ವಾಷಿಂಗ್ಟನ್: ಸದ್ಯ Zoom ಅಥವಾ Google Meet ನಂತಹ ಅಪ್ಲಿಕೇಶನ್ಗಳಲ್ಲಿ ವಿಡಿಯೋ ಕರೆಗಳ ಲಿಂಕ್ ಕಳುಹಿಸುವ ಆಪ್ಷನ್ ಇರುವುದು ಸಾಮಾನ್ಯವಾಗಿದೆ. ಆದರೆ ಇದೀಗ ಜನಪ್ರಿಯ ಚಾಟಿಂಗ್ ಆ್ಯಪ್ ವಾಟ್ಸ್ ಆ್ಯಪ್ ಸಹ ಈ ಫೀಚರ್ ಅನ್ನು ಹೊರ ತರುತ್ತಿದ್ದು, ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಾಲ್ ಲಿಂಕ್ ಹಂಚಿಕೊಳ್ಳಬಹುದು.
ಮಾರ್ಕ್ ಜುಕರ್ಬರ್ಗ್ ಈ ಹೊಸ ಫೀಚರ್ ಬಗ್ಗೆ ಫೇಸ್ಬುಕ್ನಲ್ಲಿ ಘೋಷಿಸಿದ್ದು, ವಾಟ್ಸ್ ಆ್ಯಪ್ ಬಳಕೆದಾರರು ಒಂದೇ ಟ್ಯಾಪ್ನೊಂದಿಗೆ ಈ ಲಿಂಕ್ ಮೂಲಕ ವಾಟ್ಸ್ ಆ್ಯಪ್ ಕರೆಗಳಿಗೆ ಜಾಯಿನ್ ಆಗಬಹುದು. ಕಂಪನಿಯು 32 ಮಂದಿಗಳ ಎನ್ಕ್ರಿಪ್ಟ್ ಮಾಡಿದ ವಿಡಿಯೋ ಕರೆಗಳನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಕಂಪನಿಯು ಮೊದಲ ಬಾರಿಗೆ ವಿಸ್ತೃತ ಗ್ರೂಪ್ ಕಾಲ್ ಫೀಚರ್ ಅನ್ನು ಏಪ್ರಿಲ್ನಲ್ಲಿ ಘೋಷಿಸಿತ್ತು. ಆದರೆ ಈಗ ಅದನ್ನು ಸೀಮಿತ ಬಳಕೆದಾರರಿಗಾಗಿ ಹೊರತರುತ್ತಿದೆ.
ಕಾಲ್ಸ್ ಟ್ಯಾಬ್ ಅಡಿ ವಿಡಿಯೋ ಲಿಂಕ್ ಅನ್ನು ರಚಿಸುವ ಆಯ್ಕೆ ಇರಲಿದೆ. ಲಿಂಕ್ ಅನ್ನು ರಚಿಸಿದ ನಂತರ, ಅವರು ವಿಡಿಯೋ ಕರೆಗೆ ಸೇರಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಬಹುದು. ಈ ಹೊಸ ಫೀಚರ್ ಈ ವಾರದಿಂದಲೇ ವಾಟ್ಸ್ ಆ್ಯಪ್ನಲ್ಲಿ ಜಾರಿಗೆ ಬರಲಿದ್ದು, ಹೊಸ ಫೀಚರ್ಗಾಗಿ ನಿಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕಾಗಿದೆ.