ಮಣಿಕಟ್ಟಿನ ಸ್ನಾಯುವಿಗೆ ಪೆಟ್ಟಾಗಿದ್ದು ಅವರ ಚೇತರಿಕೆ ಇನ್ನೂ ನಾಲ್ಕು ವಾರಗಳು ಅಗತ್ಯ ಇದೆ ಎನ್ನಲಾಗಿದೆ. ಅದೇ ರೀತಿ ಸ್ಟಾರ್ಕ್​​ ಸಹ ತೊಡೆಯ ಗಾಯಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಆಫ್ರಿಕಾದ ವಿರುದ್ಧದ ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಿ ಸಂಪೂರ್ಣ ಗುಣಮುಖರಾಗಲು ಮಂಡಳಿ ಅವಕಾಶ ನೀಡಿದೆ.

ಈ ಇಬ್ಬರು ಆಟಗಾರರ ಅನುಪಸ್ಥಿತಿಯಲ್ಲಿ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸ್ಟಾರ್ಕ್​ ಬದಲು ಅನ್​ಕ್ಯಾಪ್ಡ್​ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಅವರನ್ನು ಟಿ20 ಮತ್ತು ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ. ಸ್ಟೀವ್​ ಬದಲಿಗೆ ಏಕದಿನ ಸರಣಿಗೆ ಮಾರ್ನಸ್​ ಲ್ಯಾಬುಶೇನ್​ ಮತ್ತು ಟಿ20ಗೆ ಆಷ್ಟನ್ ಟರ್ನರ್‌ರನ್ನು ಆಯ್ಕೆ ಮಾಡಲಾಗಿದೆ.

"ವಿಶ್ವ ಟೆಸ್ಟ್​ ಚಾಂಪಿಯನ್‌ ಶಿಪ್​ ಫೈನಲ್​ ಮತ್ತ ಆ್ಯಶಸ್​ ಸರಣಿ ಆಡಿದ ಪರಿಣಾಮ ಆಟಗಾರರ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತಿದೆ. ಇದು ವಿಶ್ವಕಪ್​ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಸ್ಟೀವ್​ ಸ್ಮಿತ್​ ಮತ್ತು ಮಿಚೆಲ್​ ಸ್ಟಾರ್ಕ್​ಗೆ ಬಿಡುವು ನೀಡಲು ಬಯಸಿದ್ದೇವೆ. ಇಬ್ಬರು ಆಟಗಾರರು ಭಾರತದ ವಿರುದ್ಧ ಆಡಲಿರುವ ಸರಣಿಯಲ್ಲಿ ತಂಡಕ್ಕೆ ಮರಳಲಿದ್ದಾರೆ. ಹಾಗೆಯೇ ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲೂ ತಂಡವನ್ನು ಪ್ರತಿನಿಧಿಸಲಿದ್ದಾರೆ" ಎಂದು ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಮಾಹಿತಿ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಟಿ20ಗೆ ಮೈಕೆಲ್ ಡಿ ವೆನುಟೊ ಮುಖ್ಯ ಕೋಚ್ ಆಗಿರುತ್ತಾರೆ. ಮಾಜಿ ಆಸೀಸ್ ಕ್ವಿಕ್ ಕ್ಲಿಂಟ್ ಮೆಕೆ ಮತ್ತು ಆಸ್ಟ್ರೇಲಿಯಾದ ಮಹಿಳಾ ತಂಡದ ಸಹಾಯಕ ಡಾನ್ ಮಾರ್ಷ್ ಅವರಿಗೆ ಸಹಾಯ ಮಾಡುತ್ತಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಶ್ಟನ್ ಟರ್ನರ್, ಆಡಮ್ ಝಂಪಾ

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಾಂಗ್ಹಾ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ

ಇದನ್ನೂ ಓದಿ:Jasprit Bumrah: ನಾನೀಗ ಸಂಪೂರ್ಣ ಫಿಟ್​ ಆಗಿದ್ದೇನೆ- ಜಸ್ಪ್ರೀತ್​ ಬುಮ್ರಾ

ABOUT THE AUTHOR

...view details