ನವದೆಹಲಿ:ಇಸ್ರೇಲ್-ಹಮಾಸ್ ಯುದ್ಧಕ್ಕೆ ತಕ್ಷಣವೇ ಕದನ ವಿರಾಮ ಹಾಕಬೇಕು. ಮಾನವೀಯ ಒಪ್ಪಂದಕ್ಕೆ ಮುಂದಾಗಬೇಕು ಎಂಬ ವಿಶ್ವಸಂಸ್ಥೆಯ ನಿರ್ಣಯ ಮತದಾನದಿಂದ ಭಾರತ ದೂರ ಉಳಿದಿದೆ. ಸಾಮಾನ್ಯ ಸಭೆಯಲ್ಲಿ ಇಂದು ನಡೆದ ಮತದಾನದಲ್ಲಿ ಭಾರತ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ನೆರವನ್ನು ಎತ್ತಿಹಿಡಿಯುವುದು ಎಂಬ ಶೀರ್ಷಿಕೆಯ ವಿಶ್ವಸಂಸ್ಥೆ ನಿರ್ಣಯವನ್ನು ತೆಗೆದುಕೊಂಡಿತು. ಈ ವೇಳೆ ನಡೆದ ಮತದಾನದಲ್ಲಿ ಭಾರತ ಸೇರಿದಂತೆ 45 ರಾಷ್ಟ್ರಗಳು ತಟಸ್ಥ ನಿಲುವು ತಳೆದರೆ, 120 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಅಮೆರಿಕ, ಇಸ್ರೇಲ್ ಸೇರಿದಂತೆ ಇತರ 14 ದೇಶಗಳು ನಿರ್ಣಯದ ವಿರುದ್ಧ ಮತ ಹಾಕಿದವು.
ನಾಗರಿಕರು ಮತ್ತು ಗಾಜಾದ ರಕ್ಷಣೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಅಡಿಯಲ್ಲಿ ಇಸ್ರೇಲ್ ತಕ್ಷಣವೇ ಯುದ್ಧ ನಿಲ್ಲಿಸಬೇಕು. ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ನೆರವು ಸಿಬ್ಬಂದಿ, ಮಾನವೀಯ ಸೌಲಭ್ಯಗಳು, ಅಗತ್ಯ ವಸ್ತುಗಳ ಸರಬರಾಜಿಗೆ ಅವಕಾಶ ನೀಡಬೇಕು. ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ನೆರವು ಸಿಬ್ಬಂದಿಗೆ ಗಾಜಾ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ನಿರ್ಣಯದಲ್ಲಿ ಕೋರಲಾಗಿದೆ.
ಭಯೋತ್ಪಾದಕ ದಾಳಿ ನಡೆಸಿದ ಪ್ಯಾಲೆಸ್ಟೈನಿಯನ್ ಉಗ್ರಗಾಮಿ ಗುಂಪಾದ ಹಮಾಸ್ ಅನ್ನು ಖಂಡಿಸಲು ವಿಶ್ವಸಂಸ್ಥೆ ವಿಫಲವಾದ ಕಾರಣ, ಭಾರತ ನಿರ್ಣಯದ ಮೇಲೆ ನಡೆದ ಮತದಾನದಿಂದ ದೂರವಿತ್ತು. ಇದರ ಜೊತೆಗೆ ಹಮಾಸ್ ವಿರುದ್ಧ ಭಾರತ ಸಲ್ಲಿಸಿದ ಪ್ರಸ್ತಾಪನೆಯನ್ನೂ ಸಭೆ ತಿರಸ್ಕರಿಸಿತು.
ಭಾರತದ ಮೇಲೆ ಪ್ರಭಾವವೇನು?:ಯುದ್ಧದಲ್ಲಿ ಭಾರತ ಈಗಾಗಲೇ ಇಸ್ರೇಲ್ಗೆ ಬೆಂಬಲ ಘೋಷಿಸಿದೆ. ಈಗ ವಿಶ್ವಸಂಸ್ಥೆಯಲ್ಲಿ ನಡೆದ ನಿರ್ಣಯದಿಂದ ತಟಸ್ಥ ಧೋರಣೆ ತಳೆಯಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ದೇಶದ ಮೇಲೆ ಪ್ರಭಾವ ಬೀರುತ್ತವೆಯೇ ಎಂಬ ಊಹಾಪೋಹ ಮೂಡಿದೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಯಾವುದೇ ಸಮಸ್ಯೆಗೆ ದೇಶ ಒಳಗಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.