ETV Bharat / international

ಇಸ್ರೇಲ್​ - ಹಮಾಸ್​ ಸಂಘರ್ಷ: ಗಾಜಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಿಬ್ಬಂದಿಯ ಸಂಪರ್ಕ ಕಡಿತ

author img

By ETV Bharat Karnataka Team

Published : Oct 28, 2023, 2:07 PM IST

ಇಸ್ರೇಲ್​ ಗಾಜಾ ಪಟ್ಟಿ ಮೇಲೆ ತನ್ನ ದಾಳಿ ಮುಂದುವರೆಸಿದ್ದು, ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಮತ್ತು ಯುನಿಸೆಫ್​ನ ಸಿಬ್ಬಂದಿ ಸಂಪರ್ಕ ಕಳೆದುಕೊಂಡಿದ್ದಾರೆ.

who-unicef-lost-touch-with-ground-staff-in-gaza-as-israel-ups-attacks
ಇಸ್ರೇಲ್​ - ಹಮಾಸ್​ ಸಂಘರ್ಷ : ಗಾಜಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಿಬ್ಬಂದಿಯ ಸಂಪರ್ಕ ಕಡಿತ

ಜಿನೇವಾ (ಸ್ವಿಟ್ಜರ್​ಲ್ಯಾಂಡ್​​) : ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್​ ಹಮಾಸ್​ ಉಗ್ರರ ನಡುವೆ ಕಳೆದೆರಡು ವಾರಗಳಿಂದ ಸಂಘರ್ಷ ನಡೆಯುತ್ತಿದೆ. ಇಸ್ರೇಲ್​ ಹಮಾಸ್​ ಉಗ್ರರ ಮೇಲೆ ದಾಳಿ ಮುಂದುವರೆಸಿದ್ದು, ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ಮುಂದುವರೆಸಿದೆ. ಇಸ್ರೇಲ್​ನ ವೈಮಾನಿಕ ದಾಳಿಯಿಂದಾಗಿ ಗಾಜಾಪಟ್ಟಿಯಲ್ಲಿ ಪರಿಹಾರ ನಡೆಸಲು ಅಡ್ಡಿ ಉಂಟಾಗಿದೆ. ಕಳೆದ ಅಕ್ಟೋಬರ್​ 7ರಿಂದ ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್​ ಹಮಾಸ್​ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದ್ದು, ಉಭಯ ದೇಶಗಳ ಯುದ್ಧದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್​ ಸೇನಾಪಡೆ ತನ್ನ ದಾಳಿಯನ್ನು ಮುಂದುವರೆಸಿದೆ.

ಇದರ ನಡುವೆ ಗಾಜಾಪಟ್ಟಿಯಲ್ಲಿ ಯುದ್ಧದಿಂದ ನಿರಾಶ್ರಿತರಾಗಿರುವ ಜನರಿಗೆ ಮಾನವೀಯ ನೆರವನ್ನು ನೀಡಲು ಹಲವು ರಾಷ್ಟ್ರಗಳು ಮುಂದೆ ಬಂದಿವೆ. ಇದರ ಜೊತೆಗೆ ಭಾರತವು ಹಲವು ಅಗತ್ಯ ವಸ್ತುಗಳನ್ನು ಪೂರೈಸಿದೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಗಾಜಾದಲ್ಲಿನ ನಿರಾಶ್ರಿತರಿಗೆ ಅಗತ್ಯ ನೆರವುಗಳನ್ನು ನೀಡುತ್ತಿದ್ದಾರೆ. ಆದರೆ, ಇದೀಗ ಇಸ್ರೇಲ್​ ತನ್ನ ದಾಳಿಯನ್ನು ಹೆಚ್ಚಿಸಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ಗಾಜಾದಲ್ಲಿ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುವ ಸಿಬ್ಬಂದಿಯೊಂದಿಗೆ, ಆರೋಗ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಕಡಿತಗೊಂಡಿರುವುದಾಗಿ ಎಂದು ಹೇಳಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ವಿಶ್ವ ಆರೋಗ್ಯ ಸಂಸ್ಥೆಯು ಗಾಜಾದಲ್ಲಿ ನೆರವು ನೀಡುತ್ತಿದ್ದ ತನ್ನ ಸಿಬ್ಬಂದಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ನಮ್ಮ ಸಿಬ್ಬಂದಿ ಗಾಜಾದಲ್ಲಿ ನಿರಾಶ್ರಿತರಿಗೆ ನೆರವು ನೀಡುತ್ತಿದ್ದರು. ಸಿಬ್ಬಂದಿಗಳ ಸಂಪರ್ಕ ಕಡಿತಗೊಂಡಿರುವುದು ಅವರ ರಕ್ಷಣೆ ಮತ್ತು ಇತರ ನಿರಾಶ್ರಿತರ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಈ ಕೂಡಲೇ ಇವರ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಜೊತೆಗೆ ಯುನಿಸೆಫ್​ ಕೂಡ ಗಾಜಾದಲ್ಲಿ ನಿರಾಶ್ರಿತರಿಗೆ ನೆರವು ನೀಡುತ್ತಿರುವ ಸಿಬ್ಬಂದಿಗಳೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ಅವರು, ನಾವು ಗಾಜಾದಲ್ಲಿರುವ ನಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದೇವೆ. ಇದರಿಂದಾಗಿ ನಮ್ಮ ಸಹೋದ್ಯೋಗಿಗಳು ಮತ್ತು ಅಲ್ಲಿನ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ. ಇಲ್ಲಿರುವ ಎಲ್ಲ ನಾಗರಿಕರಿಗೆ ರಕ್ಷಣೆ ನೀಡಬೇಕೆಂದು ತಿಳಿಸಿದ್ದಾರೆ.

ಇದರ ಜೊತೆಗೆ ಗಾಜಾಪಟ್ಟಿಯಲ್ಲಿ ನಿರಾಶ್ರಿತರಾಗಿರುವವರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್​, ಗಾಜಾದ ಮೇಲೆ ನಡೆದಿರುವ ದಾಳಿಯಿಂದಾಗಿ ಸುಮಾರು 2 ಮಿಲಿಯನ್​ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಜಾದಲ್ಲಿ ನೆರವಿನ ಅವಶ್ಯಕತೆಗಳು ಹೆಚ್ಚುತ್ತಲೇ ಇದೆ. ಇಲ್ಲಿನ ನಿರಾಶ್ರಿತರಿಗೆ ಆಹಾರ, ನೀರು, ಔಷಧ ಮತ್ತು ಇಂಧನ ಪೂರೈಕೆಗೆ ಸಹಕರಿಸಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ ಇಸ್ರೇಲ್​ ಹಮಾಸ್​ ಮೇಲಿನ ದಾಳಿ ಮುಂದುವರೆಸಿದ್ದು, ವೈಮಾನಿಕ ದಾಳಿ ಮತ್ತು ಭೂ ದಾಳಿಯನ್ನು ನಡೆಸುತ್ತಿದೆ.

ಇದನ್ನೂ ಓದಿ : ಇಸ್ರೇಲ್​ - ಪ್ಯಾಲೆಸ್ಟೇನ್​ ಹಮಾಸ್ ಸಂಘರ್ಷ : ಹಿಂಸಾಚಾರ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ​ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.